Explainer | ಉತ್ತರಾಖಂಡ್ನಲ್ಲಿ ಹಠಾತ್ ಪ್ರವಾಹ: ಏನಿದು ಹಿಮಕುಸಿತ? ಹೇಗೆ ಸಂಭವಿಸುತ್ತೆ?
Uttarakhand Glacier Burst ಹಿಮನದಿಗಳು ಅಪಾರ ಪ್ರಮಾಣದ ನೀರನ್ನು ನೀರ್ಗಲ್ಲಿನ (ಗಟ್ಟಿ ಮಂಜುಗಡ್ಡೆ) ರೂಪದಲ್ಲಿ ಹೊಂದಿರುತ್ತದೆ. ಈ ಮಂಜುಗಡ್ಡೆಗಳು ಒಮ್ಮೆಲೆ ಕರಗಿದರೆ ಅಧಿಕ ಪ್ರಮಾಣದ ನೀರು ನದಿಮೂಲಕ ಹರಿಯತೊಡಗಿ ಪ್ರವಾಹ ಸ್ಥಿತಿಯುಂಟಾಗುತ್ತದೆ.
ಡೆಹ್ರಾಡೂನ್ : ಉತ್ತರಾಖಂಡ್ನ ಚಮೋಲಿ ಜಿಲ್ಲೆಯಲ್ಲಿ ವ್ಯಾಪಕ ಹಿಮಕುಸಿತ (Uttarakhand Glacier Burst) ಸಂಭವಿಸಿದ್ದು ಅಲಕಾನಂದ, ಧೌಲಿಗಂಗಾ ನದಿಗಳಲ್ಲಿ ಭಾನುವಾರ ಹಠಾತ್ತನೆ ಪ್ರವಾಹ ಉಕ್ಕೇರಿದೆ.
ಚಮೋಲಿ ಜಿಲ್ಲೆಯ ಋಷಿಗಂಗಾ ವಿದ್ಯುತ್ ಸ್ಥಾವರ ಬಳಿ ಹಿಮಕುಸಿತವುಂಟಾದ ಬೆನ್ನಲ್ಲೇ ಧೌಲಿಗಂಗಾದಲ್ಲಿ ಪ್ರವಾಹ ಸ್ಥಿತಿಯುಂಟಾಗಿದೆ. ಪ್ರವಾಹದಲ್ಲಿ 150 ಮಂದಿ ಕಣ್ಮರೆಯಾಗಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿದ್ದು, ಹತ್ತಿರದ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
ಪ್ರವಾಹದಿಂದಾಗಿ ಅಣೆಕಟ್ಟಿನ ಬದಿಯಲ್ಲಿರುವ ಹಲವಾರು ಮನೆಗಳು ಮುಳುಗಿದ್ದು ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಚಮೋಲಿ ಪೊಲೀಸರ ಪ್ರಕಾರ ತಪೋವನ್ ಪ್ರದೇಶದಲ್ಲಿ ಹಿಮಕುಸಿತವುಂಟಾದ ಕಾರಣ ಋಷಿಗಂಗಾ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿತ್ತು. ಹಿಮಕುಸಿತವುಂಟಾದ ಕೂಡಲೇ ಅಲಕಾನಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಹತ್ತಿರದ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಹಿಮನದಿಯಲ್ಲಿ ಹಿಮಕುಸಿತವುಂಟಾಗಲು ಕಾರಣವೇನು? ಹಿಮನದಿಯಲ್ಲಿ ನೀರು ಹೆಪ್ಪುಗಟ್ಟಿ ನೀರ್ಗಲ್ಲಿನ ಸ್ಥಿತಿಯಲ್ಲಿರುವ ಮಂಜುಗಡ್ಡೆ ಒಮ್ಮೆಲೆ ಕರಗಿ ನೀರಾಗಿ ಹರಿಯತೊಡಗುತ್ತದೆ. ಭಾರೀ ಪ್ರಮಾಣದ ಮಂಜುಗಡ್ಡೆ ಒಮ್ಮೆಲೆ ಕರಗಿದಾಗ ಹಿಮಕುಸಿತದ ಸ್ಥಿತಿ ಉಂಟಾಗುತ್ತದೆ. ಇಂಥ ನದಿಗಳು ಅಣೆಕಟ್ಟು ಸಂಧಿಸುವ ಸ್ಥಳದಲ್ಲಿ ಸಮಸ್ಯೆಯಾದರೆ ಹಠಾತ್ ಪ್ರವಾಹ ಉಂಟಾಗುತ್ತದೆ.
ಹಿಮಕುಸಿತದಿಂದ ಪ್ರವಾಹ ಭೂಮಿಯ ಮೇಲ್ಮಣ್ಣಿನ ಸವಕಳಿ, ನೀರಿನ ಒತ್ತಡ, ಹಿಮಪಾತ ಮತ್ತು ನೀರ್ಗಲ್ಲಿನ ಅಡಿಯ ಭೂಮಿ ಕಂಪಿಸಿದಾಗ ಹಿಮಕುಸಿತ ಸಂಭವಿಸುತ್ತದೆ. ಹಿಮನದಿಯಲ್ಲಿಯಲ್ಲಿ ಹೆಚ್ಚಿನ ಭಾಗ ಕುಸಿದಾಗ, ಅಲ್ಲಿನ ನೀರು ಒಮ್ಮೆಲೆ ಸ್ಥಳಾಂತರಗೊಂಡಾಗಲೂ ಈ ರೀತಿ ಸಂಭವಿಸುತ್ತದೆ. ಹಿಮನದಿಗಳು ಅಪಾರ ಪ್ರಮಾಣದ ನೀರನ್ನು ಮಂಜುಗಡ್ಡೆಯ ರೂಪದಲ್ಲಿ ಹೊಂದಿರುತ್ತದೆ. ಈ ಮಂಜುಗಡ್ಡೆಗಳು ಒಮ್ಮೆಲೆ ಕರಗಿದರೆ ಅಧಿಕ ಪ್ರಮಾಣದ ನೀರು ನದಿಮೂಲಕ ಹರಿಯತೊಡಗಿ ಪ್ರವಾಹ ಸ್ಥಿತಿಯುಂಟಾಗುತ್ತದೆ.
ಸಹಾಯವಾಣಿ ಪ್ರವಾಹಕ್ಕೆ ಸಿಲುಕಿರುವ ಜನರು ಸಹಾಯಕ್ಕಾಗಿ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರದ ಸಂಪರ್ಕ ಸಂಖ್ಯೆಗಳು: 1070 ಮತ್ತು 95574 44486.
ಇನ್ನಷ್ಟು ಮಾಹಿತಿಗೆ https://tv9kannada.com/tag/glacier-burst ಲಿಂಕ್ ಕ್ಲಿಕ್ ಮಾಡಿ.
#WATCH | Water level in Dhauliganga river rises suddenly following avalanche near a power project at Raini village in Tapovan area of Chamoli district. #Uttarakhand pic.twitter.com/syiokujhns
— ANI (@ANI) February 7, 2021
ಉತ್ತರಾಖಂಡ್ ಚಮೋಲಿಯಲ್ಲಿ ವ್ಯಾಪಕ ಹಿಮಕುಸಿತ; ನದಿಪಾತ್ರದ ಜನತೆಗೆ ಆಡಳಿತದಿಂದ ಎಚ್ಚರಿಕೆ
Published On - 5:05 pm, Sun, 7 February 21