ಕೇಂದ್ರ ಸರ್ಕಾರದ ಲಸಿಕೆ ದರ ನೀತಿ ವಿರೋಧಿಸಿ ಕೇರಳದಲ್ಲಿ ಲಸಿಕೆ ಚಾಲೆಂಜ್: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಒಂದೇ ದಿನ ಲಭಿಸಿದ್ದು ₹1.3 ಕೋಟಿ

|

Updated on: Apr 23, 2021 | 8:14 PM

Vaccine Challenge: ಕೇಂದ್ರ ಸರ್ಕಾರದ ಸಹಾಯವಿಲ್ಲದೆ ರಾಜ್ಯದ ಜನರಿಗೆ ಉಚಿತ ಲಸಿಕೆ ಪೂರೈಸಲು ನಿರ್ಧರಿಸಿರುವ ಕೇರಳ ಸರ್ಕಾರ ಲಸಿಕೆ ಚಾಲೆಂಜ್ ಸ್ವೀಕರಿಸಿ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ (CMDRF) ಧನ ಸಹಾಯ ನೀಡಲು ಕರೆ ನೀಡಿದೆ.

ಕೇಂದ್ರ ಸರ್ಕಾರದ ಲಸಿಕೆ ದರ ನೀತಿ ವಿರೋಧಿಸಿ ಕೇರಳದಲ್ಲಿ ಲಸಿಕೆ ಚಾಲೆಂಜ್: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಒಂದೇ ದಿನ ಲಭಿಸಿದ್ದು ₹1.3 ಕೋಟಿ
ಪಿಣರಾಯಿ ವಿಜಯನ್
Follow us on

ತಿರುವನಂತಪುರಂ: ಕೊವಿಡ್ ಲಸಿಕೆಗೆ ಪ್ರತ್ಯೇಕ ದರ ನಿರ್ಣಯಿಸಿರುವ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಕೇರಳದಲ್ಲಿ ಲಸಿಕೆ ಚಾಲೆಂಜ್ ಅಭಿಯಾನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕೊವಿಡ್ ಲಸಿಕೆಗೆ ಬೇರೆ ಬೇರೆ ದರ ನಿರ್ಣಯಿಸಿದರೂ ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡುವುದಾಗಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಸಹಾಯವಿಲ್ಲದೆ ರಾಜ್ಯದ ಜನರಿಗೆ ಲಸಿಕೆ ಪೂರೈಸಲು ನಿರ್ಧರಿಸಿರುವ ಕೇರಳ ಸರ್ಕಾರ ಲಸಿಕೆ ಚಾಲೆಂಜ್ ಸ್ವೀಕರಿಸಿ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ (CMDRF) ಧನ ಸಹಾಯ ನೀಡಲು ಕರೆ ನೀಡಿದೆ. ಈ ಅಭಿಯಾನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಶುಕ್ರವಾರ (ಏಪ್ರಿಲ್ 23) ರಂದು ₹1.3 ಕೋಟಿಗಿಂತಲೂ ಹೆಚ್ಚು ಹಣ ದೇಣಿಗೆಯಾಗಿ ಲಭಿಸಿದೆ.ಈ ಅಭಿಯಾನ ಸಕ್ರಿಯವಾಗಿದ್ದು,ದೇಣಿಗೆ ಹರಿದುಬರುತ್ತಲೇ ಇದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಕೊವಿಡ್ ಸಂಕಷ್ಟದ ನಡುವೆಯೂ ಫೆಬ್ರುವರಿ 27, 2020ರಿಂದ 2021 ಏಪ್ರಿಲ್ 23ರವರೆಗೆ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ₹525.3 ಕೋಟಿ ದೇಣಿಗೆ ಲಭಿಸಿದೆ . ರಾಜ್ಯದಲ್ಲಿ ಕೊವಿಡ್ ಸಂಬಂಧಿತ  ಕಾರ್ಯಗಳಿಗಾಗಿ  ರಾಜ್ಯ ಸರ್ಕಾರ  ಇಲ್ಲಿಯವರೆಗೆ ₹730.22 ಕೋಟಿ ವ್ಯಯಿಸಿದೆ. ₹ 246 ಕೋಟಿ ಎಲೆಕ್ಟ್ರಾನಿಕ್ ಪೇಮೆಂಟ್ ಮೂಲಕ ಲಭಿಸಿದೆ ಎಂದು  ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಏಪ್ರಿಲ್ 21 ಬುಧವಾರದಂದು ಸಾಮಾಜಿಕ ಮಾಧ್ಯಮಗಳಲ್ಲಿ #VaccineChallenge ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಈ ಅಭಿಯಾನ ಆರಂಭವಾಗಿತ್ತು. ಕೇರಳದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ ತಕ್ಷಣವೇ ಈ ಚಾಲೆಂಜ್ ಆರಂಭವಾಗಿದ್ದು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಜನರು ಈ ಚಾಲೆಂಜ್ ನಲ್ಲಿ ಭಾಗವಹಿಸಿದ್ದಾರೆ .

