ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು (Bajrang Dal) ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನೊಂದಿಗೆ ಸಮೀಕರಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್ (VHP) ಮಂಗಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು,ದೇಶದ ಜನರು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ. ಕಾಂಗ್ರೆಸ್, ತನ್ನ ಪ್ರಣಾಳಿಕೆಯಲ್ಲಿ, ಬಜರಂಗದಳ, ಪಿಎಫ್‌ಐ ಮತ್ತು ಇತರ ಸಂಘಟನೆಗಳನ್ನು ನಿಷೇಧಿಸುವುದು ಸೇರಿದಂತೆ ಕಾನೂನಿನ ಪ್ರಕಾರ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಕಾಂಗ್ರೆಸ್ ಇಂದು ಬಜರಂಗದಳವನ್ನು ರಾಷ್ಟ್ರವಿರೋಧಿ ಮತ್ತು ನಿಷೇಧಿತ ಪಿಎಫ್ಐಯೊಂದಿಗೆ ಹೋಲಿಸಿರುವುದು ದುರದೃಷ್ಟಕರ. ಇದನ್ನು ದೇಶದ ಜನ ಒಪ್ಪುವುದಿಲ್ಲ. ಬಜರಂಗದಳ ಈ ಸವಾಲನ್ನು ಸ್ವೀಕರಿಸುತ್ತದೆ ಮತ್ತು ಎಲ್ಲಾ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಉತ್ತರಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಎಚ್‌ಪಿಯ ಯುವ ಘಟಕ, ಬಜರಂಗದಳ ಮಂಗಳವಾರ ಕಾಂಗ್ರೆಸ್‌ನ ದೆಹಲಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಿದೆ. ಬಜರಂಗದಳ ಪ್ರತಿಯೊಬ್ಬ ಸದಸ್ಯರು ದೇಶ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸಲು ಸಮರ್ಪಿತರಾಗಿದ್ದಾರೆ, ಆದರೆ ಇಡೀ ಜಗತ್ತು ಪಿಎಫ್ಐಯ ಚಟುವಟಿಕೆಗಳ ಬಗ್ಗೆ ತಿಳಿದಿರುತ್ತದೆ ಎಂದು ಜೈನ್ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರೇ ನೀವು ದೇಶದ ಜನರನ್ನು ವಂಚಿಸಲು ಸಾಧ್ಯವಿಲ್ಲ.ನೀವು ಬಜರಂಗ ದಳದ ಮಾನಹಾನಿ ಮಾಡಲು ಯತ್ನಿಸಿದ ರೀತಿಯನ್ನು ದೇಶದ ಜನ ಒಪ್ಪುವುದಿಲ್ಲ. ಬಜರಂಗದಳದ ಪ್ರತಿಯೊಬ್ಬ ಕಾರ್ಯಕರ್ತರು ಇದನ್ನು ಸವಾಲಾಗಿ ತೆಗೆದುಕೊಳ್ಳುತ್ತಾರೆ ಎಂದು ಜೈನ್ ಹೇಳಿದರು.
ನಾವು ರಾಜಕೀಯದಲ್ಲಿ ತೊಡಗುವುದಿಲ್ಲ. ಆದರೆ ನೀವು ನಮ್ಮನ್ನು ರಾಜಕೀಯಕ್ಕೆ ಎಳೆಯಲು ಬಯಸುತ್ತೀರಿ. ನಂತರ, ನಾವು ಆ ರಂಗದಲ್ಲಿಯೂ ನಿಮಗೆ ಪ್ರತಿಕ್ರಿಯಿಸಲು ಬಯಸುತ್ತೇವೆ. ನಿಮ್ಮ ತಪ್ಪು ಉದ್ದೇಶಗಳನ್ನು ಈಡೇರಿಸಲು ನಾವು ಬಿಡುವುದಿಲ್ಲ ಎಂದು ವಿಎಚ್‌ಪಿ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: ದ್ವೇಷ ಬಿತ್ತಿದರೆ ಬಜರಂಗದಳ, ಬಹುಸಂಖ್ಯಾತ, ಅಲ್ಪಸಂಖ್ಯಾತ ಸಂಘಟನೆಗಳ ನಿಷೇಧ: ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚುನಾವಣಾ ಭರವಸೆಯೊಂದಿಗೆ ಅವರ ಪಕ್ಷದ ಹಿಡೆನ್ ಅಜೆಂಡಾ ಕೂಡಾ ಬಹಿರಂಗವಾಗಿದೆ ಎಂದು ಹೇಳಿದರು.
ನೀವು ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಮಾತನಾಡುತ್ತಿದ್ದೀರಿ. ಅದೇ ವೇಳೆ ನೀವು ಸಿಮಿ ನಿಷೇಧವನ್ನು ವಿರೋಧಿಸಿದ್ದೀರಿ ಎಂಬುದನ್ನು ನೀವು ಮರೆತಿದ್ದೀರಿ, ನಿಮ್ಮಂತಹ ಜನರು ಸಿಮಿ ನಿಷೇಧವನ್ನು ವಿರೋಧಿಸಿ ಬೀದಿಗಿಳಿದಿದ್ದರು, ನೀವು ಬಜರಂಗದಳದ ಮೇಲೆ ನಿಷೇಧದ ಬಗ್ಗೆ ಮಾತನಾಡುವಾಗ, ನಿಮ್ಮ ಹಿಡನ್ ಅಜೆಂಡಾ ಬಹಿರಂಗವಾಗಿದೆ ಎಂದು ಜೈನ್ ಹೇಳಿದ್ದಾರೆ.
ಬಜರಂಗದಳ ಮತ್ತು ದೇಶದ ಜನರು ಈ ಸವಾಲನ್ನು ಸ್ವೀಕರಿಸುತ್ತಾರೆ. ಇದಕ್ಕೆ ಎಲ್ಲಾ ಪ್ರಜಾಸತ್ತಾತ್ಮಕ ವಿಧಾನಗಳಲ್ಲಿ ಉತ್ತರವನ್ನು ನೀಡಲಾಗುವುದು ಎಂದು ವಿಎಚ್‌ಪಿ ನಾಯಕ ಹೇಳಿದರು.
ಸರಣಿ ಟ್ವೀಟ್‌ಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, ದೇಶಾದ್ಯಂತ ತಿರಸ್ಕೃತವಾಗುತ್ತಿರುವ ಪಕ್ಷ ಬಜರಂಗದಳವನ್ನು ನಿಷೇಧಿಸುವ ಹಗಲುಗನಸು ಕಾಣುತ್ತಿದೆ ಎಂದು ಹೇಳಿದ್ದಾರೆ. ಪಿಎಫ್‌ಐ ಅನ್ನು ಬಜರಂಗದಳದೊಂದಿಗೆ ಹೋಲಿಕೆ ಮಾಡಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ನಾಟಕ ಸಾಕು. ಈ ಪ್ರಣಾಳಿಕೆಯೇ ಕಾಂಗ್ರೆಸ್‌ನ ಅಂತ್ಯಕ್ಕೆ ಕಾರಣವಾಗಲಿದೆ ಎಂದು ಬನ್ಸಾಲ್ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Tue, 2 May 23