Uttarakhand Glacier Burst ಉತ್ತರಾಖಂಡ್ ಮೇಲೆ ನಿಸರ್ಗ ಮುನಿದಿದ್ದು ಇದೇ ಮೊದಲಲ್ಲ; 1991ರಿಂದ ಈವರೆಗೆ ಏನೆಲ್ಲಾ ಆಯ್ತು?
ಉತ್ತರಾಖಂಡ್ಗೆ ವಿಪತ್ತು ಹೊಸದಲ್ಲ. ಹಿಮಾಚ್ಛಾದಿತ ಪ್ರದೇಶವಾಗಿದ್ದರಿಂದ ಇಲ್ಲಿ ಹಿಮಪಾತ ತೀರ ಸಾಮಾನ್ಯ. ಸಣ್ಣಪುಟ್ಟ ಹಿಮಪಾತದಲ್ಲೂ ಹಲವರು ಪ್ರಾಣಕಳೆದುಕೊಂಡಿದ್ದಾರೆ. ಅಲ್ಲಿ, 1991ರಿಂದ ಈವರೆಗೆ ಸಂಭವಿಸಿದ ಅತಿದೊಡ್ಡ ಮಟ್ಟದ ನೈಸರ್ಗಿಕ ವಿಪತ್ತುಗಳ ಇಣುಕು ನೋಟ ಇಲ್ಲಿದೆ.
ಹಿಂದೂ ಯಾತ್ರಾಸ್ಥಳಗಳಿಗೆ ಹೆಸರುವಾಸಿಯಾದ ರಾಜ್ಯ ಉತ್ತರಾಖಂಡ್. ಹಿಮಾಲಯ ಪರ್ವತಗಳಿಂದಲೇ ಸುತ್ತುವರಿದ ಉತ್ತರಾಖಂಡ್ ಇದೀಗ ಮತ್ತೆ ಸುದ್ದಿಯಲ್ಲಿರುವುದು ಇಂದಿನ ಹಿಮಸ್ಫೋಟದ ಕಾರಣದಿಂದ. ಚಮೋಲಿ ಜಿಲ್ಲೆಯ ನಂದಾ ದೇವಿ ಹಿಮಪರ್ವತ ಕುಸಿದ ಕಾರಣ ಧೌಲಿಗಂಗಾ ನದಿ ಉಕ್ಕಿ ಹರಿದಿದೆ. ಹೀಗಾಗಿ ತಪೋವನ ಪ್ರದೇಶ, ಋಷಿಕೇಶದಲ್ಲಿನ ಜಲವಿದ್ಯುತ್ ಯೋಜನೆಗಳೆಲ್ಲ ಕೊಚ್ಚಿಕೊಂಡು ಹೋಗಿವೆ. ಇಲ್ಲಿನ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕಾರ್ಮಿಕರು ಕಾಣೆಯಾಗಿದ್ದು, ಸದ್ಯ 10 ಮೃತದೇಹಗಳು ಪತ್ತೆಯಾಗಿವೆ.
ಉತ್ತರಾಖಂಡ್ಗೆ ವಿಪತ್ತು ಹೊಸದಲ್ಲ. ಹಿಮಾಚ್ಛಾದಿತ ಪ್ರದೇಶವಾಗಿದ್ದರಿಂದ ಇಲ್ಲಿ ಹಿಮಪಾತ ತೀರ ಸಾಮಾನ್ಯ. ಸಣ್ಣಪುಟ್ಟ ಹಿಮಪಾತದಲ್ಲೂ ಹಲವರು ಪ್ರಾಣಕಳೆದುಕೊಂಡಿದ್ದಾರೆ. ಅಲ್ಲಿ, 1991ರಿಂದ ಈವರೆಗೆ ಸಂಭವಿಸಿದ ಅತಿದೊಡ್ಡ ಮಟ್ಟದ ನೈಸರ್ಗಿಕ ವಿಪತ್ತುಗಳ ಇಣುಕು ನೋಟ ಇಲ್ಲಿದೆ.
