ಉತ್ತರಾಖಂಡದ ಹಿಮಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆ

ಇಂಡೋ-ಟಿಬೆಟ್​ ಬಾರ್ಡರ್ ಪೊಲೀಸ್​ ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಣ್ಣು ಹಾಗೂ ಕೆಸರಿನಲ್ಲಿ ಸಿಲುಕಿದ ಅನೇಕರನ್ನು ರಕ್ಷಿಸುವ ಕಾರ್ಯ ಸಾಗಿದೆ.

ಉತ್ತರಾಖಂಡದ ಹಿಮಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆ
ಉತ್ತರಾಖಂಡದಲ್ಲಿ ಉಂಟಾಗಿದ್ದ ದಿಢೀರ್ ಪ್ರವಾಹ (ಸಂಗ್ರಹ ಚಿತ್ರ)
Edited By:

Updated on: Feb 08, 2021 | 9:29 PM

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ವ್ಯಾಪಕ ಹಿಮಸ್ಫೋಟ (Uttarakhand Glacier Burst) ಉಂಟಾಗಿತ್ತು. ಪರಿಣಾಮ, ಋಷಿಗಂಗಾ ನದಿ ಉಕ್ಕಿ ಹರಿದಿತ್ತು. ಈ ವೇಳೆ ಕಾಣೆಯಾದವರ ಪೈಕಿ 26 ಜನರು ಶವವಾಗಿ ಸಿಕ್ಕಿದ್ದಾರೆ. ಇನ್ನೂ ಸಾಕಷ್ಟು ಮಂದಿ, ಮೃತಪಟ್ಟಿರುವ ಶಂಕೆ ಹೆಚ್ಚಾಗಿದೆ. ಹಿಮಸ್ಫೋಟದಿಂದ ಋಷಿಗಂಗಾ ನದಿ ಉಕ್ಕಿ ಹರಿದಿತ್ತು. ಋಷಿಗಂಗಾ  ಸಣ್ಣ ವಿದ್ಯುತ್​ ಯೋಜನೆ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಈ ಹೈಡ್ರೋ ಪ್ರಾಜೆಕ್ಟ್​​ನ ಸುರಂಗದಲ್ಲಿ ಹಲವರು ಸಿಲುಕಿದ್ದಾರೆ. ಇವರಲ್ಲಿ ಈಗಾಗಲೇ ಅನೇಕರು ಮೃತಪಟ್ಟಿದ್ದಾರೆ. ಇಲ್ಲಿ ಇನ್ನೂ 35 ಜನರು ಸಿಲುಕಿರುವ ಸಾಧ್ಯತೆ ಇದೆ.

ಮಣ್ಣು ಹಾಗೂ ಅವಶೇಷದ ಅಡಿಗೆ ಸಿಲುಕಿ ಒಂದು ದಿನವೇ ಕಳೆದಿದೆ. ಅವರಿಗೆ ಆಹಾರ ಹಾಗೂ ಗಾಳಿ ಇಲ್ಲದ ಕಾರಣ ಅವರೆಲ್ಲರೂ ಬದುಕಿರುವ ಸಾಧ್ಯತೆ ತುಂಬಾನೇ ಕಡಿಮೆ. ಒಂದೊಮ್ಮೆ ಯಾರಾದರೂ ಬದುಕಿದ್ದರೆ ಅದು ಪವಾಡ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಹೇಳಿದ್ದಾರೆ.

ಇಂಡೋ-ಟಿಬೆಟ್​ ಬಾರ್ಡರ್ ಪೊಲೀಸ್​ (ಐಟಿಬಿಪಿ) ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಣ್ಣು ಹಾಗೂ ಕೆಸರಿನಲ್ಲಿ ಸಿಲುಕಿದ ಅನೇಕರನ್ನು ರಕ್ಷಿಸುವ ಕಾರ್ಯ ಸಾಗಿದೆ. ಒಟ್ಟು 171 ಜನರು ನಾಪತ್ತೆ ಆಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್​ ಕುಮಾರ್ ಹೇಳಿಕೆ​ ನೀಡಿದ್ದಾರೆ.

ಉತ್ತರಾಖಂಡದಲ್ಲಿ ವಾಸಿಸುವ ಸಂಜಯ್​ ಸಿಂಗ್​ ರಾಣಾ ಎನ್ನುವ ವ್ಯಕ್ತಿ ಈ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡಿದ್ದಾರೆ. ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ನಾನು ಪ್ರವಾಹ ಉಂಟಾಗುವ ಪ್ರದೇಶಕ್ಕಿಂತ ಮೇಲಿದ್ದೆ. ನೋಡ ನೋಡುತ್ತಿದ್ದಂತೆ ಭಾರೀ ನೀರು ಬಂದಿತ್ತು. ಯಾರಿಗೂ ಅಲರ್ಟ್​ ಮಾಡಲು ಸಾಧ್ಯವೇ ಆಗಲಿಲ್ಲ. ನೀರು ಬರುವ ವೇಗ ನೋಡಿದರೆ, ನಾವು ಕೊಚ್ಚಿ ಹೋಗುತ್ತೇವೆ ಎಂದು ಭಾವಿಸಿದ್ದೆ ಎಂದು ಸಂಜಯ್ ಸಿಂಗ್​ ವಿವರಿಸಿದ್ದರು. ಇದು ಘಟನೆಯ ತೀವ್ರತೆಯನ್ನು ಹೇಳುವಂತಿದೆ.

ಉತ್ತರಾಖಂಡದಲ್ಲಿ ಸಂಪೂರ್ಣ ಕೊಚ್ಚಿ ಹೋದ ಋಷಿಗಂಗಾ ಜಲ ವಿದ್ಯುತ್ ಶಕ್ತಿ​ ಯೋಜನೆ