West Bengal Assembly Elections 2021: ಪಶ್ಚಿಮ ಬಂಗಾಳದ ಸಚಿವ ಬಚ್ಚು ಹಾಂಸದಾ, ಶಾಸಕ ಗೌರಿ ಶಂಕರ್ ದತ್ತಾ ಬಿಜೆಪಿಗೆ ಸೇರ್ಪಡೆ
West Bengal: ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಸ್ಪರ್ಧಿಸಲು ಅವಕಾಶ ಸಿಗದಿರುವುದರಿಂದ ಮುನಿಸಿಕೊಂಡ ಪಶ್ಚಿಮ ಬಂಗಾಳದ ಸಚಿವ ಬಚ್ಚು ಹಾಂಸದಾ ಮತ್ತು ತೆಹತ್ತಾ ಶಾಸಕ ಗೌರಿ ಶಂಕರ್ ದತ್ತಾ ಬಿಜೆಪಿಗೆ ಸೇರಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಸ್ಪರ್ಧಿಸಲು ಅವಕಾಶ ಸಿಗದಿರುವುದರಿಂದ ಮುನಿಸಿಕೊಂಡ ಪಶ್ಚಿಮ ಬಂಗಾಳದ ಸಚಿವ ಬಚ್ಚು ಹಾಂಸದಾ ಮತ್ತು ತೆಹತ್ತಾ ಶಾಸಕ ಗೌರಿ ಶಂಕರ್ ದತ್ತಾ ಬಿಜೆಪಿಗೆ ಸೇರಿದ್ದಾರೆ. ಉತ್ತರ ಬಂಗಾಳ ಅಭಿವೃದ್ಧಿ ಸಚಿವರಾಗಿದ್ದಾರೆ ಹಾಂಸದಾ. ಇವರು ದಕ್ಷಿಣ ದಿನಾಜ್ ಪುರ್ ಜಿಲ್ಲೆಯ ತಪನ್ ಚುನಾವಣಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾದವರಾಗಿದ್ದಾರೆ. ನಾದಿಯಾದ ತೆಹತ್ತಾ ಕ್ಷೇತ್ರದ ಶಾಸಕರಾಗಿದ್ದಾರೆ ಗೌರಿ ಶಂಕರ್ ದತ್ತಾ. ಇವರಿಬ್ಬರೂ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಅದೇ ವೇಳೆ ಬಂಗಾಳಿ ನಟ ಬೋನಿ ಸೇನ್ ಗುಪ್ತಾ ಕೂಡಾ ಬಿಜೆಪಿ ಸೇರಿದ್ದಾರೆ. ಅವರ ಆಪ್ತೆ, ನಟಿ ಕೌಷನಿ ಮುಖರ್ಜಿ ಇತ್ತೀಚೆಗೆ ಟಿಎಂಸಿ ಸೇರಿದ್ದು, ಕೃಷ್ಣಾನಗರ್ ಉತ್ತರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಟಿಎಂಸಿ ಸಂಸದೆ ಪ್ರತಿಮಾ ಮಂಡಲ್ ಅವರ ಕಿರಿಯ ಸಹೋದರಿ ಜಯಂತಿ ಬಿಜೆಪಿ ಸೇರಿದ್ದಾರೆ. ವಿವಿಧ ಮಹಾನಗರ ಪಾಲಿಕೆಗಳ ಕೌನ್ಸಿಲರ್ಗಳು, ಟಿಎಂಸಿ ಪಕ್ಷದ ಜಿಲ್ಲಾ ಮಟ್ಟದ ನಾಯಕರು ಕೂಡಾ ಬಿಜೆಪಿಗೆ ಸೇರಿದ್ದಾರೆ.
ಈ ವಾರದ ಆರಂಭದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಸೋನಾಲಿ ಗುಹಾ, 89ರ ಹರೆಯದ ಸಿಂಗೂರ್ ಶಾಸಕ ರಬೀಂದ್ರನಾಥ್ ಭಟ್ಟಾಚಾರ್ಯ ಸೇರಿದಂತೆ ಐವರು ಟಿಎಂಸಿ ಶಾಸಕರು ಬಿಜೆಪಿಗೆ ಸೇರಿದ್ದರು. ಟಿಎಂಸಿ ಅಭ್ಯರ್ಥಿ ಪಟ್ಟಿಯಲ್ಲಿ ಸ್ಥಾನ ಸಿಗದ ಕಾರಣ ಈ ಶಾಸಕರು ಬಿಜೆಪಿ ಸೇರಿದ್ದರು.
