ಇಂಡಿಯಾ ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಗೃಹ ಸಚಿವ ಅಮಿತ್ ಶಾ ಅವರು ಮಾಡಿರುವ ಆರೋಪಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಉತ್ತರ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ವಿಪಕ್ಷಗಳ ಒಕ್ಕೂಟ ಇಂಡಿಯಾ ವಿರುದ್ಧ ಆರೋಪ ಮಾಡಿದ್ದರು. ಈ ವಿಪಕ್ಷಗಳಿಗೆ ಲೋಕತಂತ್ರದ ಚಿಂತೆಯೂ ಇಲ್ಲ, ದೇಶದ ಚಿಂತೆಯೂ ಇಲ್ಲ, ಜನರ ಬಗ್ಗೆ ಕಾಳಜಿಯೂ ಇಲ್ಲ, ಅವರಿಗೆ ಕೇವಲ ತಮ್ಮ ಮೈತ್ರಿಯ ಬಗ್ಗೆ ಮಾತ್ರ ಚಿಂತೆ ಇದೆ. ನೀವೆಷ್ಟು ಬೇಕಾದರೂ ಮೈತ್ರಿ ಮಾಡಿಕೊಳ್ಳಿ ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರೇ ಮತ್ತೆ ಗೆದ್ದು ಬರುತ್ತಾರೆ ಎಂದು ಹೇಳಿದ್ದರು.
ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡಿ, ನಾನು ಪಕ್ಷಗಳಿಗೆ ಮನವಿ ಮಾಡುತ್ತಿದ್ದೇನೆ, ನೀವು ಮೈತ್ರಿ ಮಾಡಿಕೊಂಡಿದ್ದೀರಾ ಎಂದ ಮಾತ್ರಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಮರ್ಥನೆ ಮಾಡಿಕೊಳ್ಳಬೇಡಿ, ಯಾಕೆಂದರೆ ಮೋದಿಯವರು ಮೈತ್ರಿ ಇಲ್ಲದೆಯೂ ಪೂರ್ಣ ಬಹುಮತದಿಂದ ಚುನಾವಣೆ ಗೆಲ್ಲುತ್ತಾರೆ ಎಂದು ಹೇಳಿದರು.
ಮತ್ತಷ್ಟು ಓದಿ: ದೆಹಲಿ ಬಗ್ಗೆ ಯೋಚಿಸಿ, ಮೈತ್ರಿ ಬಗ್ಗೆ ಅಲ್ಲ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ವಿರುದ್ಧ ಅಮಿತ್ ಶಾ ವಾಗ್ದಾಳಿ
ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ದೆಹಲಿಯ ಗೆಲುವು ಎಂದರೆ ಇಂಡಿಯಾ ಮೈತ್ರಿ ಕೂಟದ ಗೆಲುವುದು ಕೂಡ ಎಂದಿದ್ದಾರೆ.
ನಮ್ಮ ಮೈತ್ರಿ ಹೊಸತು, ದೇಶಾದ್ಯಂತ ನಾವಿದ್ದೇವೆ, ನಿರುದ್ಯೋಗ, ವಿಪತ್ತು, ಕೋಮು ಉದ್ವಿಗ್ನತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಹೋಗಲಾಡಿಸಲು ಈ ಬಾರಿ ಇಂಡಿಯಾ ಗೆಲ್ಲಲೇಬೇಕು. ಭಾರತ ನಮ್ಮ ಮಾತೃಭೂಮಿ ಹಾಗೂ ಇಂಡಿಯಾ ಮೈತ್ರಿಕೂಟ ಕೂಡ ಮಾತೃಭೂಮಿಗಾಗಿಯೇ ನಿರ್ಮಿಸಲಾಗಿದೆ. ಹೀಗಾಗಿ ಇನ್ನುಮುಂದೆ ಎನ್ಡಿಎಗೆ ಯಾವುದೇ ಮೌಲ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಹಿಂಸಾಚಾರವನ್ನು ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದ ಅವರು, ಮುಂದಿನ ವರ್ಷದ ರಾಷ್ಟ್ರೀಯ ಚುನಾವಣೆಯಲ್ಲಿ ತಮ್ಮ ಮೈತ್ರಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಯೋತ್ಪಾದನೆ ಸೃಷ್ಟಿಸುವುದು ಅವರ ಸಂಪ್ರದಾಯವೇ ಹೊರತು, ಸಂವಿಧಾನ ರಕ್ಷಿಸುವುದಲ್ಲ, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು ಹಿಂಸಿಸಲಾಗುತ್ತಿದೆ ಎಂದು ಬ್ಯಾನರ್ಜಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Fri, 4 August 23