ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ವಿಸ್ತರಣೆ: 43 ಸಚಿವರು ಪ್ರಮಾಣ ವಚನ ಸ್ವೀಕಾರ

|

Updated on: May 10, 2021 | 12:10 PM

West Bengal: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿರಿಯ ನಾಯಕರಲ್ಲಿ ಸುಬ್ರತಾ ಮುಖರ್ಜಿ, ಪಾರ್ಥ ಚಟರ್ಜಿ, ಫಿರ್ಹಾದ್ ಹಕೀಮ್, ಜ್ಯೋತಿ ಪ್ರಿಯಾ ಮಲ್ಲಿಕ್, ಮೊಲೊಯ್ ಘಾಟಕ್, ಅರೂಪ್ ಬಿಸ್ವಾಸ್, ಡಾ.ಶಶಿ ಪಂಜ ಮತ್ತು ಜಾವೇದ್ ಅಹ್ಮದ್ ಖಾನ್ ಸೇರಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಹುಮಾಯೂನ್ ಕಬೀರ್, ಬಂಗಾಳದ ಮಾಜಿ ರಣಜಿ ನಾಯಕ ಮನೋಜ್ ತಿವಾರಿ ಮತ್ತು ಸಿಯುಲಿ ಸಹಾ ಸೇರಿದಂತೆ 15 ನೂತನ ಸಚಿವರು ಇದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ವಿಸ್ತರಣೆ: 43 ಸಚಿವರು ಪ್ರಮಾಣ ವಚನ ಸ್ವೀಕಾರ
ಪ್ರಮಾಣ ವಚನ ಸ್ವೀಕರಿಸಿ ದ 43 ಟಿಎಂಸಿ ನಾಯಕರು
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು 43 ಮಂದಿ ಸಚಿವರು ಇಂದು  ಪ್ರಮಾಣ ವಚನ ಸ್ವೀಕರಿಸಿದ್ದಾರೆ. 19 ರಾಜ್ಯ ಸಚಿವರುಗಳು ಕೊಲ್ಕತ್ತಾದ ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಜಗದೀಪ್ ಧನ್ಕರ್ ಪ್ರಮಾಣ ವಚನ ಬೋಧಿಸಿದರು. ಮಾಜಿ ವಿತ್ತ ಸಚಿವ ಅಮಿತ್ ಮಿಶ್ರಾ ಅವರು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ಮಮತಾ ಬ್ಯಾನರ್ಜಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿರಿಯ ನಾಯಕರಲ್ಲಿ ಸುಬ್ರತಾ ಮುಖರ್ಜಿ, ಪಾರ್ಥ ಚಟರ್ಜಿ, ಫಿರ್ಹಾದ್ ಹಕೀಮ್, ಜ್ಯೋತಿ ಪ್ರಿಯಾ ಮಲ್ಲಿಕ್, ಮೊಲೊಯ್ ಘಾಟಕ್, ಅರೂಪ್ ಬಿಸ್ವಾಸ್, ಡಾ.ಶಶಿ ಪಂಜ ಮತ್ತು ಜಾವೇದ್ ಅಹ್ಮದ್ ಖಾನ್ ಇದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಹುಮಾಯೂನ್ ಕಬೀರ್, ಬಂಗಾಳದ ಮಾಜಿ ರಣಜಿ ನಾಯಕ ಮನೋಜ್ ತಿವಾರಿ ಮತ್ತು ಸಿಯುಲಿ ಸಹಾ ಸೇರಿದಂತೆ 15 ನೂತನ ಸಚಿವರು ಇದ್ದಾರೆ.

ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) 10 ಸಚಿವರ ಪಟ್ಟಿಯಲ್ಲಿ ಕಬೀರ್ ಸೇರಿದ್ದರೆ, ತಿವಾರಿ ಮತ್ತು ಸಾಹ ಅವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಂಬತ್ತು ಶಾಸಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮೇ 5 ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ, ಟಿಎಂಸಿ ಮೂರನೇ ಬಾರಿಗೆ ಬಹುಮತ ಗಳಿಸಿತು. ಈ ಬಾರಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 292 ವಿಧಾನಸಭಾ ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದುಕೊಂಡಿತು.
ಆದಾಗ್ಯೂ, ಬಂಗಾಳ ರಾಜಕೀಯದ ಕೇಂದ್ರವಾದ ನಂದಿಗ್ರಾಮ್‌ನಿಂದ ಬ್ಯಾನರ್ಜಿ ಪರಾಭವಗೊಂಡಿದ್ದಾರೆ.

