ಶರದ್ ಪವಾರ್ ರಾಜೀನಾಮೆ: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಸುಪ್ರಿಯಾ ಸುಳೆ, ಅಜಿತ್ ಪವಾರ್ ಆಕಾಂಕ್ಷಿ?

ಶರದ್ ಪವಾರ್ ಎನ್​​ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಈ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಇದೀಗ NCP ಮುಖ್ಯಸ್ಥ ಸ್ಥಾನಕ್ಕೆ ಪರಿಗಣಿಸಬಹುದಾದ ಪ್ರಮುಖ ಐದು ಸಂಭಾವ್ಯ ಅಭ್ಯರ್ಥಿಗಳು ಯಾರು ಎಂಬುದನ್ನು ನೋಡೋಣ

ಶರದ್ ಪವಾರ್ ರಾಜೀನಾಮೆ: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಸುಪ್ರಿಯಾ ಸುಳೆ, ಅಜಿತ್ ಪವಾರ್ ಆಕಾಂಕ್ಷಿ?
ಶರದ್ ಪವಾರ್,ಅಜಿತ್ ಪವಾರ್ , ಸುಪ್ರಿಯಾ ಸುಳೆImage Credit source: Supriya Sule/Facebook
Follow us
ರಶ್ಮಿ ಕಲ್ಲಕಟ್ಟ
|

Updated on: May 02, 2023 | 3:43 PM

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಪ್ರಮುಖ ರಾಜಕೀಯ ನಡೆಯೊಂದರಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಮಂಗಳವಾರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬೈನಲ್ಲಿ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪವಾರ್ ತಾನು ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಪಡೆಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ತಮ್ಮ ನಿರ್ಧಾರವನ್ನು ಪ್ರಕಟಿಸಿದ ಪವಾರ್ ಮೇ 1, 1960 ರಿಂದ ಮೇ 1, 2023 ರವರೆಗೆ ದೀರ್ಘಾವಧಿಯ ಸಾರ್ವಜನಿಕ ಜೀವನದ ನಂತರ, ಒಂದು ಹೆಜ್ಜೆ ಹಿಂದಕ್ಕೆ ಇಡುವುದು ಅಗತ್ಯವಾಗಿದೆ, ಆದ್ದರಿಂದ ನಾನು ಎನ್​​ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಪಕ್ಷದ ಮುಂದಿನ ಅಧ್ಯಕ್ಷರು ಯಾರೆಂಬುದನ್ನು ನಿರ್ಧರಿಸಲು ಎನ್‌ಸಿಪಿ ಸದಸ್ಯರ ಸಮಿತಿಯನ್ನು ರಚಿಸುವಂತೆ ಪವಾರ್ ಶಿಫಾರಸು ಮಾಡಿದ್ದಾರೆ.

ಪ್ರಫುಲ್ ಪಟೇಲ್, ಸುನೀಲ್ ತಾಟ್ಕರೆ, ಕೆ. ಶರ್ಮಾ, ಪಿ.ಸಿ. ಚಾಕೊ, ಅಜಿತ್ ಪವಾರ್, ಜಯಂತ್ ಪಾಟೀಲ್, ಸುಪ್ರಿಯಾ ಸುಳೆ, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಅನಿಲ್ ದೇಶಮುಖ್, ರಾಜೇಶ್ ಟೋಪೆ, ಜಿತೇಂದ್ರ ಅವ್ಹಾದ್, ಹಸನ್ ಮುಶ್ರೀಫ್, ಧನಂಜಯ್ ಮುಂಡೆ, ಜಯದೇವ್ ಗಾಯಕ್‌ವಾಡ್ ಈ ಸಮಿತಿಯಲ್ಲಿದ್ದಾರೆ.

ಎನ್​​ಸಿಪಿ ಮುಖ್ಯಸ್ಥರ ಸ್ಥಾನಕ್ಕೆ ಯಾರು?

