Uttarakhand Glacier Burst ಕರಗುತ್ತಿದೆ ಹಿಮಾಲಯ; ತಾಪಮಾನ ಏರಿಕೆಗೆ ಏನು ಕಾರಣ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 6:07 PM

ಬೇಸಿಗೆ ಕಾಲದಲ್ಲಿ ಹಿಮಕರಗುವಿಕೆ ಸಾಮಾನ್ಯವಾಗಿದ್ದರೂ, ಹಿಮನದಿಗಳಲ್ಲಿನ ನೀರ್ಗಲ್ಲುಗಳ ಕರಗುವಿಕೆ ಕಳೆದ 10 ವರ್ಷಗಳಲ್ಲಿ ಜಾಸ್ತಿಯಾಗಿದೆ. ಈ ರೀತಿ ಹೆಚ್ಚಿನ ಪ್ರಮಾಣದಲ್ಲಿ ಹಿಮಕರಗಿದರೆ ನೀರಿನ ಕೊರತೆಯುಂಟಾಗಬಹುದು.

Uttarakhand Glacier Burst ಕರಗುತ್ತಿದೆ ಹಿಮಾಲಯ; ತಾಪಮಾನ ಏರಿಕೆಗೆ ಏನು ಕಾರಣ?
ಹಿಮಾಲಯ
Follow us on

ದೆಹಲಿ: 21ನೇ ಶತಮಾನದ ಆರಂಭದಿಂದಲೇ ಹಿಮಾಲಯದಲ್ಲಿನ ಹಿಮ ಕರಗುವಿಕೆ ದ್ವಿಗುಣಗೊಂಡಿದೆ. ತಾಪಮಾನ ಏರಿಕೆಯಿಂದಾಗಿ ಪ್ರತಿವರ್ಷವೂ ಅರ್ಧದಷ್ಟು ಹಿಮ ಕರಗುತ್ತಿದ್ದು ಲಕ್ಷಾಂತರ ಜನರಿಗೆ ನೀರು ಪೂರೈಕೆಗೆ ಸಮಸ್ಯೆಯುಂಟಾಗಿದೆ ಎಂದು 2019ರಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಹೇಳಿದೆ.

ಭಾರತ, ಚೀನಾ, ನೇಪಾಳ ಮತ್ತು ಭೂತಾನ್​ ದೇಶಗಳಲ್ಲಿ ಕಳೆದ 40 ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಿಮಾಲಯದ ಹಿಮ ಕರಗುತ್ತಿವೆ ಎಂದು ವರದಿ ವಿಶ್ಲೇಷಿಸಿದೆ. 2019 ಜೂನ್ ತಿಂಗಳಲ್ಲಿ ಪ್ರಕಟವಾದ ಸೈನ್ಸ್​ ಅಡ್ವಾನ್ಸ್​ಸ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ 2000 ಇಸವಿಯಿಂದ ಹಿಮನದಿಗಳಲ್ಲಿ ಅರ್ಧದಷ್ಟು ಹಿಮ ಕರಗುತ್ತಿದೆ. 1975ರಿಂದ 2000ವರೆಗಿನ ಅವಧಿಯಲ್ಲಿ ಹಿಮಕರಗುವಿಕೆ ದ್ವಿಗುಣಗೊಂಡಿದೆ.

ಹಿಮಾಲಯದ ಹಿಮ ಎಷ್ಟು ವೇಗವಾಗಿ ಕರಗುತ್ತಿವೆ ಮತ್ತು ಯಾಕೆ ಎಂಬುದರ ಸ್ಪಷ್ಟ ಚಿತ್ರಣ ಇಲ್ಲಿ ಸಿಗುತ್ತದೆ ಎಂದು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಪಿಎಚ್​ಡಿ ವಿದ್ಯಾರ್ಥಿ ಜೊಶುವಾ ಮೌರೆರ್ ಹೇಳಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಹಿಮನದಿಯ ಕಾಲುಭಾಗದಷ್ಟು ಹಿಮಕರಗಿದೆ ಎಂದು ಮೌರೆರ್ ಹೇಳಿದ್ದಾರೆ. ಅಧ್ಯಯನ ವರದಿಯ ಪ್ರಧಾನ ಲೇಖಕರಾಗಿದ್ದಾರೆ ಮೌರೆರ್.

