ದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಆಯ್ಕೆಯಾಗಿರುವ ವಾರಣಾಸಿ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷದಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳೇನು? ವಾರಣಾಸಿ ಜಿಲ್ಲೆಯ ಎಲ್ಲ 8 ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸುಲಭದ ತುತ್ತಾಗುತ್ತಾ? ಗೆಲುವಿಗಾಗಿ ಎಸ್ಪಿ ಪಕ್ಷ ಮಾಡಿರುವ ತಂತ್ರಗಳೇನು? ಈ ಬಗ್ಗೆ ಟಿವಿ9 ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ. ಉತ್ತರ ಪ್ರದೇಶದ ವಾರಣಾಸಿ ಭಾರತದ ಪುರಾತನ ನಗರಿ, ಧರ್ಮ ನಗರಿ. ಕಾಶೀ ಭಾರತದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತವಾಗಿದೆ. ವಾರಣಾಸಿ ದೇವಾಲಯಗಳ ನಗರಿ. ವಾರಣಾಸಿಯಲ್ಲಿ ಎಲ್ಲೇ ಹೋದರೂ ದೇವಾಲಯಗಳ ದರ್ಶನವಾಗುತ್ತೆ. ಇಂಥ ವಾರಣಾಸಿಯನ್ನ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರೋದು ಪ್ರಧಾನಿ ನರೇಂದ್ರ ಮೋದಿ. ಮೋದಿ ವಾರಣಾಸಿಯಿಂದ ಲೋಕಸಭಾ ಸದಸ್ಯರಾಗಿ ಈ ವರ್ಷದ ಮೇ ತಿಂಗಳಿಗೆ 8 ವರ್ಷ ಪೂರ್ತಿಯಾಗುತ್ತಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಈಗ ಹೇಗಿದೆ? 2014ಕ್ಕೂ ಮೊದಲು ಹೇಗಿತ್ತು? ಎಂಬ ಪ್ರಶ್ನೆ ಜನರ ಮನಸ್ಸಲ್ಲಿ ಮೂಡುವುದು ಸಹಜ.
ನಾವು 2014ರ ಲೋಕಸಭಾ ಚುನಾವಣೆ ವೇಳೆ ವಾರಣಾಸಿಗೆ ಭೇಟಿ ಕೊಟ್ಟಿದ್ದೇವು. ಈಗ 2022ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಮತ್ತೊಮ್ಮೆ ವಾರಣಾಸಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಮತ್ತೊಮ್ಮೆ ಕಾಶೀ ವಿಶ್ವನಾಥ ಮಂದಿರದ ದರ್ಶನ ಪಡೆಯುವ ಅವಕಾಶ ಸಿಕ್ಕಿತ್ತು. ಜೊತೆಗೆ ವಾರಣಾಸಿಯ ಜನರನ್ನು ಭೇಟಿಯಾಗಿ ಮಾತನಾಡುವ ಅವಕಾಶ ಸಿಕ್ಕಿತ್ತು. 2014ಕ್ಕೂ ಮೊದಲು ವಾರಣಾಸಿ ಹೇಗಿತ್ತು? ಈಗ ಹೇಗಿದೆ ? ಎನ್ನುವುದನ್ನು ಕಣ್ಣಾರೆ ಕಂಡು ಹೋಲಿಸಿ ನೋಡುವ ಅವಕಾಶವೂ ನಮ್ಮೆದುರು ಇತ್ತು.
