ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯು ಇಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ‘ವಿನಾಶದ ಮಾದರಿ’ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ‘ಅಭಿವೃದ್ಧಿ ಮಾದರಿ’ ನಡುವಿನ ಹೋರಾಟವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುರುವಾರ ಉತ್ತರ ಬಂಗಾಳದ ಕೂಚ್ ಬೆಹಾರ್ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಯಸುವ ದೊಡ್ಡ ಬಹುಮಾನ ಬಂಗಾಳ ಆಗಿದೆ . ಈ ಬಾರಿ 294 ಸೀಟುಗಳಲ್ಲಿ 200 ಸೀಟುಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಅವರು ಹೇಳಿದ್ದಾರೆ .
ಜೈ ಶ್ರೀರಾಮ್ ಘೋಷಣೆ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಶಾ, ಜೈ ಶ್ರೀರಾಮ್ ಘೋಷಣೆ ಭಾರತದಲ್ಲಿ ಕೂಗದಿದ್ದರೆ, ಪಾಕಿಸ್ತಾನದಲ್ಲಿ ಕೂಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಈ ಘೋಷಣೆ ಕೂಗಿದರೆ ಮಮತಾ ಬ್ಯಾನರ್ಜಿಗೆ ಸಿಟ್ಟು ಬರುತ್ತದೆ. ಆದರೆ ವಿಧಾನಸಭಾ ಚುನಾವಣೆ ಮುಗಿಯುವ ಹೊತ್ತಿನಲ್ಲಿ ಅವರು ಜೈ ಶ್ರೀರಾಮ್ ಘೋಷಣೆ ಕೂಗಲು ಆರಂಭಿಸುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: Parivartan Yatra: ಮಮತಾ ಬ್ಯಾನರ್ಜಿ ರೈತರಿಗೆ ಅನ್ಯಾಯ ಎಸಗಿದ್ದಾರೆ; ಪಶ್ಚಿಮ ಬಂಗಾಳದಲ್ಲಿ ಜೆ.ಪಿ. ನಡ್ಡಾ ವಾಗ್ದಾಳಿ
ಮಮತಾ ಬ್ಯಾನರ್ಜಿ ಅವರ ಸರ್ಕಾರದ ಕೆಲಸಗಳನ್ನು ಟೀಕಿಸಿದ ಗೃಹ ಸಚಿವರು, ಮೋದಿಯವರ ಸರ್ಕಾರ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಆದರೆ ಮಮತಾ ಬ್ಯಾನರ್ಜಿ ಅವರು ಬತೀಜಾ ಕಲ್ಯಾಣಕ್ಕಾಗಿ (ಅಳಿಯನ ಅಭಿವೃದ್ಧಿ) ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗದ್ದುಗೆಯೇರುವುದನ್ನು ತಡೆಯಲು ಟಿಎಂಸಿ ಗೂಂಡಾಗಳಿಗೆ ಸಾಧ್ಯವಿಲ್ಲ ಎಂದ ಶಾ, ಯಾರೊಬ್ಬರಿಗೂ ಬಂಗಾಳದಲ್ಲಿ ಬಿಜೆಪಿಯನ್ನು ತಡೆಯಲಾಗದು ಎಂದು ಹೇಳಿದ್ದಾರೆ.
West Bengal has suffered a lot because of the anarchist and incompetent TMC government. Mamata didi led TMC govt has no moral right to remain in power. #PoribortonInBengal pic.twitter.com/b8VAf6ZPWl
— Amit Shah (@AmitShah) February 11, 2021
ಜೈ ಶ್ರೀರಾಮ್ ಘೋಷಣೆ ವಿರುದ್ಧ ಮಮತಾ ಸಿಡಿಮಿಡಿ
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಮಮತಾ ಸಿಟ್ಟಾಗಿದ್ದರು. ಭಾಷಣದ ಮಧ್ಯೆ ಸಭಿಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ, ಭಾಷಣವನ್ನು ಮುಂದುವರಿಸಲು ಮಮತಾ ನಿರಾಕರಿಸಿದ್ದರು.
ಇದನ್ನೂ ಓದಿ: ಬಾಲ್ಯದಿಂದಲೂ ಸುಭಾಷ್‌ಚಂದ್ರ ಬೋಸ್ ನನಗೆ ಸ್ಫೂರ್ತಿ; ನೇತಾಜಿ ಚಿಂತನೆಯಂತೆ ದೇಶ ಮುನ್ನಡೆಯುತ್ತಿದೆ-ಪ್ರಧಾನಿ ಮೋದಿ
ತೃಣಮೂಲ ಕಾಂಗ್ರೆಸ್ ಹಲವಾರು ಬಾರಿ ಫೌಲ್ : ಮೋದಿ
ಭಾನುವಾರ ಹಲ್ದಿಯಾದಲ್ಲಿ ನಡೆದಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಬಂಗಾಳದವರು ಫುಟ್ಬಾಲ್ ಇಷ್ಟ ಪಡುತ್ತಾರೆ. ನಾನು ಆ ಭಾಷೆಯಲ್ಲಿಯೇ ಮಾತನಾಡುತ್ತೇನೆ. ತೃಣಮೂಲ ಕಾಂಗ್ರೆಸ್ ಹಲವಾರು ಬಾರಿ ಫೌಲ್ ಆಗಿದೆ. ದುರಾಡಳಿತ, ವಿಪಕ್ಷ ನಾಯಕರ ಮೇಲೆ ದಾಳಿ, ಹಣ ವಂಚನೆ ಹೀಗೆ ಹಲವಾರು ವಿಷಯಗಳಲ್ಲಿ ಅವರು ಫೌಲ್ ಆಗಿದ್ದಾರೆ. ಬಂಗಾಳದ ಜನರು ಇದನ್ನೆಲ್ಲಾ ನೋಡುತ್ತಿದ್ದಾರೆ. ಬಂಗಾಳ ಶೀಘ್ರದಲ್ಲಿಯೇ ರಾಮ್ ಕಾರ್ಡ್ ನ್ನು ತೋರಿಸಲಿದೆ ಎಂದಿದ್ದರು.