Vijay Rupani Profile: ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್ ರೂಪಾನಿ ಯಾರು?

| Updated By: guruganesh bhat

Updated on: Sep 11, 2021 | 4:24 PM

Gujarat CM Vijay Rupani Resign: ವಿಜಯ್ ರೂಪಾನಿ ಯಾರು? ಅವರ ಹಿನ್ನೆಲೆಯಾದರೂ ಏನು? ಎಂಬ ಚಿಕ್ಕ ಚೊಕ್ಕ ಮಾಹಿತಿಯನ್ನು ನೀವೂ ತಿಳಿದುಕೊಳ್ಳಿ.

Vijay Rupani Profile: ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್ ರೂಪಾನಿ ಯಾರು?
ವಿಜಯ್ ರೂಪಾನಿ
Follow us on

ಇಂದು ಮಧ್ಯಾಹ್ನ ನಡೆದ ಅತ್ಯಂತ ಹಠಾತ್ ಬೆಳವಣಿಗೆಯೊಂದು ಭಾರತದ ರಾಜಕೀಯದ ಬಗ್ಗೆ ಕುತೂಹಲ ಹೊಂದಿರುವವರು ತಮ್ಮ ಕತ್ತನ್ನು ಗುಜರಾತಿನತ್ತ ವಾಲಿಸುವಂತೆ ಮಾಡಿದೆ. 2014ರಲ್ಲಿ ಇಡೀ ದೇಶದ ಚುಕ್ಕಾಣಿ ಹಿಡಿದ ಬಿಜೆಪಿ ಎಂಬ ಪಕ್ಷದಲ್ಲಿ ನಿಜಕ್ಕೂ ಯಾವಾಗ ಏನಾಗುತ್ತದೆ ಎಂಬುದೇ ಬಹಳ ಕೌತುಕಮಯವಾಗಿದೆ. ಯಾವ ಮಾಧ್ಯಮಗಳ ಮೂಗಿಗೂ ಸುಳಿಯದಂತೆ ರಾಜೀನಾಮೆಯ ಸುದ್ದಿಯನ್ನು ಗೌಪ್ಯವಾಗಿರಿಸಿದ್ದ ವಿಜಯ್ ರೂಪಾನಿ, ಒಂದು ಕ್ಷಣಕ್ಕೆ ದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಟ್ಟರು. ಅವರ ರಾಜೀನಾಮೆಗೆ ಅಷ್ಟು ಮಹತ್ವ ಏಕೆಂದರೆ ‘ಇಂದಿನ ಬಿಜೆಪಿ’ಯ ಶಕ್ತಿಕೇಂದ್ರಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರುಗಳ ತವರು ರಾಜ್ಯ ಗುಜರಾತ್ ಎಂಬುದೂ ಹೌದು. ಹಾಗಾದರೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ ವಿಜಯ್ ರೂಪಾನಿ ಯಾರು? ಅವರ ಹಿನ್ನೆಲೆಯಾದರೂ ಏನು? ( Gujarat CM Vijay Rupani Resign) ಎಂಬ ಚಿಕ್ಕ ಚೊಕ್ಕ ಮಾಹಿತಿಯನ್ನು ನೀವೂ ತಿಳಿದುಕೊಳ್ಳಿ.

1956ರಲ್ಲಿ ಇಂದಿನ ಮೈನ್​ಮಾರ್​ ದೇಶದ ರಂಗೂನ್​ನಲ್ಲಿ ಜೈನ್ ಬನಿಯಾ ಸಮುದಾಯದಲ್ಲಿ ಜನಿಸಿದ ವಿಜಯ್ ರೂಪಾನಿ ಅವರ ಕುಟುಂಬ ಮುಂದೆ ಗುಜರಾತಿನ ರಾಜ್​ಕೋಟ್​ಗೆ ವಲಸೆ ಬಂತು. ಬಿಎ ಎಲ್ಎಲ್​ಬಿ ಪದವೀಧರರು. ಅವರ ತಂದೆ ರಮಣಿಕ್ಲಾಲ್ ರೂಪಾನಿ ತಾಯಿ ಮಾಯಾಬೆನ್. ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ ಅವರು, ಇಸವಿ ಸನ್ 1971ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಅಲ್ಲದೇ ಸ್ಟಾಕ್ ಬ್ರೋಕರ್ ಆಗಿಯೂ ಅವರು ಷೇರುಪೇಟೆಯಲ್ಲಿ ಕೆಲಸ ಮಾಡಿದ್ದರು.