ಹಿಮಕರಗುವಿಕೆಗೆ ಪ್ರಧಾನ ಕಾರಣ ತಾಪಮಾನ. ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಆದರೆ 2000ದಿಂದ 2016ರವರೆಗಿನ ಅವಧಿಯಲ್ಲಿ ಇದು 1975-2000 ಅವಧಿಯಲ್ಲಿದ್ದ ತಾಪಮಾನಕ್ಕಿಂತ ಸರಾಸರಿ 1 ಡಿಗ್ರಿ ಸೆಲ್ಶಿಯಸ್ ಅಧಿಕವಾಗಿದೆ.

1975ರಿಂದ 2000 ಅವಧಿಯಲ್ಲಿ ತಾಪಮಾನದಿಂದಾಗಿ ಈ ಪ್ರದೇಶಗಳಲ್ಲಿ 0.25 ಮೀಟರ್ ಗಳಷ್ಟು ಮಂಜುಗಡ್ಡೆ ಕರಗಿದೆ. 1990ರ ಆರಂಭದಲ್ಲಿ ತಾಪಮಾನ ಏರಿಕೆಯಾಗಿದ್ದು 2000 ಇಸವಿಗೆ ತಲುಪುವಾಗ ಪ್ರತಿವರ್ಷ ಅರ್ಧ ಮೀಟರ್​ನಷ್ಟು ಹಿಮ ಕರಗಲು ಶುರುವಾಗಿದೆ.

ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಪಳೆಯುಳಿಕೆ ಇಂಧನಗಳ ಉರಿಯುವಿಕೆಯು ಹಿಮಕರಗುವಿಕೆಗೆ ಕಾರಣವಾಗುತ್ತದೆ. ಹಿಮಾಲಯ ಪರ್ವತವು ಆಲ್ಫ್ಸ್ ಪರ್ವತದಷ್ಟು ವೇಗವಾಗಿ ಕರಗುವುದಿಲ್ಲ. ಆದರೆ ಕರಗುವ ರೀತಿಯಲ್ಲಿ ಸಾಮ್ಯತೆ ಇದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಪಮೀರ್, ಹಿಂದೂ ಕುಶ್ ಅಥವಾ ಟಿಯಾನ್ ಶಾನ್ ಪರ್ವತಶ್ರೇಣಿಗಳಲ್ಲಿಯೂ ಹಿಮಕರಗುವಿಕೆ ಇದೆ ಎಂದು ಇತರ ಅಧ್ಯಯನ ವರದಿಗಳು ಹೇಳಿವೆ.

ಸುಮಾರು 80 ಕೋಟಿಯಷ್ಟು ಜನರು ನೀರಾವರಿ, ಜಲ ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಹಿಮಾಲಯದಿಂದ ಹರಿಯುವ ಹಿಮನದಿಗಳನ್ನು ಆಶ್ರಯಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಹಿಮಕರಗುವಿಕೆ ಸಾಮಾನ್ಯವಾಗಿದ್ದರೂ, ಹಿಮನದಿಗಳಲ್ಲಿನ ನೀರ್ಗಲ್ಲುಗಳ ಕರಗುವಿಕೆ ಕಳೆದ 10 ವರ್ಷಗಳಲ್ಲಿ ಜಾಸ್ತಿಯಾಗಿದೆ. ಈ ರೀತಿ ಹೆಚ್ಚಿನ ಪ್ರಮಾಣದಲ್ಲಿ ಹಿಮಕರಗಿದರೆ ನೀರಿನ ಕೊರತೆಯುಂಟಾಗಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ.

ಉತ್ತರಾಖಂಡ್ ಚಮೋಲಿಯಲ್ಲಿ ವ್ಯಾಪಕ ಹಿಮಕುಸಿತ; ನದಿಪಾತ್ರದ ಜನತೆಗೆ ಆಡಳಿತದಿಂದ ಎಚ್ಚರಿಕೆ