ವಾರಣಾಸಿಯು ಈಗ ಸಂಪೂರ್ಣ ಕ್ಲೀನ್ ಸಿಟಿ
ವಾರಣಾಸಿಯಲ್ಲಿ ಈ ಬಾರಿ ಕಂಡ ಪ್ರಮುಖ ಬದಲಾವಣೆ ಅಂದರೆ, ವಾರಣಾಸಿಯು ಈಗ ಸಂಪೂರ್ಣ ಕ್ಲೀನ್ ಸಿಟಿಯಾಗಿರುವುದು. ವಾರಣಾಸಿಯು ಗಲ್ಲಿಗಳಿಗೆ ಪ್ರಸಿದ್ದಿ. ಗಲ್ಲಿಗಳಿಂದ ಹಿಡಿದು ನಗರದ ಎಲ್ಲ ರಸ್ತೆ, ಫುಟ್ ಪಾತ್, ಪ್ರಮುಖ ರಸ್ತೆ, ಹೆದ್ದಾರಿಗಳಲ್ಲಿ ಸ್ವಚ್ಛತೆ ಜನರ ಗಮನ ಸೆಳೆಯುತ್ತಿತ್ತು. ಈ ಮೊದಲು ಯಾವುದೇ ಗಲ್ಲಿಗೆ ಹೋದರೂ ಕಾಲಿಡಲು ಆಗುತ್ತಿರಲಿಲ್ಲ. ಗಲೀಜು, ಗಬ್ಬುವಾಸನೆ ಮೂಗಿಗೆ ಬಡಿಯುತ್ತಿತ್ತು. ಆದರೆ, ಈಗ ವಾರಣಾಸಿಯ ಗಲ್ಲಿಗಳಲ್ಲೂ ಸ್ಪಚ್ಛತೆ ಇದೆ. ಕಾಶೀ ಕೊತ್ವಾಲ್ ಮಂದಿರದ ಗಲ್ಲಿಗಳೇ ಆಗಲೀ, ಕಾಶೀ ವಿಶ್ವನಾಥ ಮಂದಿರದ ಸುತ್ತ ಇರುವ ಗಲ್ಲಿಗಳಲ್ಲೇ ಆಗಲಿ ಸ್ವಚ್ಛತೆ ಇದೆ.
ಮೊದಲೆಲ್ಲ ದನಗಳ ಸಗಣಿ, ಕಸ ಗಲ್ಲಿಗಳಲ್ಲಿರುತ್ತಿತ್ತು. ಮನೆ, ಅಂಗಡಿಗಳ ಗಲೀಜು ಅನ್ನು ಜನರು ಗಲ್ಲಿಗಳಿಗೆ ಹಾಕುತ್ತಿದ್ದರು. ಗಲ್ಲಿಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿತ್ತು. ಆದರೆ ಈಗ ವಾರಣಾಸಿಯ ಜನರಲ್ಲಿ ಸ್ವಚ್ಚತೆಯ ಬಗ್ಗೆ ಬಾರಿ ಜಾಗೃತಿ ಬಂದಿದೆ. ತಾವಾಗಿಯೇ ತಮ್ಮ ಮನೆ, ಅಂಗಡಿಗಳ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದಾರೆ.
ಜೊತೆಗೆ ವಾರಣಾಸಿ ಪಾನ್ ಬೀಡಾಗೂ ಫೇಮಸ್ಸು. ಜನರು ಪಾನ್ ಬೀಡಾಗಳನ್ನು ತಿಂದು ಮೊದಲ್ಲೆಲ್ಲ ಗಲ್ಲಿ, ಗೋಡೆಗಳಿಗೆ ಪಾನ್ ಬೀಡಾ ಉಗಿಯುತ್ತಿದ್ದರು. ಆದರೇ, ಈಗಲೂ ವಾರಣಾಸಿ ಜನರು ಪಾನ್ ಬೀಡಾ ತಿನ್ನುತ್ತಾರೆ. ಆದರೇ, ರಸ್ತೆ, ಗೋಡೆ, ಗಲ್ಲಿಗಳಿಗೆ ತಿಂದ ಪಾನ್ ಬೀಡಾ ಉಗಿಯುತ್ತಿಲ್ಲ. ಗಲ್ಲಿಗಳನ್ನು ಜನರೇ ಸ್ವಪ್ರೇರಣೆಯಿಂದ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದಾರೆ. ವಾರಣಾಸಿಯ ರಸ್ತೆ, ಫುಟ್ ಪಾತ್ ಗಳಲ್ಲೂ ಈಗ ಸ್ವಚ್ಚತೆ ಇದೆ. ಸ್ವಚ್ಛತೆಯೇ ವಾರಣಾಸಿಯಲ್ಲಿ ಕಳೆದ 8 ವರ್ಷದಲ್ಲಿ ಆಗಿರುವ ಪ್ರಮುಖ, ದೊಡ್ಡ ಬದಲಾವಣೆ. ವಾರಣಾಸಿಯ ನಗರ ಪಾಲಿಕೆಯು ಬೆಳಿಗ್ಗೆ, ಸಂಜೆ ಜನರ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುತ್ತಿದೆ. ಕೇಂದ್ರ ಸರ್ಕಾರದ ಸ್ವಚ್ಛಾ ಭಾರತ್ ಅಭಿಯಾನ, ಪ್ರಧಾನಿ ಮೋದಿ ಸ್ವಚ್ಚತೆಯ ಬಗ್ಗೆ ಆಡಿದ ಮಾತು, ಮಾಡಿದ ಕೆಲಸಗಳೇ ಜನರ ಮೇಲೆ ಪ್ರಭಾವ ಬೀರಿವೆ.