ಶರದ್ ಪವಾರ್ ಎನ್​​ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಈ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಇದೀಗ NCP ಮುಖ್ಯಸ್ಥ ಸ್ಥಾನಕ್ಕೆ ಪರಿಗಣಿಸಬಹುದಾದ ಪ್ರಮುಖ ಐದು ಸಂಭಾವ್ಯ ಅಭ್ಯರ್ಥಿಗಳು ಯಾರು ಎಂಬುದನ್ನು ನೋಡೋಣ

ಅಜಿತ್ ಪವಾರ್: ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಎನ್‌ಸಿಪಿ ಮುಖ್ಯಸ್ಥ ಹುದ್ದೆಗೆ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರು. ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ತಮ್ಮ ಮೂರು ದಶಕಗಳ ವೃತ್ತಿಜೀವನದಲ್ಲಿ ವಿವಿಧ ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸಿದ್ದಾರೆ, ನಾಲ್ಕು ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದಾರೆ. ಕೃಷಿ, ಜಲಸಂಪನ್ಮೂಲ, ಗ್ರಾಮೀಣ ಮಣ್ಣಿನ ಸಂರಕ್ಷಣೆ, ನೀರಾವರಿ, ಮತ್ತು ವಿದ್ಯುತ್ ಮತ್ತು ಯೋಜನೆ ಸೇರಿದಂತೆ ಇತರೆ ಖಾತೆಗಳನ್ನು ಅವರು ನಿರ್ವಹಿಸಿದ್ದಾರೆ.

ಜಯಂತ್ ಪಾಟೀಲ್: ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರು ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು. ಇವರು ಪವಾರ್ ಅವರ ಆಪ್ತರು ಕೂಡಾ. 3 ದಶಕಗಳಿಗೂ ಹೆಚ್ಚು ಕಾಲ ಇಸ್ಲಾಂಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ ಪಾಟೀಲ್.ಉದ್ಧವ್ ಠಾಕ್ರೆ ಅವರ ಸಚಿವಾಲಯದಲ್ಲಿ ಜಲಸಂಪನ್ಮೂಲ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ, ಪಾಟೀಲ್ ಅವರು ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ (2009 ರಿಂದ 2014), ಹಣಕಾಸು ಸಚಿವಾಲಯ (1999 ರಿಂದ 2008), ಮತ್ತು ಗೃಹ ಸಚಿವಾಲಯ (2008 ರಿಂದ 2009) ನಿರ್ವಹಿಸಿದ್ದರು.

ಇದನ್ನೂ ಓದಿ: Sharad Pawar: ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್​​ ರಾಜೀನಾಮೆ

ಸುಪ್ರಿಯಾ ಸುಳೆ: ಶರದ್ ಪವಾರ್ ಅವರ ಪುತ್ರಿ ಮತ್ತು ಸಂಸದೆ ಸುಳೆ ಕೂಡ ಪಕ್ಷದ ಮುಖ್ಯಸ್ಥರಾಗುವ ಸ್ಪರ್ಧೆಯಲ್ಲಿದ್ದಾರೆ. ಸಮರ್ಥ, ಬಲಿಷ್ಠ ನಾಯಕಿಯಾಗಿರುವ ಸುಳೆ ಅವರು ಮೂರು ಅವಧಿಗೆ ಸಂಸದರಾಗಿ ಯಶಸ್ವಿಯಾದರು. ಕೆಲವು ದಿನಗಳ ಹಿಂದೆ, ಸುಳೆ ಅವರು ಎರಡು “ಸ್ಫೋಟಗಳು” (ರಾಜಕೀಯ), ಒಂದು ದೆಹಲಿಯಲ್ಲಿ ಮತ್ತು ಇನ್ನೊಂದು ಮಹಾರಾಷ್ಟ್ರದಲ್ಲಿ ನಡೆಯಲಿದೆ ಎಂದು ಸೂಚಿಸಿದ್ದರು. ಇದೀಗ ಅವರನ್ನು ಪಕ್ಷದ ನೂತನ ಅಧ್ಯಕ್ಷೆಯಾಗಿ ಹೆಸರಿಸಲಾಗುವುದು ಎಂಬ ಊಹಾಪೋಹಗಳು ಎದ್ದಿವೆ.

ಇನ್ನುಳಿದಂತೆ ಛಗನ್ ಭುಜಬಲ್, ಪ್ರಫುಲ್ ಪಟೇಲ್ ಹೆಸರು ಕೂಡಾ ಎನ್ ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಕೇಳಿ ಬರುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