ಬಾಂದಾ ಜಿಲ್ಲೆಗೆ ಭೇಟಿ ಕೊಟ್ಟು, ಅಲ್ಲಿನ ಸರ್ಕಿಟ್ ಹೌಸ್ನಲ್ಲಿ ತಂಗಿದ್ದ ಉತ್ತರ ಪ್ರದೇಶ ಸಚಿವರಿಗೆ ಇಲಿ ಕಚ್ಚಿದ್ದರಿಂದ, ಅವರನ್ನು ಲಖನೌದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಅವರನ್ನು ಡಿಸ್ಚಾರ್ಜ್ ಮಾಡಿದ್ದು, ಸದ್ಯ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಯುವಜನ ಅಭಿವೃದ್ಧಿ ಮತ್ತು ಕ್ರೀಡಾ ಸಚಿವ ಗಿರೀಶ್ ಚಂದ್ರ ಯಾದವ್ ಅವರು ಬಾಂದಾ ಜಿಲ್ಲೆಗೆ ತೆರಳಿದ್ದರು. ರಾತ್ರಿ ಮಾವೈ ಬೈಪಾಸ್ನಲ್ಲಿರುವ ಒಂದು ಸರ್ಕಿಟ್ ಹೌಸ್ನಲ್ಲಿ ಉಳಿದುಕೊಂಡಿದ್ದರು. ಆದರೆ ರಾತ್ರಿ ಅವರಿಗೆ ಇಲಿ ಕಚ್ಚಿದೆ. ಅದಾಗಿ ಸ್ವಲ್ಪ ಹೊತ್ತಾದ ಬಳಿಕ ಅವರು ತುಸು ಅಸ್ವಸ್ಥರಾದಂತೆ ಕಂಡುಬಂದರು. ಹೀಗಾಗಿ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸಚಿವರ ಕೈಯಿಯ ಮೇಲೆ ಏನೋ ಕಚ್ಚಿದ ಗುರುತು ಆಗಿದೆ. ಬಲಗೈ ಬೆರಳಿಗೆ ಸರಿಯಾಗಿ ಗುರುತಾಗಿದೆ. ಸ್ಥಳದಲ್ಲಿ ಪರಿಶೀಲನೆ ಮಾಡಿದಾಗ ಇಲಿ ಇದ್ದಿದ್ದು ಕಂಡುಬಂದಿದೆ ಎಂದು ಹೇಳಿದ್ದಾರೆ. ಸೋಮವಾರ ಮುಂಜಾನೆ 3 ಗಂಟೆಯಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ. ಎಸ್.ಎನ್.ಮಿಶ್ರಾ ತಿಳಿಸಿದ್ದಾರೆ.
ಈ ಸರ್ಕೀಟ್ ಹೌಸ್ ಇರುವುದು ಒಂದು ಅರಣ್ಯ ಪ್ರದೇಶದಲ್ಲಿ. ಹಾಗಾಗಿ ಮೊದಲು ಏನೋ ಕಚ್ಚಿದಾಗ ಸಚಿವರು ಯಾವುದೋ ಹಾವೋ, ಚೇಳೋ ಕಚ್ಚಬಹುದು ಎಂದೇ ಭಾವಿಸಿದ್ದರು. ಅಂದಹಾಗೇ, ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆಯ ಮೇರೆಗೆ ಬಾಂದಾ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು. ಸರ್ಕಾರದ ಆಡಳಿತದ ಬಗ್ಗೆ ಅಲ್ಲಿನ ಜನರಿಗೆ ಇರುವ ಅಭಿಪ್ರಾಯವೇನು? ಜನರ ಫೀಡ್ಬ್ಯಾಕ್ ಏನು ಎಂಬುದನ್ನು ತಿಳಿದು, ಕುಂದುಕೊರತೆ ಆಲಿಸಲು ಅವರು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು. ಹಾಗೇ, ಜಿಲ್ಲೆಗಳಿಗೆ, ಯಾವುದೇ ಹಳ್ಳಿಗಳಿಗೆ ಭೇಟಿಕೊಡುವ ಸಚಿವರು, ಸರ್ಕಾರಿ ಅಧಿಕಾರಿಗಳು ಅಲ್ಲಿಯೇ ತಂಗುವ ಸಂದರ್ಭ ಬಂದಾಗ ಹೋಟೆಲ್ಗಳ ಬದಲಿಗೆ ಸರ್ಕಾರಿ ವ್ಯವಸ್ಥೆಯಲ್ಲೇ ಇರಬೇಕು ಎಂದು ಇತ್ತೀಚೆಗಷ್ಟೇ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ: Watch: ಕಪ್ಪು ಸಮುದ್ರದಲ್ಲಿ ರಷ್ಯಾದ ಗಸ್ತು ದೋಣಿಗಳನ್ನು ಹೊಡೆದುರುಳಿಸಿದ್ದೇವೆ ಎಂದ ಉಕ್ರೇನ್
Published On - 5:25 pm, Mon, 2 May 22