
ಕೋಲ್ಕತ್ತಾ, ಸೆಪ್ಟೆಂಬರ್ 14: ಸರ್ಕಾರದ ಮಾನ್ಯತೆ ಮತ್ತು ಅಧಿಕೃತ ಅನುಮತಿಯಿಲ್ಲದೆ ರಾಜ್ಯದಲ್ಲಿ ಯಾವುದೇ ಮದರಸಾಗಳು ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯಾದ್ಯಂತ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳ ತಪಾಸಣೆ ತೀವ್ರಗೊಳಿಸಿರುವ ಸರ್ಕಾರ, ನಿಯಮ ಉಲ್ಲಂಘಿಸಿದ ಸುಮಾರು 252 ಮದರಸಾಗಳಿಗೆ ಮುಚ್ಚುವಂತೆ ಆದೇಶ ನೀಡಿದೆ. ಇದರ ಬೆನ್ನಲ್ಲೇ, ಅಕ್ರಮ ಮದರಸಾಗಳು ಬಾಂಗ್ಲಾದೇಶದಿಂದ ಬರುವ ಉಗ್ರರಿಗೆ ಆಶ್ರಯ ತಾಣಗಳಾಗಿ ಬಳಕೆಯಾಗುತ್ತಿವೆ ಎಂದು ಪಂಚಾಯತ್ ಸಚಿವ ದಿಲೀಪ್ ಘೋಷ್ ಗಂಭೀರ ಆರೋಪ ಮಾಡಿದ್ದಾರೆ.
ಕಾನೂನುಬಾಹಿರ ಚಟುವಟಿಕೆ ಸಹಿಸಲ್ಲ: ಸರ್ಕಾರದ ಅನುಮತಿಯಿಲ್ಲದೆ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ. ಕಾರ್ಯನಿರ್ವಹಿಸಲು ಇಚ್ಛಿಸುವ ಮದರಸಾಗಳು ಅಗತ್ಯ ದಾಖಲೆ ಸಲ್ಲಿಸಿ ಸರ್ಕಾರದ ಅನುಮೋದನೆ ಪಡೆಯಬೇಕು. ನಿಯಮ ಪಾಲಿಸುವವರಿಗೆ ಮಾತ್ರ ಅವಕಾಶ ಎಂದು ಸಚಿವ ದಿಲೀಪ್ ಘೋಷ್ ಎಚ್ಚರಿಸಿದ್ದಾರೆ.
20 ವರ್ಷಗಳ ಗಂಭೀರ ಸಮಸ್ಯೆ: ಮದರಸಾಗಳ ಕಾರ್ಯವೈಖರಿ ಮತ್ತು ಹಣಕಾಸಿನ ಮೂಲಗಳ ಕುರಿತ ಗೊಂದಲಗಳು ಕಳೆದ ಎರಡು ದಶಕಗಳಿಂದಲೂ ಇವೆ. ಈ ಹಿಂದೆ ಹಲವು ನಾಯಕರು ಕಳವಳ ವ್ಯಕ್ತಪಡಿಸಿದ್ದರೂ ಶಾಶ್ವತ ಪರಿಹಾರ ಕಂಡುಕೊಂಡಿರಲಿಲ್ಲ, ಈಗಿನ ಸರ್ಕಾರ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಿದೆ ಎಂದರು.
ಮತ್ತಷ್ಟು ಓದಿ: ಗೆದ್ದು ವಿಧಾನಸಭೆಗೆ ಬನ್ನಿ, ಒಟ್ಟಿಗೇ ಇರೋಣ: ನಂದಿಗ್ರಾಮ ಉಪಚುನಾವಣೆಯಲ್ಲಿ ಮಮತಾಗೆ ಸ್ವಪಕ್ಷೀಯ ಬಂಡಾಯಗಾರರ ರೆಡ್ ಕಾರ್ಪೆಟ್
ಬಾಂಗ್ಲಾ ಉಗ್ರರ ನಂಟು ಆರೋಪ: ಗಡಿಯಾಚೆಗಿನ ಬಾಂಗ್ಲಾದೇಶದಿಂದ ಅಕ್ರಮವಾಗಿ ಒಳನುಸುಳುವ ಭಯೋತ್ಪಾದಕರು ಇಂತಹ ಅಕ್ರಮ ಮದರಸಾಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ದಿಲೀಪ್ ಘೋಷ್ ಹೇಳಿಕೆ ನೀಡಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಮದರಸಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ತಪಾಸಣೆ: ಪಶ್ಚಿಮ ಬಂಗಾಳ ಗಡಿಭಾಗದ ರಾಜ್ಯವಾಗಿರುವುದರಿಂದ ರಾಷ್ಟ್ರೀಯ ಭದ್ರತೆ, ಪಠ್ಯಕ್ರಮದ ಮಾನದಂಡ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಮದರಸಾಗಳ ನೋಂದಣಿ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.
ಸಿಎಂ ಸುವೇಂದು ಅಧಿಕಾರಿ ಮೆಗಾ ಯೋಜನೆಗಳ ಪ್ರಕಟಣೆ: ಒಂದು ಕಡೆ ಮದರಸಾಗಳ ಮೇಲಿನ ಕ್ರಮ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ 15 ಸಾವಿರ ಕೋಟಿ ಮೌಲ್ಯದ ಬೃಹತ್ ಮೂಲಸೌಕರ್ಯ ಯೋಜನೆಗಳು, ಗಂಗೋನಿಯಲ್ಲಿ 700 ಕೋಟಿ ರೂ. ಹೂಡಿಕೆ ಹಾಗೂ 600 ಕೋಟಿ ರೂ. ವೆಚ್ಚದ ‘ಅಮುಲ್’ ಸಂಸ್ಕರಣಾ ಘಟಕದ ಕಾಮಗಾರಿಗಳು ವೇಗ ಪಡೆದುಕೊಂಡಿವೆ ಎಂದು ತಿಳಿಸಿದ್ದಾರೆ.
ರೋಬೋಟಿಕ್ ಅಗ್ನಿಶಾಮಕ ತಂತ್ರಜ್ಞಾನ: ರಾಜ್ಯದಲ್ಲಿ ಅಗ್ನಿ ಅವಘಡಗಳನ್ನು ಎದುರಿಸಲು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಸಾಧ್ಯವಾಗದ ಕಿರಿದಾದ ಗಲ್ಲಿಗಳು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಬೆಂಕಿ ನಂದಿಸಲು ವಿಶೇಷ ‘ರೋಬೋಟಿಕ್ ಅಗ್ನಿಶಾಮಕ ವ್ಯವಸ್ಥೆ’ಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