ಕಾಶೀ ವಿಶ್ವನಾಥ್ ಮಂದಿರದ ಕಾರಿಡಾರ್ ನಿರ್ಮಾಣ
ಇನ್ನೂ ಕಾಶಿಯ ಪ್ರಮುಖ ಕೇಂದ್ರ ಬಿಂದು ಸ್ಥಳವೇ ಕಾಶೀ ವಿಶ್ವನಾಥ್ ಮಂದಿರ. ಮಂದಿರಕ್ಕೆ ಈ ಮೊದಲು ಕಿರಿದಾದ ರಸ್ತೆಗಳ ಮೂಲಕ ಹೋಗಬೇಕಾಗಿತ್ತು. ಈಗ ವಿಶಾಲ ರಸ್ತೆ ನಿರ್ಮಿಸಲಾಗಿದೆ. ಕಾಶೀ ವಿಶ್ವನಾಥ್ ಕಾರಿಡಾರ್ ಯೋಜನೆಯನ್ನು 800 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ. 300 ಕೋಟಿ ರೂಪಾಯಿ ವೆಚ್ಚದಲ್ಲಿ ಮಂದಿರವನ್ನು ಫುನರ್ ನವೀಕರಿಸಲಾಗಿದೆ. 500 ಕೋಟಿ ರೂಪಾಯಿ ವೆಚ್ಚದಲ್ಲಿ ಮಣಿಕಾರ್ಣೀಕಾ ಘಾಟ್ ಅಭಿವೃದ್ದಿಪಡಿಸಲಾಗುತ್ತಿದೆ. ಕಾಶೀ ವಿಶ್ವನಾಥ್ ಮಂದಿರದಲ್ಲಿ ಈ ಮೊದಲು 3 ಸಾವಿರ ಚದರ ಅಡಿ ಮಾತ್ರ ಜಾಗ ಇತ್ತು. ಈಗ ಕಾಶೀ ವಿಶ್ವನಾಥ್ ಮಂದಿರ ಕಾರಿಡಾರ್ ನಿರ್ಮಿಸುವ ಮೂಲಕ ಕಾರಿಡಾರ್ ನಲ್ಲಿ 5 ಲಕ್ಷ ಚದರ ಅಡಿ ಜಾಗ ಇರುವಂತೆ ನೋಡಿಕೊಳ್ಳಲಾಗಿದೆ. ಮಂದಿರದ ಒಳಭಾಗ ಸಂಪೂರ್ಣ ಟೈಲ್ಸ್ ಗಳಿಂದ ಹೊಳೆಯುತ್ತಿದೆ. ದೇವಾಲಯದ ಒಳಗಿನ ನಾಲ್ಕು ಭಾಗದಲ್ಲಿ ಜನರು ಕುಳಿತುಕೊಂಡು ಪ್ರಾರ್ಥನೆ, ಧ್ಯಾನ ಮಾಡಲು ಸ್ಥಳಾವಕಾಶ ಇದೆ. ಈ ಮೊದಲು ಕಾಶೀ ವಿಶ್ವನಾಥ್ ಮಂದಿರದ ಒಳಭಾಗದಲ್ಲಿ ಭಕ್ತರು ಕುಳಿತುಕೊಂಡು ಪ್ರಾರ್ಥನೆ , ಧ್ಯಾನ ಮಾಡಲು ಸ್ಥಳಾವಕಾಶವೇ ಇರಲಿಲ್ಲ. ಈಗ ಮಂದಿರದೊಳಗೆ ಏಕಕಾಲಕ್ಕೆ ಸಾವಿರಾರು ಜನರು ಪೂಜೆ, ಪ್ರಾರ್ಥನೆ, ಧ್ಯಾನ ಮಾಡಬಹುದು. ಕಾಶೀ ವಿಶ್ವನಾಥ್ ದೇವಾಲಯದ ಪ್ರಾಚೀನತೆ, ಧಾರ್ಮಿಕ ಪರಂಪರೆ ಹಾಗೂ ಆಧುನೀಕತೆಯನ್ನು ಕಾಪಾಡಿಕೊಂಡು ನವೀಕರಣ ಮಾಡಿರುವುದು ವಿಶೇಷ.