2019ರ ಲೋಕಸಭೆ ಚುನಾವಣೆಯ ನಂತರ ಒಟ್ಟು 26 ಟಿಎಂಸಿ ಶಾಸಕರು ಮತ್ತು ಇಬ್ಬರು ಸಂಸದರು ಬಿಜೆಪಿಗೆ ಸೇರಿದ್ದಾರೆ. ಆದಾಗ್ಯೂ, ಬಿಜೆಪಿ ಸೇರಿರುವ ಮಾಜಿ ಸಚಿವ ಸುವೇಂದು ಅಧಿಕಾರಿ, ರಜಿಬ್ ಬ್ಯಾನರ್ಜಿ ಮತ್ತು ರಾಜ್ಯ ಸಭಾ ಸಂಸದ ದಿನೇಶ್ ತಿವಾರಿ ಹೊರತು ಪಡಿಸಿ ಬೇರೆ ಯಾರೂ ವಿಧಾನಸಭೆ ಅಥವಾ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಬಾಲಿವುಡ್ ಖ್ಯಾತ ನಟ ಮಿಥುನ್ ಚಕ್ರವರ್ತಿ ಮಾರ್ಚ್ 7 ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಟಿಎಂಸಿ ತೊರೆದು ಬಿಜೆಪಿ ಸೇರಿದ ಸುವೇಂದು ಅಧಿಕಾರಿಯ ಕಿರಿಯ ಸಹೋದರ ಸೌಮೇಂದು
ಪೂರ್ವ ಮಿಡ್ನಾಪುರ್ ಜಿಲ್ಲೆಯ ಕಾಂಥಿ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ಸೌಮೇಂದು ಅಧಿಕಾರಿಯನ್ನು ಟಿಎಂಸಿ ಪ್ರಸ್ತುತ ಹುದ್ದೆಯಿಂದ ತೆಗೆದು ಹಾಕಿತ್ತು. ಇದಾದ ನಂತರ ಸುಮಾರು 12 ಮಂದಿ ತೃಣಮೂಲ ಕೌನ್ಸಿಲರ್ಗಳ ಜತೆ ಸೌಮೇಂದು ಬಿಜೆಪಿ ಸೇರಿದ್ದಾರೆ. ಅಧಿಕಾರಿ ಕುಟುಂಬದಲ್ಲಿ ಸುವೇಂದು ಅಧಿಕಾರಿ ಅವರ ಅಪ್ಪ ಸಿಸಿರ್ ಮತ್ತು ಸಹೋದರ ದಿಬ್ಯೇಂದು ಟಿಎಂಸಿ ಸಂಸದರಾಗಿದ್ದಾರೆ.
21 ವರ್ಷಗಳ ಕಾಲ ಟಿಎಂಸಿಯಲ್ಲಿದ್ದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದಿದ್ದರು ಸುವೇಂದು ಅಧಿಕಾರಿ ನಾನು ತೃಣಮೂಲ ಕಾಂಗ್ರೆಸ್ ಜತೆ ಇದ್ದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಪಶ್ಚಿಮ ಬಂಗಾಳದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. 2020 ಡಿಸೆಂಬರ್ 27ರಂದು ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಇದ್ದ ಪಕ್ಷದಲ್ಲಿ ಶಿಸ್ತು ಇಲ್ಲ. ಅದು ಪಕ್ಷದಿಂದ ಕಂಪನಿಯಾಗಿ ಬದಲಾಗಿದೆ. 21 ವರ್ಷಗಳ ಕಾಲ ಆ ಪಕ್ಷದೊಂದಿಗೆ ಇದ್ದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದಿದ್ದರು.
ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವ ಬೇಕಿದೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ತ್ಯಾಗದಿಂದಾಗಿಯೇ ನಾವು ಈಗ ಪಶ್ಚಿಮ ಬಂಗಾಳದಲ್ಲಿ ಬದುಕಲು ಸಾಧ್ಯವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಬರಬೇಕು. ಹಾಗಿದ್ದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಅಭಿವೃದ್ಧಿಯಾಗಬಹುದು. ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದಿದ್ದರು ಸುವೇಂದು.
ಇದನ್ನೂ ಓದಿ: West Bengal Assembly Elelctions 2021: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೇರ್ಪಡೆ
Published On - 12:55 pm, Thu, 11 March 21