ಮನ್ ಕಿ ಬಾತ್‌ನಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಕರೆ: ಕರ್ನಾಟಕದ ಕಲಬುರಗಿ ತೊಗರಿಬೇಳೆ, ಬಿಹಾರದ ಮಖಾನಾ ಉಲ್ಲೇಖ

‘ವೋಕಲ್ ಫಾರ್ ಲೋಕಲ್’ ಅಭಿಯಾನವು ಭಾರತೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುತ್ತಿದೆ ಎಂದು 139ನೇ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ತಿಳಿಸಿದ್ದಾರೆ. ಕರ್ನಾಟಕದ ಕಲಬುರಗಿಯ ತೊಗರಿಬೇಳೆ ಬಗ್ಗೆ ಅವರು ಉಲ್ಲೇಖಿಸಿದ್ದು ಕೂಡ ವಿಶೇಷವಾಗಿತ್ತು. ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ 12 ವರ್ಷ ತುಂಬಿದ ಬಗ್ಗೆಯೂ ಪ್ರಧಾನಿ ಈ ವೇಳೆ ಸ್ಮರಿಸಿದ್ದಾರೆ.

ಮನ್ ಕಿ ಬಾತ್‌ನಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಕರೆ: ಕರ್ನಾಟಕದ ಕಲಬುರಗಿ ತೊಗರಿಬೇಳೆ, ಬಿಹಾರದ ಮಖಾನಾ ಉಲ್ಲೇಖ
ನರೇಂದ್ರ ಮೋದಿ
Image Credit source: PTI

Updated on: Oct 25, 2026 | 1:02 PM

ನವದೆಹಲಿ, ಅಕ್ಟೋಬರ್​​ 25: ‘ವೋಕಲ್ ಫಾರ್ ಲೋಕಲ್’ ಮನೋಭಾವವು ಭಾರತೀಯ ಉತ್ಪನ್ನಗಳನ್ನು ವಿಶ್ವದ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 139ನೇ ಮನ್​​ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ನಮೋ, ಹಬ್ಬಗಳ ಸಂದರ್ಭದಲ್ಲಿ ಭಾರತೀಯರು ದೇಶೀಯ ಉತ್ಪನ್ನಗಳಿಗೆ ಮಹತ್ವ ನೀಡಲು ಆರಂಭಿಸಿದ್ದಾರೆ. ಈ ಹಬ್ಬದ ಋತುವಿನಲ್ಲಿ ನಿಮ್ಮ ಸುತ್ತಮುತ್ತಲಿನ ಬದಲಾವಣೆಯನ್ನು ನೀವು ಗಮನಿಸಿರಬಹುದು. ಜನರು ಶಾಪಿಂಗ್ ಮಾಡುವಾಗ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.

ಬಿಹಾರದ ಮಖಾನಾ ಮತ್ತು ಕರ್ನಾಟಕದ ಕಲಬುರಗಿಯ ತೊಗರಿಬೇಳೆ ವಿಶ್ವದಾದ್ಯಂತ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುತ್ತಿವೆ. ಬುಡಕಟ್ಟು ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ ಪ್ಯಾಕೇಜಿಂಗ್ ಮೂಲಕ ಮಹಾರಾಷ್ಟ್ರದ ಬುಡಕಟ್ಟು ಉತ್ಪನ್ನಗಳು ಮನ್ನಣೆ ಪಡೆಯುತ್ತಿವೆ. ಖಾದಿಯ ಜನಪ್ರಿಯತೆ ಹೆಚ್ಚುತ್ತಿದ್ದು, ನಮ್ಮ ಸಂಪ್ರದಾಯಗಳನ್ನು ಜೀವಂತವಾಗಿರಿಸಿರುವ ಕುಶಲಕರ್ಮಿಗಳಿಗೆ ಇದರಿಂದ ಬೆಂಬಲ ದೊರೆಯುತ್ತಿದೆ. ಹೀಗಾಗಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ‘ವೋಕಲ್ ಫಾರ್ ಲೋಕಲ್’ ಅಭಿಯಾನವನ್ನು ಬಲಪಡಿಸೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಆಂತರಿಕ ಭದ್ರತೆ ಮತ್ತು ಮಾವೋವಾದ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ: ಅಮಿತ್ ಶಾ ಕಾರ್ಯವೈಖರಿ ಕೊಂಡಾಡಿದ ನರೇಂದ್ರ ಮೋದಿ