ಮಂದಿರಕ್ಕೆ ಜ್ಞಾನವ್ಯಾಪಿ ಮಸೀದಿ ಭಾಗ ಹಾಗೂ ಮಣಿಕಾರ್ಣಿಕಾ ಘಾಟ್ ಭಾಗಗಳೆರಡರಿಂದಲೂ ಭಕ್ತರಿಗೆ ಪ್ರವೇಶಾವಕಾಶ ಇದೆ. ಕಾಶೀ ವಿಶ್ವನಾಥ್ ಮಂದಿರ ಹಾಗೂ ಕಾರಿಡಾರ್ ಅನ್ನು ಹೀಗೆ ನಿರ್ಮಾಣ ಮಾಡಬಹುದು, ಮಂದಿರವನ್ನು ಈ ಸ್ವರೂಪದಲ್ಲಿ ನೋಡ್ತೇವೆ ಎಂಬ ನಂಬಿಕೆ, ನಿರೀಕ್ಷೆಯೇ ಭಕ್ತರಲ್ಲಿ ಇರಲ್ಲಿಲ್ಲ. ಮಣಿಕಾರ್ಣಿಕಾ ಘಾಟ್ ನಲ್ಲಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಕಾರಿಡಾರ್ ಮೂಲಕ ಸೀದಾ ಬಂದು ಕಾಶೀ ವಿಶ್ವನಾಥ್ ದೇವಾಲಯ ಪ್ರವೇಶ ಮಾಡಿ ದೇವರ ದರ್ಶನ ಪಡೆಯಬಹುದು. ಮಣಿಕಾರ್ಣಿಕಾ ಘಾಟ್ ಮೂಲಕ ಐದೇ ನಿಮಿಷದಲ್ಲಿ ಭಕ್ತರು ದೇವಾಲಯ ಪ್ರವೇಶ ಮಾಡಬಹುದು. ಮಂದಿರದ ಬಾಗಿಲಲ್ಲಿ ನಿಂತು ನೋಡಿದರೇ, ಕಣ್ಣಳತೆ ದೂರದಲ್ಲೇ ಗಂಗಾ ನದಿ ಇದೆ. ಮಂದಿರದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕಾರ್ ಗಳ ಸಂಚಾರ ನಿಷೇಧಿಸಲಾಗಿದೆ. ಮಂದಿರದ ರಸ್ತೆಯಲ್ಲಿ ಯಾವಾಗಲೂ ಗಿಜಿಗುಡುವ ಸಾವಿರಾರು ಭಕ್ತರ ದಂಡೇ ಇರುತ್ತೆ. ನಿತ್ಯ 50 ಸಾವಿರದಿಂದ ಒಂದು ಲಕ್ಷದವರೆಗೂ ಭಕ್ತರು ಕಾಶೀ ವಿಶ್ವನಾಥ್ ಮಂದಿರಕ್ಕೆ ಭೇಟಿ ನೀಡುತ್ತಾರೆ. ಹೊಸದಾಗಿ ಕಾಶೀ ವಿಶ್ವನಾಥ್ ಮಂದಿರದ ಕಾರಿಡಾರ್ ನಿರ್ಮಾಣವಾಗಿ ಲೋಕಾರ್ಪಣೆಯಾದ ಬಳಿಕ ಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ವಾರಣಾಸಿಗೆ ವಿಮಾನದ ಮೂಲಕ ಬರುವ ಪ್ರಯಾಣಿಕರ ಸಂಖ್ಯೆ ಈಗ ಹೆಚ್ಚಾಗಿದೆ