1991ರ ಉತ್ತರಕಾಶಿ ಭೂಕಂಪ (ಘರ್ವಾಲ್ ಭೂಕಂಪ) ಉತ್ತರಾಖಂಡ್ದ ಉತ್ತರಕ್ಕಿರುವ ಉತ್ತರಕಾಶಿಯಲ್ಲಿ 1991ರಲ್ಲಿ ಸಂಭವಿಸಿದ್ದ ಭೀಕರ ಭೂಕಂಪವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಕ್ಟೋಬರ್ 20ರಂದು ಮಧ್ಯಾಹ್ನ ಭೂಮಿ ನಡುಗಿತ್ತು. ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿತ್ತು. ಆಳ 11.6 ಕಿಮೀ ಇತ್ತು. ಈ ಭೀಕರ ಭೂಕಂಪದಿಂದ ಸಾವಿರಾರು ಮನೆಗಳು ನೆಲಸಮಗೊಂಡಿದ್ದವು. 768 ಜನರು ಮೃತರಾಗಿದ್ದರು.
1998ರ ಮಲ್ಪಾ ಭೂಕುಸಿತ ಉತ್ತರಾಖಂಡ್ದ ಪಿತೋರ್ಘಡ್ ಪುಟ್ಟ ಹಳ್ಳಿ ಮಲ್ಪಾದಲ್ಲಿ 1998ರಲ್ಲಿ ಉಂಟಾಗಿದ್ದ ಭೂಕುಸಿತ ಭಾರತದಲ್ಲಿಯೇ ಅತ್ಯಂಕ ಭೀಕರ ಭೂಕುಸಿತಗಳಲ್ಲಿ ಒಂದು. ಆಗಸ್ಟ್ 18ರ ನಸುಕಿನ 3 ಗಂಟೆಗೆ ಎದುರಾದ ವಿಪತ್ತಿಗೆ ಇಡೀ ಹಳ್ಳಿ ನಲುಗಿತ್ತು. ಮಲ್ಪಾ ಹಳ್ಳಿ ಸಂಪೂರ್ಣ ನಾಶವಾಗಿತ್ತು. ಈ ಅವಘಡದಲ್ಲಿ ಕೈಲಾಸ ಮಾನಸ ಸರೋವರದ 55 ಯಾತ್ರಾರ್ಥಿಗಳು ಸೇರಿ ಒಟ್ಟು 255 ಮಂದಿ ಮೃತಪಟ್ಟಿದ್ದರು. ಭೂಕುಸಿತದಿಂದ ಧರೆಗೆ ಉರುಳಿದ ಮರಗಳು, ಮನೆಗಳ ಅವಶೇಷಗಳು ಶಾರದಾ ನದಿಗೆ ಭಾಗಶಃ ತಡೆಯೊಡ್ಡಿದ್ದವು.
1999ರ ಚಮೋಲಿ ಭೂಕಂಪ 1998ರ ಭೂಕುಸಿತದ ಬೆನ್ನಲ್ಲೇ 1999ರ ಮಾರ್ಚ್ 29ರಂದು ಚಮೋಲಿಯಲ್ಲಿ ಮತ್ತೊಂದು ಭೀಕರ ಭೂಕಂಪ ಸಂಭವಿಸಿತ್ತು. ಇದರಲ್ಲಿ 100 ಮಂದಿ ಸಾವನ್ನಪ್ಪಿದ್ದರು. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿತ್ತು. ಹಾಗೇ ಭೂಕಂಪದ ಆಳ 21 ಕಿ.ಮೀ.ನಷ್ಟಿತ್ತು. ತೀವ್ರ ಭೂಕಂಪದ ಕೆಟ್ಟ ಪರಿಣಾಮ ಚಮೋಲಿಯ ರುದ್ರಪ್ರಯಾಗ ಜಿಲ್ಲೆಗೂ ತಟ್ಟಿತ್ತು. ರಸ್ತೆಗಳು, ಬಯಲು ಪ್ರದೇಶಗಳೆಲ್ಲ ಬಿರುಕು ಬಿಟ್ಟಿತ್ತು. ಭೂಕುಸಿತವುಂಟಾಗಿ, ನೀರಿನ ಹರಿವಿನ ದಾರಿಯೂ ಬದಲಾಗಿತ್ತು.