ವಿಜಯ್ ರೂಪಾನಿ ಪಕ್ಷ ಮತ್ತು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ನಿಷ್ಠಾವಂತ ಕಾರ್ಯಕರ್ತ. 1976ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ನಡೆಸಿದ ಹೋರಾಟ ಅವರಿಗೆ 11 ತಿಂಗಳ ಜೈಲುವಾಸದ ರುಚಿಯನ್ನೂ ಉಣಬಡಿಸಿತು. 1978ರಿಂದ 1981ರವರೆಗೆ ಆರ್ಎಸ್ಎಸ್ನ ಪ್ರಚಾರಕ್ ಜವಾಬ್ದಾರಿಯನ್ನು ನಿರ್ವಹಿಸಿದ ವಿಜಯ್ ರೂಪಾನಿಗೆ 2006ರಲ್ಲಿ ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿಯ ಜವಾಬ್ದಾರಿಯನ್ನೂ ಬಿಜೆಪಿ ನೀಡಿತು. 2006ರಲ್ಲಿ ರಾಜ್​ಕೋಟ್ ಪಾಲಿಕೆ ಕಾರ್ಪೋರೇಟರ್, ಮೇಯರ್ ಆಗಿ ಆಯ್ಎಕಯಾದ ಅವರಿಗೆ ಬಿಜೆಪಿ ರಾಜ್ಯಸಭೆಯ ಸದಸ್ಯ ಸ್ಥಾನವನ್ನು ನೀಡಿತು.

2014ರಲ್ಲಿ ವಜೂಭಾಯ್ ವಾಲಾ ಪಶ್ಚಿಮ ರಾಜ್​ಕೋಟ್ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕರ್ನಾಟಕದ ರಾಜ್ಯಪಾಲರಾಗಿ ನಿಯುಕ್ತಿಗೊಂಡರು. ಆಗ ಪಶ್ಚಿಮ ರಾಜ್​ಕೋಟ್ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ವಿಜಯ್ ರೂಪಾನಿ ಅವರಿಗೆ ಒಲಿಯಿತು. ಅಲ್ಲದೇ, ಆ ಹೊತ್ತಲ್ಲೇ ಅವರು ಗುಜರಾತ್ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಫೈನಾನ್ಸ್ ಬೋರ್ಡಿನ ಅಧ್ಯಕ್ಷರಾಗಿಯೂ ವಿಜಯ್ ರೂಪಾನಿ ಕೆಲಸ ಮಾಡಿದ್ದರು. ಅಲ್ಲದೇ ನರೇಂದ್ರ ಮೋದಿ ಎಂದರೆ ವಿಜಯ್ ರೂಪಾನಿಗೆ ಬಹುಇಷ್ಟ. ಇಲ್ಲಿದಿದ್ದರೆ ಗುಜರಾತ್​​ನ ಮುಖ್ಯಮಂತ್ರಿಯಾಗಲಂತೂ ಆಗುತ್ತಿರಲಿಲ್ಲ.

2014ರಲ್ಲಿ ಪಶ್ಚಿಮ ರಾಜ್​ಕೋಟ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಅವರು 2016, ಆಗಸ್ಟ್ 7ರಂದು ಗುಜರಾತಿನ 17ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ ಆಗ ಅವರಿಗೆ ಮುಖ್ಯಮಂತ್ರಿ ಜವಾಬ್ದಾರಿ ದೊರೆತಿದ್ದು ಒಂದು ವರ್ಷ ಮಾತ್ರ. 2017ರಲ್ಲೇ ವಿಧಾನಸಭಾ ಚುನಾವಣೆಯಿತ್ತು. ಆ ಚುನಾವಣೆಯಲ್ಲೂ ಬಹುಮತ ಪಡೆದ ವಿಜಯ್ ರೂಪಾನಿ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆ ಒಲಿದುಬಂತು.

ಇದೀಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಸ ಲೆಕ್ಕಾಚಾರ ಮತ್ತು ಸಮೀಕರಣದ ಆಲೋಚನೆಯಲ್ಲಿ ಬಿಜೆಪಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ಅವರಿಂದ ರಾಜೀನಾಮೆ ಪಡೆದಿದೆ ಎಂದೇ ಹೇಳಲಾಗಿದೆ.

ಇದನ್ನೂ ಓದಿ: Gujarat CM Resigns: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

‘ಹಿಂದು ಹುಡುಗಿಯರ ತಂಟೆಗೆ ಬರುವವರನ್ನು ಸುಮ್ಮನೆ ಬಿಡೋದಿಲ್ಲ’-ಗುಜರಾತ್​ ಸಿಎಂ ಎಚ್ಚರಿಕೆ

(Vijay Rupani Profile his childhood politics age and political life and resignation all you need to know)