ಬಾಲಕನ ಸಮಯಪ್ರಜ್ಞೆಯಿಂದ ಬಹುದೊಡ್ಡ ರೈಲು ಅಪಘಾತ ತಪ್ಪಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಇದು. ಮುರ್ಸಲೀನ್ ಶೇಖ್ ಎಂಬ 12 ವರ್ಷದ ಬಾಲಕ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕನ ಮಗ. ಅಂದು ತಂದೆಯೊಂದಿಗೆ ಹೊಲಕ್ಕೆ ಬಂದಿದ್ದ ಮುರ್ಸಲಿನ್ ರೈಲ್ವೆ ಹಳಿಯ ಒಂದು ಭಾಗವು ಹಾನಿಗೊಳಗಾಗಿರುವುದನ್ನು ಗಮನಿಸಿದ್ದಾನೆ. ಇನ್ನೇನು ರೈಲು ಬಂದೇ ಬಿಡುತ್ತದೆ ಏನು ಮಾಡುವುದು ಎಂದು ಆಲೋಚಿಸಿ ತಕ್ಷಣ ತಾನು ಧರಿಸಿರುವ ಕೆಂಪು ಟಿ ಶರ್ಟ್ ತೆಗೆದು ರೈಲು ಬರುತ್ತಿದ್ದ ಕಡೆಗೆ ಬೀಸುತ್ತಾನೆ.
ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿದ್ದರಿಂದ ಅಪಘಾತ ತಪ್ಪಿತ್ತು. ಕಳೆದ ಒಂದು ವಾರದಿಂದ ಆ ಭಾಗದಲ್ಲಿ ಭಾರಿ ಮಳೆಯಾಗಿತ್ತು, ಇದರಿಂದಾಗಿ ರೈಲು ಹಳಿ ಹಾಳಾಗಿತ್ತು, ಬಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿದೆ, ಜತೆಗೆ ಜನರ ಜೀವವೂ ಉಳಿದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದಾಗಿ ಹಳಿಗಳು ಹಾಳಾಗಿದ್ದವು, ಸಮಯಕ್ಕೆ ಸರಿಯಾಗಿ ಬಾಲಕ ಅತ್ತ ಹೋಗಿದ್ದ, ಆತ ಏನು ಮಾಡಬೇಕು ಎಂದು ಆಲೋಚಿಸುವುದು ಸ್ವಲ್ಪ ತಡವಾಗಿದ್ದರೂ ದೊಡ್ಡ ಅಪಘಾತ ನಡೆದುಹೋಗುತ್ತಿತ್ತು.
ಮತ್ತಷ್ಟು ಓದಿ: ಸೆಲ್ಫಿ ತೆಗೆಯುತ್ತಿದ್ದ ಯುವಕನ ಮೇಲೆ ಹರಿದ ರೈಲು, ಸ್ಥಳದಲ್ಲೇ ಸಾವು
ರೈಲ್ವೆ ಅಧಿಕಾರಿಗಳು ಬಾಲಕನಿಗೆ ಶೌರ್ಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು ಮತ್ತು ನಗದು ಬಹುಮಾನವನ್ನು ಸಹ ನೀಡಿದರು. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಏತನ್ಮಧ್ಯೆ, ಹಳಿಗಳ ಹಾನಿಗೊಳಗಾದ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