ಮಣಿಕಾರ್ಣಿಕಾ ಘಾಟ್ ನಿಂದ ಎರಡು ಘಾಟ್ ದಾಟಿ ಮುಂದೆ ಹೋದರೆ, ದಶ ಅಶ್ವಮೇಧ ಘಾಟ್ ಸಿಗುತ್ತೆ. ದಶ ಅಶ್ವಮೇಧ ಘಾಟ್ ನಲ್ಲಿ ಈಗ ಸ್ವಚ್ಛತೆ ಇದೆ. ವಾರಣಾಸಿ ನಗರದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ವಾರಣಾಸಿ ಏರ್ ಪೋರ್ಟ್ ಅನ್ನು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಆಗಿ ಮೇಲ್ದರ್ಜೆಗೇರಿಸಲಾಗಿದೆ. ವಾರಣಾಸಿಯಿಂದ ಬೆಂಗಳೂರಿಗೆ ನಿತ್ಯ ಒಂದೆರೆಡು ಡೈರೆಕ್ಟ್ ವಿಮಾನಗಳಿವೆ. ವಾರಣಾಸಿಗೆ ವಿಮಾನದ ಮೂಲಕ ಬರುವ ಪ್ರಯಾಣಿಕರ ಸಂಖ್ಯೆ ಈಗ ಹೆಚ್ಚಾಗಿದೆ. ವಾರಣಾಸಿ ನಗರದಿಂದ ಏರ್ ಪೋರ್ಟ್ ಗೆ ಹೋಗಲು 22 ಕಿಲೋಮೀಟರ್ ಉದ್ದದ ವಿಶಾಲ ರಸ್ತೆ ನಿರ್ಮಿಸಲಾಗಿದೆ.
ವಾರಣಾಸಿಯಲ್ಲಿ ವಿದ್ಯುತ್ ವೈರ್ ಗಳನ್ನು ಭೂಗತ ವೈರ್ ಗಳಾಗಿ ಹಾಕಲಾಗಿದೆ. ಕಾಶೀ ಹಿಂದೂ ವಿಶ್ವವಿದ್ಯಾಲಯದಲ್ಲಿ ಟ್ರಾಮಾ ಸೆಂಟರ್ ಆಸ್ಪತ್ರೆ , ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದೆ. ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಜಪಾನ್ ಸಹಯೋಗದಲ್ಲಿ ರುದ್ರಾಕ್ಷ ಆಕಾರದಲ್ಲಿ ಕನ್ವೆಷನ್ ಸೆಂಟರ್ ನಿರ್ಮಿಸಲಾಗಿದೆ. ವಾರಣಾಸಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಎಲೆಕ್ಟ್ರಿಕ್ ತ್ರಿವೀಲ್ಹರ್ ರಿಕ್ಷಾಗಳನ್ನು ಪರಿಚಯಿಸಲಾಗಿದೆ. ಅಂಡರ್ ಗ್ರೌಂಡ್ ವಾಹನ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಬಳಿ ಪಾರ್ಕಿಂಗ್ ಸ್ಥಳಗಳನ್ನ ನಿರ್ಮಿಸಲಾಗಿದೆ.
