ಲಖನೌ: ಕಾಶಿಯ ಜ್ಞಾನವಾಪಿ ಮಸೀದಿಯ (Gyanvapi Mosque) ವಿಡಿಯೊ ಸಮೀಕ್ಷೆಯ ವರದಿಗಳು ನ್ಯಾಯಾಲಯ ತಲುಪಿದ್ದು, ವಿಡಿಯೊ ತುಣುಕು ಮತ್ತು ಛಾಯಾಚಿತ್ರಗಳು ಸೋರಿಕೆಯಾಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ವಾರಾಣಸಿ ಮಸೀದಿಯಲ್ಲಿ ಹಿಂದೂ ದೇವತೆಗಳ ಶಿಲ್ಪಗಳು ಇರುವ ಕಾರಣ ಪೂಜೆಗೆ ಅವಕಾಶ ಕಲ್ಪಿಸಬೇಕೆಂಬು ಭಕ್ತರ ಪರ ವಕೀಲರು ಅರ್ಜಿ ಸಲ್ಲಿಸಿದ್ದರೆ, ಈ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಕೋರಿ ಮುಸ್ಲಿಂ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಇಂದು ನಡೆಯಲಿರುವ ವಿಚಾರಣೆಯಲ್ಲಿ ಮೊದಲು ಮುಸ್ಲಿಮ್ ಪರ ವಕೀಲರ ವಾದ ಆಲಿಸಲಿರುವ ನ್ಯಾಯಾಲಯವು ನಂತರ ಹಿಂದೂ ಪರ ವಕೀಲರ ಪ್ರತಿವಾದ ಆಲಿಸಲಿದೆ.
ಮೂರು ದಿನಗಳ ವಿಡಿಯೊ ಸಮೀಕ್ಷೆಯ ನಂತರ ಜ್ಞಾನವಾಪಿ ಮಸೀದಿಯ ವಿಡಿಯೊ ಸರ್ವೆ ವರದಿ ಸಿದ್ಧಪಡಿಸಲಾಗಿತ್ತು. ವರದಿಯು ಈಗಾಗಲೇ ವಾರಾಣಸಿ ಕೋರ್ಟ್ ತಲುಪಿದ್ದು, ಲಿಖಿತ ರೂಪದಲ್ಲಿ ವಾದದ ಅಂಶಗಳು ಮತ್ತು ಆಕ್ಷೇಪಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ವಾದಿ ಮತ್ತು ಪ್ರತಿವಾದಿಗಳಿಗೆ ಇಂದು ಸಮೀಕ್ಷೆಯ ವಿಡಿಯೊ ಮತ್ತು ಫೋಟೊಗಳನ್ನು ಒದಗಿಸುವ ಸಾಧ್ಯತೆಯಿದೆ. ಇದು ಮಾಧ್ಯಮಗಳಿಗೆ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ವಾರಾಣಸಿ ಸಿವಿಲ್ ಕೋರ್ಟ್ ಸೂಚಿಸಿದೆ.
ಕೋರ್ಟ್ ಸೂಚನೆ ಮೇರೆಗೆ ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದಿದ್ದ ವಿಡಿಯೊ ಸಮೀಕ್ಷೆಯ ವೇಳೆ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದ್ದರು. ಇದಕ್ಕೆ ಸಂಬಂಧಿಸಿದ ಹಲವು ಫೋಟೊ ಹಾಗೂ ವಿಡಿಯೊ ತುಣುಕುಗಳು ಮಾಧ್ಯಮಗಳಿಗೆ ಬಿಡುಗಡೆಯಾಗಿತ್ತು.
ಆದರೆ ಮಸೀದಿ ಸಮಿತಿಯ ಸದಸ್ಯರು ಒಪ್ಪಿರಲಿಲ್ಲ. ಇದು ವಝೂಖಾನಾದೊಳಗೆ ಅಳವಡಿಸಿದ್ದ ಕಾರಂಜಿ ವ್ಯವಸ್ಥೆಯ ಭಾಗವಾಗಿತ್ತು. ನಮಾಜ್ಗೆ ಮೊದಲು ಮುಸ್ಲಿಮರು ಕೈಕಾಲು ಸ್ವಚ್ಛಗೊಳಿಸಲು ಇದೇ ನೀರು ಬಳಸುತ್ತಿದ್ದರು. ಎಂದು ಮಸೀದಿ ಸಮಿತಿಯು ವಾದಿಸಿತ್ತು.
ಏನಿದು ವಿವಾದ?
ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಂತೆ ಜ್ಞಾನವಾಪಿ ಮಸೀದಿ ಇದೆ. 16ನೇ ಶತಮಾನದಲ್ಲಿ ಔರಂಗಜೇಬನ ಆಳ್ವಿಕೆಯಲ್ಲಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಭಕ್ತರ ಆರೋಪ. ಮಸೀದಿಯ ಕೆಲ ಗೋಡೆ, ಕಂಬಗಳ ಮೇಲಿರುವ ಶಿಲ್ಪಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಮಹಿಳೆಯರೂ ಅರ್ಜಿ ಸಲ್ಲಿಸಿದ್ದರು.
ಮಸೀದಿ ಆವರಣದಲ್ಲಿ ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆಯು 1991ರ ಕಾನೂನು ಉಲ್ಲಂಘಿಸುತ್ತದೆ. ದೇಶದ ಯಾವುದೇ ಶ್ರದ್ಧಾಕೇಂದ್ರದ ಸ್ಥಿತಿಯನ್ನು ಬದಲಿಸುವಂತಿಲ್ಲ ಎಂದು ಕಾಯ್ದೆ ಸ್ಪಷ್ಟಪಡಿಸುತ್ತದೆ. ಯಥಾಸ್ಥಿತಿ ಕಾಪಾಡಿಕೊಳ್ಳುವ ಕುರಿತ ತನ್ನ ಮನವಿಯನ್ನು ಮೊದಲು ವಿಚಾರಣೆಗೆ ಅಂಗೀಕರಿಸಬೇಕೆಂದು ಮಸೀದಿ ಸಮಿತಿಯು ವಿನಂತಿಸಿತ್ತು. ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. ಆದರೆ ಸುಪ್ರೀಂಕೋರ್ಟ್, ‘ಇದು ತುಂಬಾ ಸಂಕೀರ್ಣ ಮತ್ತು ಸೂಕ್ಷ್ಮ ವಿಚಾರ. ಈ ಸಂಬಂಧದ ವಾದವನ್ನು ವಿಚಾರಣಾ ನ್ಯಾಯಾಲಯಕ್ಕಿಂತಲೂ ಅನುಭವಿ ನ್ಯಾಯಾಧೀಶರು ಆಲಿಸುವುದು ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ’ ಹೇಳಿ, ವಾರಾಣಸಿ ಕೋರ್ಟ್ಗೆ ಪ್ರಕರಣ ವರ್ಗಾಯಿಸಿತ್ತು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:28 am, Mon, 30 May 22