ಮಮತಾ ಬದುಕು ಸಾಗಿ ಬಂದ ಹಾದಿ
ಟಿಎಂಸಿ ಪಕ್ಷದ ಅಧಿನಾಯಕಿಯಾಗಿರುವ ಮಮತಾ ಬ್ಯಾನರ್ಜಿ ರಾಜಕೀಯ ಜೀವನ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಿಂದ. 1970ರಲ್ಲಿ ಮಮತಾ ಬ್ಯಾನರ್ಜಿ ಬಂಗಾಳದ ಯುವ ಕಾಂಗ್ರೆಸ್ ನಾಯಕಿಯಾಗಿದ್ದರು. ಬಂಗಾಳದ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಳಿಕ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದರು. 1984ರಲ್ಲಿ 8ನೇ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಕಿರಿಯ ವಯಸ್ಸಿಗೆ ಲೋಕಸಭಾ ಸದಸ್ಯೆಯಾದರು. 1984ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಪ್ರಣವ್ ಮುಖರ್ಜಿ ವಿರೋಧಿಸಿದ್ದರು. ಆದರೂ, ಮಮತಾ ಬ್ಯಾನರ್ಜಿಗೆ ಆಗ ಟಿಕೆಟ್ ನೀಡಲಾಗಿತ್ತು.

ತಮಗೆ ಲೋಕಸಭಾ ಟಿಕೆಟ್ ನೀಡಿಕೆಗೆ ವಿರೋಧಿಸಿದ್ದ ಬಂಗಾಳದವರೇ ಆದ ಪ್ರಣವ್ ಮುಖರ್ಜಿ ಮುಂದಿನ ದಿನಗಳಲ್ಲಿ ಯುಪಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಆಗ ಪ್ರಣವ್ ದಾದಾ ಅಭ್ಯರ್ಥಿಯಾಗುವುದುನ್ನು ವಿರೋಧಿಸಿ ಮಮತಾ ಮತ ಚಲಾಯಿಸಿದ್ದರು. ಪಶ್ಚಿಮ ಬಂಗಾಳದ ಪ್ರಣವ್ ಮುಖರ್ಜಿ ದೇಶದ ರಾಷ್ಟ್ರಪತಿ ಆಗೋದು ಬಂಗಾಳಕ್ಕೆ ಹೆಮ್ಮೆಯ ವಿಷಯ ಎಂದು ಮಮತಾ ಹೇಳಬಹುದಿತ್ತು. ಆದರೇ, ಹಾಗೆ ಮಮತಾ ಹೇಳಲಿಲ್ಲ. 1984ರಲ್ಲಿ ತಮ್ಮ ರಾಜಕೀಯ ಮೆಟ್ಟಿಲು ಹತ್ತುವಾಗ ಪ್ರಣವ್ ವಿರೋಧಿಸಿದ್ದನ್ನು ಮಮತಾ ಮರೆತಿರಲಿಲ್ಲ.

ಕಾಂಗ್ರೆಸ್ ಪಕ್ಷದೊಂದಿಗಿನ ಭಿನ್ನಾಭಿಪ್ರಾಯ, ನಾಯಕತ್ವದ ಗೊಂದಲದಿಂದಾಗಿ ಮಮತಾ ಬ್ಯಾನರ್ಜಿ 1997ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ಮಮತಾ ಬ್ಯಾನರ್ಜಿ ಮೂವರು ಪ್ರಧಾನಮಂತ್ರಿಗಳ ಜೊತೆಗೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳೆರೆಡರಲ್ಲೂ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಮಾನವ ಸಂಪನ್ಮೂಲ, ಯುವಜನಸೇವಾ ಖಾತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಗಣಿ, ರೈಲ್ವೆ ಖಾತೆಯಂಥ ಪ್ರಮುಖ ಖಾತೆಗಳನ್ನು ಮಮತಾ ಬ್ಯಾನರ್ಜಿ ನಿರ್ವಹಿಸಿದ್ದಾರೆ. ಭಾರತದಲ್ಲಿ ರೈಲ್ವೆ ಇಲಾಖೆ ಸಚಿವರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮಮತಾ ದೀದಿಗೆ ಸಲ್ಲುತ್ತೆ. 2012ರಲ್ಲಿ ಟೈಮ್ಸ್ ಮ್ಯಾಗಜೀನ್ ಮಾಡಿದ್ದ ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರೂ ಸೇರಿತ್ತು.

ಇದನ್ನೂ ಓದಿ:  ಕೇಂದ್ರ ಸಚಿವರು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ: ಮಮತಾ ಬ್ಯಾನರ್ಜಿ

 

Published On - 12:09 pm, Mon, 10 May 21