ವಾರಣಾಸಿಯ ಕಂಟೋನ್ ಮೆಂಟ್ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ
ಗಂಗಾ ನದಿಯಲ್ಲಿ ಅಲಕಾನಂದ ಕ್ರೂಸಿ ಹಡಗಿನಲ್ಲಿ ಜನರು ಪ್ರಯಾಣ ಮಾಡಬಹುದು. 43 ಕಿಲೋಮೀಟರ್ ರಿಂಗ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮಾರ್ಡನ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಜಾರಿ ಮಾಡಲಾಗಿದೆ. 11 ಗಂಗಾ ನದಿ ಘಾಟ್ ಗಳ ಮೆಟ್ಟಿಲುಗಳ ಸೌಂದರೀಕರಣ ಮಾಡಲಾಗಿದೆ. ಮಾರ್ಕಂಡೇಯ ಮಹದೇವ ಮಂದಿರದ ಸೌಂದರೀಕರಣ ಮಾಡಲಾಗಿದೆ. ಪಂಚಕೋಶಿ ಮಾರ್ಗದ ರಸ್ತೆ ಅಭಿವೃದ್ದಿಪಡಿಸಲಾಗಿದೆ. ವಾರಣಾಸಿಯ ಕಂಟೋನ್ ಮೆಂಟ್ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ.
2014 ರ ಜೂನ್ ನಿಂದ 2019ರ ಏಪ್ರಿಲ್ ವರೆಗೆ 21,862 ಕೋಟಿ ರೂಪಾಯಿ ಅನ್ನು ವಾರಣಾಸಿಯ ಅಭಿವೃದ್ದಿ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. 2020ರ ನವಂಬರ್ 9ರಂದು 614 ಕೋಟಿ ರೂಪಾಯಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. 2021ರ ಜುಲೈ 15ರಂದು 1583 ಕೋಟಿ ರೂಪಾಯಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಹೀಗೆ 24 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ವಾರಣಾಸಿಯ ಅಭಿವೃದ್ದಿ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. ವಾರಣಾಸಿಯು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನಲ್ಲಿ ಸೇರಿದ್ದು, ಸ್ಮಾರ್ಟ್ ಸಿಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜೊತೆಗೆ ಜಪಾನ್ ಕ್ಯೂಟೋ ನಗರದ ಜೊತೆಗೆ ಅವಳಿ ಸಿಟಿ ಒಪ್ಪಂದವನ್ನು ಕೇಂದ್ರ ಸರ್ಕಾರ ಮಾಡಿಕೊಂಡಿದೆ. ಹೀಗಾಗಿ ಜಪಾನ್ ನ ಕ್ಯೂಟೋ ನಗರದ ಮಾದರಿಯಲ್ಲೇ ವಾರಣಾಸಿಯನ್ನು ಅಭಿವೃದ್ದಿಪಡಿಸಲಾಗುತ್ತಿದೆ.
ಆದರೆ ವಾರಣಾಸಿಯಲ್ಲಿ ಗಂಗಾ ನದಿ ಸಂಪೂರ್ಣ ಶುದ್ದವಾಗಿಲ್ಲ
ಆದರೆ ವಾರಣಾಸಿಯಲ್ಲಿ ಗಂಗಾ ನದಿ ಸಂಪೂರ್ಣ ಶುದ್ದವಾಗಿಲ್ಲ ಎಂಬುದು ಸ್ಪಷ್ಟ. ಆದರೇ, 2014ಕ್ಕಿಂತ ಮುಂಚಿಗಿಂತ ಈಗ ಸ್ಪಲ್ಪ ಗಂಗಾನದಿ ಸ್ಪಚ್ಛವಾಗಿದೆ ಎಂದು ಗಂಗಾ ನದಿಯಲ್ಲಿ ಬೋಟ್ ರೈಡ್ ಹೋಗಿ ಬಂದ ಜನರು ಹೇಳುತ್ತಾರೆ. ವಾರಣಾಸಿಯು ಪೂರ್ವಾಂಚಲದ ಸೆಂಟರ್. ಉತ್ತರಪ್ರದೇಶದ ಪೂರ್ವಾಂಚಲದಲ್ಲಿ 130 ವಿಧಾನಸಭಾ ಕ್ಷೇತ್ರಗಳಿವೆ. ಪೂರ್ವಾಂಚಲದಲ್ಲಿ 26 ಲೋಕಸಭಾ ಕ್ಷೇತ್ರಗಳಿವೆ. ಹೀಗಾಗಿ ಪೂರ್ವಾಂಚಲದಲ್ಲಿ ಹೆಚ್ಚಿನ ಪ್ರಭಾವ ಬೀರುವ ಉದ್ದೇಶದಿಂದಲೇ ಪ್ರಧಾನಿ ಮೋದಿ ವಾರಣಾಸಿಯಿಂದಲೇ ಲೋಕಸಭೆಗೆ ಸ್ಪರ್ಧಿಸಿದ್ದರು. ಅದರಲ್ಲಿ ಪ್ರಧಾನಿ ಮೋದಿ ಈಗ ಯಶಸ್ವಿಯೂ ಆಗಿದ್ದಾರೆ.
