
ಡೆಹ್ರಾಡೂನ್, ಅಕ್ಟೋಬರ್ 21: ಉತ್ತರಾಖಂಡ ಸರ್ಕಾರವು ರಾಜ್ಯ ಶಿಕ್ಷಣ ಇಲಾಖೆಯಿಂದ ಶಾಲೆಗಳು ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಮದರಸಾಗಳಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ಶುಕ್ರವಾರದ ಬದಲಿಗೆ ಭಾನುವಾರವೇ ವಾರದ ರಜೆ ನೀಡಲು ನಿರ್ಧರಿಸಿದೆ. ಈ ಹಿಂದೆ ಜುಮಾ ಪ್ರಾರ್ಥನೆಯ ಹಿನ್ನೆಲೆಯಲ್ಲಿ ಮದರಸಾಗಳಿಗೆ ಶುಕ್ರವಾರ ವಾರದ ರಜೆಯನ್ನು ನಿಗದಿಪಡಿಸಲಾಗಿತ್ತು. ಇಂದು ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ” ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ನಮ್ಮ ಸರ್ಕಾರ ನೀತಿ, ನಿಯಮ ಹಾಗೂ ಕಾನೂನುಗಳನ್ನು ರೂಪಿಸಿದೆ. ಈ ನಿಯಮಗಳನ್ನು ಪಾಲಿಸದ ಸಂಸ್ಥೆಗಳಿಗೆ ಇಲ್ಲಿ ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರದ ವಾರದ ರಜೆಯನ್ನು ಬದಲಾಯಿಸುವ ಬಗ್ಗೆ ಮಾತನಾಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮದರಸಾಗಳು ಈಗ ಶಿಕ್ಷಣ ಇಲಾಖೆಯಿಂದ ಗುರುತಿಸಲ್ಪಟ್ಟ ಶಾಲೆಗಳಾಗಿರುವುದರಿಂದ, ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುವ ನಿಯಮಗಳೇ ಇವುಗಳಿಗೂ ಅನ್ವಯಿಸುತ್ತವೆ ಎಂದಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರದ ಅಧ್ಯಕ್ಷ ಸುರ್ಜಿತ್ ಸಿಂಗ್ ಗಾಂಧಿ ಮಾತನಾಡಿ, “ಉತ್ತರಾಖಂಡದ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರವು ರೂಪಿಸಿರುವ ಏಕರೂಪದ ಶಿಕ್ಷಣ ನೀತಿಯು ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಶಾಲೆಗಳಿಗೆ ಅನ್ವಯಿಸುತ್ತದೆ ಎಂದು ಪುಷ್ಕರ್ ಸಿಂಗ್ ಧಾಮಿ ಸರ್ಕಾರ ಸ್ಪಷ್ಟಪಡಿಸಿದೆ. ನೋಂದಾಯಿತ ಮದರಸಾಗಳು ಈಗ ಶಾಲೆಗಳಾಗಿವೆ. ಆದ್ದರಿಂದ, ಅವು ಶಿಕ್ಷಣ ಇಲಾಖೆ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರವು ನಿಗದಿಪಡಿಸಿದ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕು. ಇನ್ಮುಂದೆ ವಾರದ ರಜೆಯು ಶುಕ್ರವಾರದ ಬದಲಿಗೆ ಭಾನುವಾರವೇ ಇರಲಿದೆ” ಎಂದು ತಿಳಿಸಿದರು.
ಅಲ್ಪಸಂಖ್ಯಾತ ಶಿಕ್ಷಣ ಮಂಡಳಿ ಸ್ಥಾಪನೆ:
ಧಾಮಿ ಸರ್ಕಾರವು ಉತ್ತರಾಖಂಡ ಮದರಸಾ ಮಂಡಳಿಯನ್ನು ರದ್ದುಗೊಳಿಸಿ ‘ಅಲ್ಪಸಂಖ್ಯಾತ ಶಿಕ್ಷಣ ಮಂಡಳಿ’ಯನ್ನು ಸ್ಥಾಪಿಸಿದೆ. ಇದರ ವ್ಯಾಪ್ತಿಗೆ ಮುಸ್ಲಿಂ, ಸಿಖ್, ಪಾರ್ಸಿ, ಜೈನ್ ಮತ್ತು ಬೌದ್ಧ ಸಮುದಾಯಗಳಿಗೆ ಸೇರಿದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ತರಲಾಗಿದೆ. ಈ ಹಿಂದೆ ರಾಜ್ಯದ ಅಲ್ಪಸಂಖ್ಯಾತ ಮದರಸಾ ಚೌಕಟ್ಟಿನಡಿಯಲ್ಲಿ 452 ಮಾನ್ಯತೆ ಪಡೆದ ಮದರಸಾಗಳಿದ್ದವು. ಅವುಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ 76 ಮದರಸಾಗಳಿಗೆ ಪ್ರಾಧಿಕಾರವು ‘ಶಾಲೆಗಳು’ ಎಂದು ಮಾನ್ಯತೆ ನೀಡಿದೆ.
ಇದನ್ನೂ ಓದಿ: ಬಂಗಾಳದಲ್ಲಿ 252 ಅಕ್ರಮ ಮದರಸಾಗಳಿಗೆ ಬೀಗ: ಬಾಂಗ್ಲಾ ಉಗ್ರರ ಆಶ್ರಯ ತಾಣ ಎಂದ ಸಚಿವ ದಿಲೀಪ್ ಘೋಷ್
ರಾಷ್ಟ್ರೀಯ ಪಠ್ಯಕ್ರಮ ಜಾರಿ:
ಈ ಮದರಸಾಗಳಲ್ಲಿ ಸುಮಾರು 30,000 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪಠ್ಯಕ್ರಮವನ್ನು ಜಾರಿಗೆ ತರಲು ಧಾಮಿ ಸರ್ಕಾರ ಒತ್ತು ನೀಡಿದೆ. ಇನ್ನುಳಿದ 114 ಮದರಸಾಗಳ ಅರ್ಜಿಗಳು ಪ್ರಸ್ತುತ ಶಿಕ್ಷಣ ಇಲಾಖೆಯ ಪರಿಶೀಲನೆಯಲ್ಲಿವೆ. ಡೆಹ್ರಾಡೂನ್ ಜಿಲ್ಲೆಯ 41 ಮದರಸಾಗಳಲ್ಲಿ 6, ಹರಿದ್ವಾರ ಜಿಲ್ಲೆಯ 270ರಲ್ಲಿ 44, ನೈನಿತಾಲ್ ಜಿಲ್ಲೆಯ 18ರಲ್ಲಿ 2 ಹಾಗೂ ಉಧಮ್ ಸಿಂಗ್ ನಗರ ಜಿಲ್ಲೆಯ 119 ಮದರಸಾಗಳಲ್ಲಿ 24 ಮದರಸಾಗಳಿಗೆ ಮಾನ್ಯತೆ ನೀಡಲಾಗಿದೆ. ಶಿಕ್ಷಣ ಇಲಾಖೆ ಮತ್ತು ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯಿಲ್ಲದೆ ಮದರಸಾಗಳು ಕಾರ್ಯಾಚರಣೆ ನಡೆಸುವಂತಿಲ್ಲ ಹಾಗೂ ಇಂತಹ ಸಂಸ್ಥೆಗಳನ್ನು ಸೀಲ್ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