Uttarakhand Glacier Burst: 19 ಮೃತದೇಹ ಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ: ನೆರವು ನೀಡಲು ಸಿದ್ಧ ಎಂದ ವಿಶ್ವಸಂಸ್ಥೆ

|

Updated on: Feb 08, 2021 | 12:20 PM

Uttarakhand glacier burst ಚಮೋಲಿಯ ತಪೋವನ ಡ್ಯಾಂ ಬಳಿ, ಭಾರಿ ಪ್ರಮಾಣದ ಮಣ್ಣು ಕುಸಿದು ಸುರಂಗ ಮುಚ್ಚಿ ಹೋಗಿತ್ತು. ಮೊದಲನೇ ಸುರಂಗದಲ್ಲಿ 32 ಮತ್ತು ಎರಡನೇ ಸುರಂಗದಲ್ಲಿ 121 ಮಂದಿ ನಾಪತ್ತೆಯಾಗಿದ್ದಾರೆ.

Uttarakhand Glacier Burst: 19 ಮೃತದೇಹ ಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ: ನೆರವು ನೀಡಲು ಸಿದ್ಧ ಎಂದ ವಿಶ್ವಸಂಸ್ಥೆ
ಐಟಿಬಿಪಿ ತಂಡ ಸುರಂಗದಲ್ಲಿ ಸಿಲುಕಿರುವ ವ್ಯಕ್ತಿಯನ್ನು ರಕ್ಷಿಸಿದಾಗ (ಕೃಪೆ: ಪಿಟಿಐ)
Follow us on

ಡೆಹ್ರಾಡೂನ್​: ಉತ್ತರಾಖಂಡ್​ನ (Uttarakhand) ಚಮೋಲಿ (Chamoli) ಜಿಲ್ಲೆಯ ತಪೋವನ ಸಮೀಪದ ರೈಣಿ ಗ್ರಾಮದಲ್ಲಿ ನಂದಾದೇವಿ ಹಿಮಪರ್ವತದಲ್ಲಿ ಕಂಡುಬಂದ ಜಲತಾಂಡವದ ಪರಿಣಾಮ ಧೌಲಿಗಂಗಾ ನದಿ ಪ್ರವಾಹದಲ್ಲಿ ಅಪಾರ ಹಾನಿ ಸಂಭವಿಸಿದೆ. ಚಮೋಲಿಯ ತಪೋವನ ಡ್ಯಾಂ ಬಳಿ, ಭಾರಿ ಪ್ರಮಾಣದ ಮಣ್ಣು ಕುಸಿದು ಸುರಂಗ ಮುಚ್ಚಿ ಹೋಗಿತ್ತು. ಮೊದಲನೇ ಸುರಂಗದಲ್ಲಿ 32 ಮತ್ತು ಎರಡನೇ ಸುರಂಗದಲ್ಲಿ 121 ಮಂದಿ ನಾಪತ್ತೆಯಾಗಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಋಷಿಗಂಗಾ ವಿದ್ಯುತ್ ಯೋಜನೆ ಬಳಿಯಿಂದ ಈವರೆಗೆ 19 ಮೃತದೇಹಗಳನ್ನು ಹೊರತೆಗೆಯಲಾಗಿದೆ. ರುದ್ರಪ್ರಯಾಗ್​ನಿಂದ 4 ಮತ್ತು ಚಮೋಲಿಯಿಂದ 15 ಮೃತದೇಹಗಳು ಪತ್ತೆಯಾಗಿವೆ. ತಪೋವನದಿಂದ 3 ಮತ್ತು ಕರ್ಣಪ್ರಯಾಗ್ ರಸ್ತೆಯಿಂದ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭಾನುವಾರ 12 ಮಂದಿಯನ್ನು ಸಣ್ಣ ಸುರಂಗವೊಂದರಿಂದ ರಕ್ಷಿಸಲಾಗಿತ್ತು. ದೊಡ್ಡ ಸುರಂಗದಲ್ಲಿ ಹೆಚ್ಚು ಜನರು ಸಿಲುಕಿದ್ದು, ಅವರನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ .

ತಪೋವನ್ – ವಿಷ್ಣುಗಡ್ ಜಲವಿದ್ಯುತ್ ಯೋಜನೆಯ ಸುರಂಗವೊಂದರಲ್ಲಿ ಕನಿಷ್ಠ 30 ಮಂದಿ ಸಿಲುಕಿರುವ ಶಂಕೆ ಇದೆ. ಸುರಂಗದಲ್ಲಿ ಸಿಲುಕಿರುವವರನ್ನು ರಕ್ಷಿಸಲು 300 ಇಂಡೊ ಟಿಬೆಟನ್ ಗಡಿ ಪೊಲೀಸರನ್ನು (ಐಟಿಬಿಪಿ) ನಿಯೋಜಿಸಲಾಗಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ಹೇಳಿದ್ದಾರೆ.

ತಪೋವನ ಸುರಂಗ

ನೆರವು ನೀಡಲು ವಿಶ್ವಸಂಸ್ಥೆ ಸಿದ್ಧ: ಆಂಟೊನಿಯೊ ಗುಟೆರಸ್
ಉತ್ತರಾಖಂಡ ಹಿಮಕುಸಿತದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ . ಜನರ ರಕ್ಷಣಾ ಕಾರ್ಯಗಳಿಗಾಗಿ ನೆರವು ಅಗತ್ಯವಿದ್ದರೆ ನೆರವು ನೀಡಲು ನಾವು ಸಿದ್ಧ ಎಂದು ವಿಶ್ವಸಂಸ್ಥೆ ಹೇಳಿದೆ.

ತಪೋವನ್ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ

ಸಹಾಯವಾಣಿ
ಪ್ರವಾಹಕ್ಕೆ ಸಿಲುಕಿರುವ ಜನರು ಸಹಾಯಕ್ಕಾಗಿ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರದ ಸಂಪರ್ಕ ಸಂಖ್ಯೆಗಳು: 1070 ಮತ್ತು 95574 44486.

Uttarakhand Glacier Burst ಉತ್ತರಾಖಂಡ್ ಮೇಲೆ ನಿಸರ್ಗ ಮುನಿದಿದ್ದು ಇದೇ ಮೊದಲಲ್ಲ; 1991ರಿಂದ ಈವರೆಗೆ ಏನೆಲ್ಲಾ ಆಯ್ತು?

Published On - 12:09 pm, Mon, 8 February 21