ವಾರಣಾಸಿಯಲ್ಲಿ ಎಲ್ಲ ಅಭಿವೃದ್ದಿ ಕಾರ್ಯಗಳೂ ಆಗಿವೆ. ಗುಜರಾತ್ ಮಾಡೆಲ್ ಅಭಿವೃದ್ದಿ ರೀತಿಯೇ ವಾರಣಾಸಿ ಮಾಡೆಲ್ ಅಭಿವೃದ್ದಿಯನ್ನು ಮಾಡಿ ಪ್ರಧಾನಿ ಮೋದಿ ತೋರಿಸಿದ್ದಾರೆ. ಅಭಿವೃದ್ದಿಯಲ್ಲಿ ಈಗ ಬೇರೆ ನಗರಗಳಿಗೆ ವಾರಣಾಸಿಯೇ ಮಾಡೆಲ್ ಎಂದು ವಾರಣಾಸಿಯ ಬಿಜೆಪಿ ವಕ್ತಾರರು ಹೇಳುತ್ತಾರೆ.
ವಾರಣಾಸಿಯಲ್ಲಿ ಟ್ರಾಫಿಕ್ ಜಾಮ್ ನ ಸಮಸ್ಯೆ ಇದೆ
ಆದರೆ, ವಾರಣಾಸಿಯಲ್ಲಿ ಕೆಲ ಸಮಸ್ಯೆಗಳೂ ಇವೆ. ವಾರಣಾಸಿಯಲ್ಲಿ ಟ್ರಾಫಿಕ್ ಜಾಮ್ ನ ಸಮಸ್ಯೆ ಇದೆ. ಕಿರಿದಾದ ರಸ್ತೆಗಳನ್ನು ಅಗಲ ಮಾಡಲು ಮನೆಗಳನ್ನು ಸ್ವಾಧೀನ ಮಾಡಿಕೊಂಡು ನೆಲಸಮ ಮಾಡಬೇಕಾಗುತ್ತೆ. ಆದರೇ ಸ್ಥಳೀಯ ಜನರು ರಸ್ತೆಗಾಗಿ ಮನೆಗಳನ್ನು ಕಳೆದುಕೊಳ್ಳಲು ಸಿದ್ದರಿಲ್ಲ. ವಾರಣಾಸಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಕಾರಣದಿಂದ ವಾರಣಾಸಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚು ಎಂದು ಕಾಶೀಯ ಜಂಗಮವಾಡಿ ಮಠದಲ್ಲಿ ಸೇರಿದ್ದ ವಾರಣಾಸಿಯ ಕನ್ನಡಿಗರು ಟಿವಿ9 ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ವಾರಣಾಸಿಯ ಜನರು ಪುರಾತನ ನಗರಿಯ ಮನೆಗಳನ್ನು ಬಿಟ್ಟು ನಗರದ ಹೊರವಲಯದಲ್ಲಿ ಹೋಗಿ ಮನೆ ಕಟ್ಟಿಕೊಂಡು ವಾಸಿಸಲು ಬಯಸಲ್ಲ. ಟೂರಿಸ್ಟ್ ಗಳ ಸಂಖ್ಯೆ ಹೆಚ್ಚಿರುವುದರಿಂದ ನಗರದಲ್ಲೇ ಇದ್ದರೇ, ವಾಣಿಜ್ಯಿಕ ಲಾಭಗಳು ಇರುತ್ತಾವೆ.