ಲಸಿಕೆ ಚಾಲೆಂಜ್​ನಲ್ಲಿ ಭಾಗಿಯಾಗುವುದು ಹೇಗೆ?
donation.cmdrf.kerala.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿರುವ Donate ಟ್ಯಾಬ್ ಕ್ಲಿಕ್ ಮಾಡಿ ದೇಣಿಗೆ ನೀಡಬಹುದಾಗಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ,ವಾಲೆಟ್ ಮೂಲಕ ಹಣ ಪಾವತಿ ಮಾಡಬಹುದು. ಇದಾದನಂತರ ಇಮೇಲ್ ಮತ್ತು ಫೋನ್ ನಂಬರ್ ನಮೂದಿಸಿ ದೇಣಿಗೆ ನೀಡಲು ಬಯಸುವ ಮೊತ್ತ ನಮೂದಿಸಿ ಕ್ಲಿಕ್ ಮಾಡಿದರೆ ಹಣ ದೇಣಿಗೆ ರೂಪದಲ್ಲಿ ಪರಿಹಾರ ನಿಧಿಗೆ ಸಂದಾಯವಾಗುತ್ತದೆ. ದೇಣಿಗೆ ನೀಡಿದ ರಸೀದಿಯನ್ನೂ ಇಲ್ಲಿ ಡೌನ್​ಲೋಡ್ ಮಾಡಬಹುದು. ಗೂಗಲ್ ಪೇ ಮೂಲಕವೂ ಪರಿಹಾರ ನಿಧಿಗೆ ಹಣ ನೀಡಬಹುದು.

ಕೇರಳಿಗನೆಂದು ಹೇಳಲು ಹೆಮ್ಮೆಯಾಗುತ್ತಿದೆ: ಪಿಣರಾಯಿ ವಿಜಯನ್
ಕೊವಿಡ್ ಲಸಿಕೆ ಖರೀದಿ ಮಾಡಲು ಎಲ್ಲರೂ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ಕರೆ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳಿಗನೆಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಜನರ ಸುರಕ್ಷೆ ಮತ್ತು ರಾಜ್ಯದ ಹಿತಕ್ಕಾಗಿ ಒಗ್ಗಟ್ಟಿನಿಂದ ನಿಂತವರು ಕೇರಳದವರು. ಈ ಮೂಲಕ ನಾವು ಜಗತ್ತಿಗೆ ಮಾದರಿಯಾಗಿದ್ದೇವೆ.ಕೇರಳಿಗನೆಂದು ಹೆಮ್ಮೆ ಪಡಲು ಈಗ ಮತ್ತೊಂದು ಸಂದರ್ಭ ಲಭಿಸಿದೆ ಎಂದು ಶುಕ್ರವಾರ ಕೊವಿಡ್ ಅವಲೋಕನ ಸಭೆ ನಂತರ ಮಾತನಾಡಿದ ವಿಜಯನ್ ಹೇಳಿದ್ದಾರೆ. ಲಸಿಕೆ ಖರೀದಿಗಾಗಿ ಹಣ ಸಂಗ್ರಹಿಸಲು ಸಿಎಂಡಿಆರ್​ಡಿಎಫ್​ನಲ್ಲಿ ಪ್ರತ್ಯೇಕ ಖಾತೆ ಆರಂಭಿಸುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Rajinikanth : ಕೇರಳದ ಹುಡುಗನೊಬ್ಬ 300 ರೂಬಿಕ್ ಕ್ಯೂಬ್​ ನಲ್ಲಿ ನಟ ರಜನಿಕಾಂತ್ ಅವರ ಮುಖ ಸೃಷ್ಟಿಸಿದ್ದಾರೆ.!

(Vaccine Challenge in Kerala Over Rs 1.3 cr contributed to CMDRF on Friday chief minister Pinarayi Vijayan requests contribution)

Published On - 8:12 pm, Fri, 23 April 21