ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಂದು ಇಸ್ಲಾಂ ತೊರೆದು ಹಿಂದು ಧರ್ಮಕ್ಕೆ ಸೇರ್ಪಡೆಯಾದರು. ಘಾಜಿಯಾಬಾದ್ನಲ್ಲಿರುವ ದಾಸ್ನಾ ದೇವಿ ದೇಗುಲದಲ್ಲಿ, ಅಲ್ಲಿನ ಮುಖ್ಯ ಅರ್ಚಕ ಸ್ವಾಮಿ ಯರಿ ನರ್ಸಿಂಗಾನಂದ ಅವರು ರಿಜ್ವಿ ಅವರಿಗೆ ಹಿಂದುತ್ವ ಬೋಧನೆ ಮಾಡಿದ್ದಾರೆ. ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ಬಳಿಕ ರಿಜ್ವಿ ಅವರ ಹೆಸರು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂದು ಬದಲಾಗಿದೆ. ಮತಾಂತರದ ಬಳಿಕ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ರಿಜ್ವಿ, ನಾನು ಇಸ್ಲಾಂನಿಂದ ತೆಗೆದುಹಾಕಲಾಯಿತು. ನನ್ನ ಜೀವ ತೆಗೆದವರಿಗೆ ನೀಡುವ ಬಹುಮಾನದ ಮೊತ್ತವನ್ನು ಪ್ರತಿ ಶುಕ್ರವಾರವೂ ಏರಿಸಲಾಗುತ್ತಿತ್ತು. ಇದೀಗ ನಾನು ಸನಾತನ ಧರ್ಮವನ್ನು ಒಪ್ಪಿ-ಅಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ರಿಜ್ವಿ ಹಿಂದು ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಮಾತನಾಡಿದ ಅಖಿಲ ಭಾರತೀಯ ಹಿಂದು ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್, ಮುಸ್ಲಿಂ ನಾಯಕರಾಗಿದ್ದ ವಾಸಿಂ ರಿಜ್ವಿ ಅವರು ಹಿಂದು ಧರ್ಮ ಸ್ವೀಕಾರ ಮಾಡಲು ಮುಂದಾಗಿದ್ದು ಸ್ವಾಗತಾರ್ಹ. ಅವರೀಗ ಹಿಂದೂ ಸನಾತನ ಧರ್ಮದ ಭಾಗವಾಗಿದ್ದಾರೆ. ಯಾವುದೇ ಮತಾಂಧರಿಗೂ ಈಗ ಅವರ ವಿರುದ್ಧ ಫತ್ವಾ ಹೊರಡಿಸಲು ಸಾಧ್ಯವಿಲ್ಲ. ಹಾಗಿದ್ದಾಗ್ಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇಸ್ಲಾಂ ಕೆಂಗಣ್ಣಿಗೆ ಗುರಿಯಾಗಿದ್ದ ರಿಜ್ವಿ
ವಾಸಿಂ ರಿಜ್ವಿ ಇತ್ತೀಚೆಗೆ ಒಂದೆರಡು ವಿವಾದ ಸೃಷ್ಟಿಸಿಕೊಂಡಿದ್ದರು. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ನಲ್ಲಿರುವ ಕೆಲವು ಆಯ್ದ ಭಾಗಗಳು ಹಿಂಸಾಚಾರವನ್ನು ಬೋಧಿಸುತ್ತವೆ. ಹಾಗಾಗಿ ಅವುಗಳನ್ನು ತೆಗೆದುಹಾಕಬೇಕು ಎಂದು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹಾಗಂತ ಸುಪ್ರೀಂಕೋರ್ಟ್ ಅವರ ಅರ್ಜಿಯನ್ನು ಮಾನ್ಯ ಮಾಡಿರಲಿಲ್ಲ. ಅದನ್ನು ತಿರಸ್ಕರಿಸಿತ್ತು. ಇದಾದ ಬಳಿಕ ಅವರಿಗೆ ಬೆದರಿಕೆ ಕರೆಗಳು ಜಾಸ್ತಿಯಾಗಿದ್ದವು.
ಅಷ್ಟೇ ಅಲ್ಲದೆ, ಇತ್ತೀಚೆಗೆ ರಿಜ್ವಿ ಮೊಹಮ್ಮದ್ ಎನ್ನುವ ಒಂದು ಪುಸ್ತಕ ಬಿಡುಗಡೆ ಮಾಡಿದ್ದರು. ಅದರಲ್ಲಿ ಪ್ರವಾದಿ ಮೊಹಮ್ಮದರ ವಿರುದ್ಧ ಆಕ್ಷೇಪಣೀಯ ಭಾಷೆ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ರಿಜ್ವಿ ವಿರುದ್ಧ ಹೈದರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗೇ, ರಿಜ್ವಿಯ ಈ ನಡವಳಿಕೆ ಹಿಂದೆ ಇಸ್ಲಾಂ ವಿರೋಧಿ ಶಕ್ತಿಗಳಿವೆ ಎಂದೂ ಆರೋಪ ಮಾಡಿದ್ದರು. ಜೀವ ಬೆದರಿಕೆ ಇನ್ನಷ್ಟು ಜಾಸ್ತಿಯಾಗಿತ್ತು.
ಇದನ್ನೂ ಓದಿ: ಮ್ಯಾನ್ಮಾರ್ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷ ಜೈಲು ಶಿಕ್ಷೆ; ಪ್ರತಿಭಟನಾ ನಿರತರ ಮೇಲೆ ಟ್ರಕ್ ಹರಿಸಿದ ಸೇನೆ
Published On - 1:45 pm, Mon, 6 December 21