ಇನ್ನೂ ವಾರಣಾಸಿಯಲ್ಲಿ ವಾಯು ಮಾಲಿನ್ಯ ಕೂಡ ಅಧಿಕವಾಗಿಯೇ ಇದೆ. ವಾಹನಗಳ ಸಂಖ್ಯೆ ಹೆಚ್ಚಿರುವ ಕಡೆ ವಾಯುಮಾಲಿನ್ಯವೂ ಸಹಜವೇ. ವಾರಣಾಸಿಯಲ್ಲಿ ಯಾವಾಗಲೂ ವಾಯುವಿನ ಗುಣಮಟ್ಟ ಕಳಪೆಯೇ ಆಗಿರುತ್ತೆ ಎಂದು ವಾರಣಾಸಿ ನಿವಾಸಿಯಾಗಿರುವ ಕನ್ನಡಿಗ ಗೌಡರ್ ಟಿವಿ9 ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ವಾರಣಾಸಿ ನಗರದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿವೆ. ಮೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ವಾರಣಾಸಿಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇಬೇಕೆಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ಕೊನೆಯ 2 ದಿನ ವಾರಣಾಸಿಯಲ್ಲೇ ಮೊಕ್ಕಾಂ ಹೂಡಿ ಪ್ರಚಾರ ನಡೆಸಿದ್ದಾರೆ. ರೋಡ್ ಶೋ, ಪ್ರಚಾರ ಸಭೆ ನಡೆಸಿದ್ದಾರೆ. ಇನ್ನೂ ಎಸ್ಪಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ವಾರಣಾಸಿಯಲ್ಲಿ ರೋಡ್ ಶೋ ನಡೆಸಿ ಬಲಪ್ರದರ್ಶನ ಮಾಡಿದ್ದಾರೆ. ಪ್ರಧಾನಿ ಮೋದಿಗೆ ಅವರ ಲೋಕಸಭಾ ಕ್ಷೇತ್ರದಲ್ಲಿ ಸವಾಲು ಹಾಕಿದ್ದಾರೆ. ಎಸ್ಪಿ ಪಕ್ಷವು ಮಾರ್ಕಂಡೇಯ ದೇವಸ್ಥಾನದ ಅರ್ಚಕರನ್ನು ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಜೊತೆಗೆ ವಾರಣಾಸಿಯು ಮಿನಿ ಇಂಡಿಯಾ ಇದ್ದಂತೆ. ಇಲ್ಲಿ ಎಲ್ಲ ರಾಜ್ಯದ ಜನರೂ ಇದ್ದಾರೆ. ಗುಜರಾತಿ, ಬಂಗಾಳಿಗಳೂ ಇದ್ದಾರೆ. ಬಂಗಾಳಿ ಮತದಾರರನ್ನು ಸೆಳೆಯಲು ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕರೆಸಿ ತಮ್ಮ ಪಕ್ಷದ ಪರ ಪ್ರಚಾರ ನಡೆಸಿದ್ದಾರೆ.
ಮಾರ್ಚ್ 7ರ ಸೋಮವಾರ ವಾರಣಾಸಿ ಸೇರಿದಂತೆ ಪೂರ್ವಾಂಚಲ ಭಾಗದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ವಿಶೇಷ ವರದಿ: ಎಸ್. ಚಂದ್ರಮೋಹನ್, ಟಿವಿ9
ಇದನ್ನೂ ಓದಿ: PM Modi: ವಾರಣಾಸಿಯಲ್ಲಿ ಮೋದಿ ‘ಚಾಯ್ ಪೇ ಚರ್ಚಾ’, ವಿಶ್ವನಾಥ ದೇವಾಲಯದಲ್ಲಿ ಡಮರು ವಾದನ; ವಿಡಿಯೋ ಇಲ್ಲಿದೆ
ಇದನ್ನೂ ಓದಿ: ವಾರಣಾಸಿ ನೋಡಲು ಯಾತ್ರೆ ಹೊರಟ ಧಾರವಾಡ ಜನ; ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ಗೆ ಟ್ವೀಟ್ ಮೂಲಕ ಮಾಹಿತಿ
Published On - 3:31 pm, Sun, 6 March 22