ಮನ್​​ ಕೀ ಬಾತ್​​ಗೆ 12 ವರ್ಷ; ಆರಂಭ ಸ್ಮರಿಸಿದ ಮೋದಿ

12 ವರ್ಷಗಳ ಹಿಂದೆ ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾವು ‘ಮನ್ ಕಿ ಬಾತ್’ ಆರಂಭಿಸಿದೆವು. ಅಂದಿನಿಂದ ನಮ್ಮ ಪಯಣ ನಿರಂತರವಾಗಿ ಮುಂದುವರಿದಿದೆ. ಈ ಪಯಣದಲ್ಲಿ ನೀವೆಲ್ಲರೂ ಸಹಯಾತ್ರಿಗಳೂ ಮಾರ್ಗದರ್ಶಕರೂ ಆಗಿದ್ದೀರಿ. ದೇಶದ ಸಾಮಾನ್ಯ ಜನರ ಪರಿಶ್ರಮ, ಧೈರ್ಯ, ಬದ್ಧತೆ, ಸಮರ್ಪಣೆ ಮತ್ತು ಸೇವಾ ಮನೋಭಾವವನ್ನು ಗೌರವಿಸಲು ‘ಮನ್ ಕಿ ಬಾತ್’ ನನಗೆ ಅದ್ಭುತ ಅವಕಾಶವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಶತಮಾನಗಳಷ್ಟು ಹಳೆಯ ತೀರ್ಥಯಾತ್ರೆಯ ಸಂಪ್ರದಾಯವನ್ನು ಉಲ್ಲೇಖಿಸಿದ ಅವರು, ‘ಮನ್ ಕಿ ಬಾತ್’ ಕೂಡ ಒಂದು ತೀರ್ಥಯಾತ್ರೆಗೆ ಕಡಿಮೆಯಿಲ್ಲ. ದೇಶದ ಜನರ ಪ್ರಯತ್ನಗಳನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಮತ್ತು ಅವರ ಕೊಡುಗೆಗಳನ್ನು ಗೌರವಿಸಲು ಇದು ನೆರವಾಗುತ್ತದೆ ಎಂದಿದ್ದಾರೆ.

ಸ್ವಚ್ಛತೆಗೆ ಕರೆ ನೀಡಿದ ಪ್ರಧಾನಿ

ದೀಪಾವಳಿ ಮತ್ತು ಛಠ್‌ನಂತಹ ಪವಿತ್ರ ಹಬ್ಬಗಳು ಸಮೀಪಿಸುತ್ತಿವೆ. ವಿವಿಧೆಡೆ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗುತ್ತಿದೆ. ನಾವು ವಾಸಿಸುವ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಇದೇ ವೇಳೆ ದೇಶದ ಜನತೆಗೆ ಪ್ರಧಾನಿ ಕರೆ ನೀಡಿದ್ದಾರೆ.

ಹೊಸ ಉಪಕ್ರಮಗಳ ಪ್ರಸ್ತಾಪ

ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ ‘ನವ್-ತ್ರಿಂಜನ್’ ಉಪಕ್ರಮದ ಮೂಲಕ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಪ್ರಯತ್ನವನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ನಮ್ಮ ದೇಶದಲ್ಲಿ ತಲೆಮಾರುಗಳಿಂದ ನಮ್ಮ ಗುರುತಿನ ಭಾಗವಾಗಿರುವ ಅನೇಕ ಸಾಂಪ್ರದಾಯಿಕ ಕೌಶಲ್ಯಗಳಿವೆ. ಈ ಸಂಪ್ರದಾಯಗಳು ಈಗ ಹೊಸ ಪ್ರಯೋಗಗಳಿಗೆ ಸ್ಫೂರ್ತಿಯಾಗುತ್ತಿರುವುದು ಸಂತಸದ ಸಂಗತಿ. ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ರೂಪಿಸಲಾಗುತ್ತಿದೆ. ಪಂಜಾಬ್‌ನಲ್ಲಿ ಇಂತಹ ಒಂದು ಉಪಕ್ರಮ ಬಹಳ ಸಮಯದಿಂದ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

