ಲಖನೋ: ಕಾಲ ಎಷ್ಟೇ ಬದಲಾದರೂ ಮನುಷ್ಯನ ಮಾನಸಿಕ ಚಿಂತನೆಗಳು ಬದಲಾಗದೇ ಸಮಾಜ ಬದಲಾಗದು ಎಂಬ ಮಾತಿದೆ. ಈ ಮಾತನ್ನು ಉತ್ತರ ಪ್ರದೇಶದ ಮುಜಾಫರ್ನಗರದ ಪಿಪಲ್ಶಾಹ್ ಎಂಬ ಗ್ರಾಮದ ಪಂಚಾಯತ್ ಸಾಬೀತುಪಡಿಸಿದೆ. ಹುಡುಗಿಯರು ಪ್ಯಾಂಟ್ ಮತ್ತು ಸ್ಕರ್ಟ್ ಧರಿಸುವುದು ಮತ್ತು ಹುಡುಗರು ಚಿಕ್ಕ ಪ್ಯಾಂಟ್ ಧರಿಸುವುದನ್ನು ಈ ಗ್ರಾಮ ಪಂಚಾಯತ್ನ ವಕ್ತಾರರು ಬಹಿಷ್ಕರಿಸಿದ್ದಾರೆ. ಈ ರೀತಿಯ ಬಟ್ಟೆಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ಕಾರಣ ನೀಡಿ ಈ ನಿರ್ಣಯ ಕೈಗೊಂಡಿದ್ದಾರೆ ಪಿಪಲ್ಶಾಹ್ ಗ್ರಾಮದ ಧುರಿಣರು.
ಹುಡುಗಿಯರು ಜೀನ್ಸ್ ಮತ್ತು ಸ್ಕರ್ಟ್ಗಳನ್ನು ಧರಿಸುವುದು ನಮ್ಮ ಸಂಸ್ಕೃತಿ ಅಲ್ಲ. ಹುಡುಗರು ಸಹ ತಮ್ಮ ದಿರಿಸಿನ ವಿಷಯದಲ್ಲಿ ಸಂಪ್ರದಾಯ ಪಾಲಿಸಬೇಕು. ತರುಣ ತರುಣಿಯರು ಸಂಸ್ಕೃತಿಗೆ ಅನೂಚಾನವಾಗಿ ವಸ್ತ್ರ ಧರಿಸದಿದ್ದರೆ ಗ್ರಾಮದಿಂದ ಅವರನ್ನು ಬಹಿಷ್ಕರಿಸುವುದಾಗಿ ಗ್ರಾಮದ ಭಾರತೀಯ ಕಿಸಾನ್ ಸಂಘಟನೆಯ ಆಧ್ಯಕ್ಷ ಠಾಕೂರ್ ಪುರಾನ್ ಸಿಂಗ್ ತಿಳಿಸಿದ್ದಾರೆ.
ಶಾಲಾ ಮಕ್ಕಳ ಸಮವಸ್ತ್ರದ ಕುರಿತು ಪ್ರಶ್ನಿಸಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಶಾಲಾಮಕ್ಕಳಿಗೆ ಈ ನಿಯಮ ಅನ್ವಯವಾಗದು. ಆದರೆ ಮೊಣಕಾಲಿಗಿಂತ ಮೇಲೆ ವಸ್ತ್ರ ಧರಿಸುವುದು ಉತ್ತಮ ಅಭ್ಯಾಸವಲ್ಲ. ಅಂತಹ ಸಮವಸ್ತ್ರಗಳನ್ನು ಹೊಂದಿರುವ ಶಾಖೆಯ ಆಡಳಿತ ಮಂಡಳಿ ಜತೆಗೆ ನಾವು ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಮುಂದಿಟ್ಟಿರುವ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಎಸ್ ಎಸ್ಟಿ ಸಮುದಾಯ ಅಭ್ಯರ್ಥಿಗಳಿಗೆ ಮೀಸಲಿಡುವ ಪ್ರಸ್ತಾವನೆಯನ್ನು ಸಹ ಈ ಸಂಘಟನೆ ವಿರೋಧಿಸಿದೆ.
ಯಾವುದೇ ಒಂದು ಸಮುದಾಯಕ್ಕೆ ಹುದ್ದೆಗಳನ್ನು ಮೀಸಲಿಡುವುದು ತಪ್ಪು ನಿರ್ಧಾರ. ಇದು ಇತರ ಸಮುದಾಯಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲಿದೆ ಎಂದು ಭಾರತೀಯ ಕಿಸಾನ್ ಸಂಘಟನೆಯ ಅಧ್ಯಕ್ಷ ಠಾಕೂರ್ ಪುರಾನ್ ಸಿಂಗ್ ತಿಳಿಸಿದ್ದಾರೆ. ಅಲ್ಲದೇ ಅವರು ಚುನಾವಣೆಯ ಸಂದರ್ಭಗಳಲ್ಲಿ ಮದ್ಯ ಹಂಚುವುದನ್ನು ಸಹ ವಿರೋಧಿಸಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿ ಮದ್ಯ ಹಂಚುವುದು ಕಂಡುಬಂದರೆ ಅವರಿಗೆ ಬಹಿಷ್ಕಾರ ಹಾಕುವುದಾಗಿ ಠಾಕೂರ್ ಪುರಾನ್ ಸಿಂಗ್ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ನ ವಕ್ತಾರರ ಈ ನಿರ್ಣಯಕ್ಕೆ ಯುವ ಸಮುದಾಯದ ಪ್ರತಿಕ್ರಿಯೆಯನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಗಂಡ ಝೂಮ್ ಮೀಟಿಂಗ್ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ…
ರೈತರ ಹೋರಾಟದ ಪರಿಣಾಮ: ಅವಿಶ್ವಾಸ ಮತ ಎದುರಿಸುತ್ತಿರುವ ಹರ್ಯಾಣ ಬಿಜೆಪಿ ಸರ್ಕಾರ!
Published On - 2:54 pm, Thu, 11 March 21