ಮಣಿಪುರದಲ್ಲಿ ವ್ಯಕ್ತಿಯನ್ನು ಸುಟ್ಟುಹಾಕಿದ ವಿಡಿಯೊ ವೈರಲ್; ಇದು ಮೇ4ರ ಘಟನೆ ಎಂದ ಸರ್ಕಾರ

|

Updated on: Oct 10, 2023 | 5:50 PM

Manipur: ಜನಾಂಗೀಯ ಘರ್ಷಣೆಗಳು ಪ್ರಾರಂಭವಾದ ಒಂದು ದಿನದ ನಂತರ ಮೇ 4 ರಂದು ಈ ಘಟನೆ ನಡೆದಿದೆ. ಸಾವಿಗೀಡಾದ ವ್ಯಕ್ತಿಯ ದೇಹವನ್ನು ಈಗ ಇಂಫಾಲ್‌ನ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನಗಳ ಶವಾಗಾರದಲ್ಲಿ ಇಡಲಾಗಿದೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮಾಹಿತಿ ನೀಡಿದರು.

ಮಣಿಪುರದಲ್ಲಿ ವ್ಯಕ್ತಿಯನ್ನು ಸುಟ್ಟುಹಾಕಿದ ವಿಡಿಯೊ ವೈರಲ್; ಇದು ಮೇ4ರ ಘಟನೆ ಎಂದ ಸರ್ಕಾರ
ಮಣಿಪುರ
Follow us on

ಇಂಫಾಲ್ ಅಕ್ಟೋಬರ್ 10: ಮಣಿಪುರದಲ್ಲಿ (Manipur) ವ್ಯಕ್ತಿಯನ್ನು ಸುಟ್ಟುಹಾಕಿದ ವಿಡಿಯೊವೊಂದು ವೈರಲ್ ಆಗಿದ್ದು, ಕುಕಿ ಪ್ರಾಬಲ್ಯದ ಕಾಂಗ್‌ಪೊಕ್ಪಿ (Kangpokpi )ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದಲ್ಲಿ ನಡೆದ ಘಟನೆ ಇದು ಎಂದು ರಾಜ್ಯ ಸರ್ಕಾರ ಹೇಳಿದೆ. ಸೋಮವಾರ ರಾಜಧಾನಿ ಇಂಫಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ (Kuldiep Singh), ಘಟನೆಯು ಈ ಹಿಂದೆ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದ ವೈರಲ್ ವಿಡಿಯೊಗೆ ಸಂಬಂಧಿಸಿದೆ ಎಂದು ಹೇಳಿದರು.
ಏಳು ಸೆಕೆಂಡುಗಳ ವೀಡಿಯೊದಲ್ಲಿ ಕಪ್ಪು ಶರ್ಟ್ ಮತ್ತು ಪ್ಯಾಂಟ್ಸ್ ಧರಿಸಿದ್ದ ವ್ಯಕ್ತಿಯೊಬ್ಬರು ತಲೆಯ ಮೇಲೆ ಗಾಯದ ಗುರುತುಗಳನ್ನು ಹೊಂದಿದ್ದು, ಅವರ ದೇಹದ ಒಂದು ಭಾಗವು ಸುಟ್ಟುಹೋಗುತ್ತಿರುವಾಗ ಮುಳ್ಳುತಂತಿಯ ಬಳಿ ಮಲಗಿರುವುದನ್ನು ತೋರಿಸಿದೆ. ಅವನ ಹತ್ತಿರ ನಿಂತಿರುವ ಜನರ ಧ್ವನಿ, ಹಾಗೆಯೇ ಗುಂಡಿನ ಶಬ್ದಗಳು ಹಿನ್ನೆಲೆಯಲ್ಲಿ ಕೇಳಬಹುದು.

ವ್ಯಕ್ತಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆಯೇ ಅಥವಾ ಸುಡುವ ಮೊದಲು ಅವನು ಸತ್ತಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. “ವ್ಯಕ್ತಿಯ ಹೆಸರು ಲಾಲ್ದಿಂತಂಗ ಖೋಂಗ್ಸಾಯ್, 37 ವರ್ಷ ವಯಸ್ಸಿನವರು ಕಾಂಗ್ಪೋಕ್ಪಿ ಜಿಲ್ಲೆಯ ಪಾಕೊಂಗ್ಚಿಂಗ್ ಗ್ರಾಮದ ನಿವಾಸಿ ಎಂದು  ಸಿಂಗ್ ಹೇಳಿದ್ದಾರೆ.

ಜನಾಂಗೀಯ ಘರ್ಷಣೆಗಳು ಪ್ರಾರಂಭವಾದ ಒಂದು ದಿನದ ನಂತರ ಮೇ 4 ರಂದು ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಸಾವಿಗೀಡಾದ ವ್ಯಕ್ತಿಯ ದೇಹವನ್ನು ಈಗ ಇಂಫಾಲ್‌ನ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನಗಳ ಶವಾಗಾರದಲ್ಲಿ ಇಡಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದರು.

“ಈ ಪ್ರಕರಣವು ಇಬ್ಬರು ವ್ಯಕ್ತಿಗಳನ್ನು ಕೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯ ಮುಂದುವರಿದ ಭಾಗವಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಡಿಜಿಪಿಗೆ ಮನವಿ ಮಾಡಲಾಗಿದೆ, ಅದರ ವಿಡಿಯೋ ವೈರಲ್ ಆಗಿದೆ” ಎಂದು ಸಿಂಗ್ ಹೇಳಿದರು.

ಜುಲೈನಲ್ಲಿ, ಇಬ್ಬರು ಮಹಿಳೆಯರನ್ನು ದೊಡ್ಡ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿತ್ತು. ಅವರಲ್ಲಿ ಒಬ್ಬರು ನಂತರ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ವಿಡಿಯೊವು ವ್ಯಾಪಕ ಖಂಡನೆಗೆ ಕಾರಣವಾಯಿತು. ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆಗಸ್ಟ್‌ನಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.

ವಿಡಿಯೊಗೆ ಪ್ರತಿಕ್ರಿಯಿಸಿದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್), ಕುಕಿ ಸಂಘಟನೆಯು ಘಟನೆಯನ್ನು “ಆಘಾತಕಾರಿ ಮತ್ತು ಅನಾಗರಿಕ” ಎಂದು ಹೇಳಿದೆ. ರಾಜ್ಯ ಸರ್ಕಾರವು “ನ್ಯಾಯ ಕೊಡಿಸುವಲ್ಲಿ ತಾರತಮ್ಯ ತೋರಿಸುತ್ತಿದೆ ಎಂದು ಅದು ದೂರಿದೆ.

ಇದನ್ನೂ ಓದಿ:  ಮಣಿಪುರ: ಕ್ರೈಸ್ತ ಮಹಿಳೆಯ ಮೇಲೆ ಹಿಂದೂಗಳಿಂದ ಅತ್ಯಾಚಾರ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

“ಕುಕಿ-ಝೋ ಸಮುದಾಯದ ವಿರುದ್ಧ ಬಹುಸಂಖ್ಯಾತ ಮೈತಿ ಜನಾಂಗೀಯ ಶುದ್ಧೀಕರಣ ಅಭಿಯಾನಕ್ಕೆ ಈ ವೀಡಿಯೊ ಘೋರ ಸಾಕ್ಷಿಯಾಗಿದೆ” ಎಂದು ಐಟಿಎಲ್‌ಎಫ್ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