‘ಖೇತಿ ವಿರಾಸತ್ ಮಿಷನ್’ ಎಂಬ ಸಂಸ್ಥೆಯು ಸಾವಯವ ಕೃಷಿ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಿದೆ. ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ ನೈಸರ್ಗಿಕ ಹತ್ತಿ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಉಪಕ್ರಮಕ್ಕೆ ‘ನವ್-ತ್ರಿಂಜನ್’ ಎಂದು ಹೆಸರಿಡಲಾಗಿದೆ. ಈ ಯೋಜನೆಯಡಿ ರಾಸಾಯನಿಕಗಳನ್ನು ಬಳಸದೆ ಸಾವಯವ ಹತ್ತಿಯನ್ನು ಬೆಳೆಯಲಾಗುತ್ತಿದೆ. ನೈಸರ್ಗಿಕ ಬಣ್ಣದ ಹತ್ತಿಯನ್ನೂ ಇಲ್ಲಿ ಬೆಳೆಸಲಾಗುತ್ತಿದೆ ಎಂದು ಮೋದಿ ವಿವರಿಸಿದ್ದಾರೆ.

ಇದನ್ನೂ ಓದಿ: ಜಿಐ-ಟ್ಯಾಗ್ ಹೊಂದಿರುವ ಕಲಬುರಗಿ ತೊಗರಿ ಬೇಳೆಗೆ ಮತ್ತೊಂದು ಗರಿ: ಶೇ.30ರಷ್ಟು ಹೆಚ್ಚಿನ ಬೆಲೆಗೆ ಮಾಲ್ಡೀವ್ಸ್‌​ಗೆ ರಫ್ತು

ಉತ್ತರಾಖಂಡದಲ್ಲಿ ನದಿಗೆ ಮರುಜೀವ

ಉತ್ತರಾಖಂಡದ ತೆಹ್ರಿ ಗಢ್ವಾಲ್ ಪ್ರದೇಶದಲ್ಲಿ ಹೇವಲ್ ನದಿಯನ್ನು ಪುನರುಜ್ಜೀವನಗೊಳಿಸಲು ಸ್ಥಳೀಯರು ಕೈಗೊಂಡ ಸಮುದಾಯ ಆಧಾರಿತ ಪ್ರಯತ್ನವನ್ನೂ ಪ್ರಧಾನಿ ಪ್ರಸ್ತಾಪಿಸಿದ್ದು, ಕೆಲವು ಸಮಯದ ಹಿಂದೆ ನದಿಯ ನೀರಿನ ಮಟ್ಟ ಕಡಿಮೆಯಾಗತೊಡಗಿತ್ತು. ಸುತ್ತಮುತ್ತಲಿನ ನೈಸರ್ಗಿಕ ಜಲಮೂಲಗಳೂ ಬತ್ತಿಹೋಗುತ್ತಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರು ಕೈಜೋಡಿಸಿ ನದಿ ಉಳಿಸುವ ಅಭಿಯಾನ ಆರಂಭಿಸಿದರು. ಈ ಅಭಿಯಾನದಡಿ ಮಳೆನೀರು ಸಂಗ್ರಹಣೆ, ಅಂತರ್ಜಲ ಮರುಪೂರಣ ಮತ್ತು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ನೆಡುವ ಕಾರ್ಯಗಳನ್ನು ಕೈಗೊಳ್ಳಲಾಯಿತು. ಈ ಪ್ರಯತ್ನಗಳ ಫಲವಾಗಿ ಇಂದು ಹೇವಲ್ ನದಿ ಪುನರುಜ್ಜೀವನಗೊಂಡಿದೆ. ಜೊತೆಗೆ, ಹತ್ತಾರು ನೈಸರ್ಗಿಕ ಜಲಮೂಲಗಳನ್ನೂ ಪುನಃಸ್ಥಾಪಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:17 pm, Sun, 25 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us