2013 ಉತ್ತರ ಭಾರತ ಪ್ರವಾಹ ಇಷ್ಟೆಲ್ಲ ಆದ ಮೇಲೆ 2013ರಲ್ಲಿ ಉತ್ತರಾಖಂಡ್ಗೆ ಅಪ್ಪಳಿಸಿದ್ದ ಮೇಘಸ್ಫೋಟ. 2-3ದಿನಗಳ ಕಾಲ ಸತತವಾಗಿ ಮೇಘಸ್ಫೋಟವಾದ ಪರಿಣಾಮ ವಿಪರೀತ ಮಳೆಯಾಗಿ ವಿನಾಶಕಾರಿ ಪ್ರವಾಹ ಉಂಟಾಗಿತ್ತು. ಅಂದಿನ ಭೀಕರ ದೃಶ್ಯಗಳ ಫೋಟೋ, ವಿಡಿಯೋಗಳೂ ವೈರಲ್ ಆಗಿದ್ದವು. ಈ ಪ್ರವಾಹದಲ್ಲಿ 5700ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆಂದು ಭಾವಿಸಲಾಗಿದೆ. ಸೇತುವೆ, ರಸ್ತೆಗಳೆಲ್ಲ ಕೊಚ್ಚಿಕೊಂಡು ಹೋದ ಪರಿಣಾಮ ಚಾರ್ಧಾಮ್ ಯಾತ್ರಾರ್ಥಿಗಳು ಹೋಗುವ ಕಣಿವೆ ಹಾದಿಯಲ್ಲಿ 3 ಲಕ್ಷಕ್ಕೂ ಅಧಿಕ ಜನರು ಸಿಲುಕಿದ್ದರು. ಅದರಲ್ಲೂ ಜೂನ್ 16ರ ಪ್ರವಾಹವಂತೂ ಅತ್ಯಂತ ಭೀಕರತೆಯನ್ನೇ ಸೃಷ್ಟಿಸಿತ್ತು.
2000ರಲ್ಲಿ ಬೇರ್ಪಟ್ಟ ರಾಜ್ಯವಿದು ಉತ್ತರಾಖಂಡ್ 1999ರವರೆಗೂ ಉತ್ತರ ಪ್ರದೇಶದ ಭಾಗವಾಗಿಯೇ ಇತ್ತು. 2000ದ ನವೆಂಬರ್ನಲ್ಲಿ ಭಾರತದ 27ನೇ ರಾಜ್ಯವಾಗಿ ರೂಪುಗೊಂಡಿತು. ಅಂದು ಉತ್ತರಾಚಲ ಎಂಬ ಹೆಸರಿನೊಂದಿಗೆ ಉತ್ತರಪ್ರದೇಶದಿಂದ ಬೇರ್ಪಟ್ಟ ರಾಜ್ಯಕ್ಕೆ, 2007ರಲ್ಲಿ ಉತ್ತರಾಖಂಡ್ ಎಂದು ಮರುನಾಮಕರಣ ಮಾಡಲಾಗಿದೆ. ಇದರ ಅರ್ಥ ಉತ್ತರದ ಪ್ರದೇಶ ಎಂದು. ಉತ್ತರಾಖಂಡ್ ಬೇರ್ಪಟ್ಟ ನಂತರ, ವಿಪತ್ತಿಗೆ ತುತ್ತಾದ ಉತ್ತರಕಾಶಿ, ಚಮೋಲಿ, ಮಾಲ್ಪಾಗಳೆಲ್ಲ ಇದೇ ರಾಜ್ಯಕ್ಕೆ ಸೇರ್ಪಡೆಯಾಗಿದ್ದರಿಂದ ನಾವದನ್ನು ಉತ್ತರಾಖಂಡ್ ದುರಂತ ಎಂದೇ ಪರಿಗಣಿಸಬೇಕಾಗುತ್ತದೆ.
ಇಂದೂ ಸಹ ಉತ್ತರಾಖಂಡ್ನಲ್ಲಿ ಹಿಮಕುಸಿತದಿಂದಾಗಿ ಧೌಲಿಗಂಗಾ ನದಿಯಲ್ಲಿ ಪ್ರವಾಹ ಹೆಚ್ಚುತ್ತಿದ್ದಂತೆ ಇತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಎಚ್ಚರಿಕೆ ವಹಿಸಿದ್ದಾರೆ. ಗಂಗಾ ನದಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಉತ್ತರಾಖಂಡ್ ವಿಪತ್ತು ನಿರ್ವಹಣೆಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರವನ್ನೂ ನೀಡಲು ತಮ್ಮ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಯಾನಕ ದೃಶ್ಯವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ: ಉತ್ತರಾಖಂಡ ಹಿಮಕುಸಿತದ ತೀವ್ರತೆ ವಿವರಿಸಿದ ಸ್ಥಳೀಯ
Published On - 8:05 pm, Sun, 7 February 21