ಕೊಲ್ಕತ್ತಾ: ಎಡಪಕ್ಷಗಳು, ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ಪಕ್ಷಗಳ ಮಹಾಮೈತ್ರಿಕೂಟವು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ವಿರುದ್ಧ ನಿಚ್ಚಳ ಗೆಲುವು ಸಾಧಿಸಲಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿಶ್ವಾಸ ವ್ಯಕ್ತಪಡಿಸಿದರು. ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಎರಡು ಪಕ್ಷಗಳ ಸ್ಪರ್ಧೆಯಷ್ಟೇ ಇರುವುದಿಲ್ಲ ಎನ್ನುವುದಕ್ಕೆ ಇಲ್ಲಿ ನೆರೆದಿರುವ ಭಾರೀ ಸಂಖ್ಯೆಯ ಜನರೇ ಸಾಕ್ಷಿ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಹೊರತುಪಡಿಸಿ, ತಮ್ಮ ಹಾದಿಗೆ ಅಡ್ಡಗಾಲಾಗುವ ಮತ್ತೊಂದು ಪಕ್ಷ ಇರಬಾರದೆಂದು ಈ ಪಕ್ಷಗಳು ಭಾವಿಸಿವೆ. ಮುಂದಿನ ದಿನಗಳಲ್ಲಿ ಕೇವಲ ಮಹಾಮೈತ್ರಿಕೂಟ ಮಾತ್ರ ಉಳಿದುಕೊಳ್ಳುತ್ತದೆ. ಬಿಜೆಪಿ-ಕಾಂಗ್ರೆಸ್ಗಳು ಪಶ್ಚಿಮ ಬಂಗಾಳದಲ್ಲಿ ಉಳಿಯುವುದಿಲ್ಲ ಎಂದರು.
ಟಿಎಂಸಿ-ಬಿಜೆಪಿಗೆ ಸವಾಲು ಹಾಕಿದ ಅಬ್ಬಾಸ್ ಸಿದ್ದಿಕಿ
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುತ್ತೇವೆ. ರಾಜ್ಯದ ಜನರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಂದು ಇಂಡಿಯನ್ ಸೆಕ್ಯುಲರ್ ಫ್ರಂಟ್ನ (ಐಎಸ್ಎಫ್) ಅಬ್ಬಾಸ್ ಸಿದ್ದಿಕಿ ಹೇಳಿದರು. ನಗರದ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಎಡಪಕ್ಷಗಳು, ಕಾಂಗ್ರೆಸ್ ಮತ್ತು ಜಾತ್ಯತೀತ ಪಕ್ಷಗಳ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಈ ಬಾರಿ ಬಿಜೆಪಿ ಮತ್ತು ಅದರ ಬೇನಾಮಿ ಮಮತಾ ಬ್ಯಾನರ್ಜಿಯಿಂದ ಪಶ್ಚಿಮ ಬಂಗಾಳಕ್ಕೆ ಮುಕ್ತಿ ಸಿಗುತ್ತದೆ. ಮಮತಾ ಬ್ಯಾನರ್ಜಿ ಮತ್ತು ಅವರ ಟಿಎಂಸಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಿದ್ದಾರೆ. ರಾಜ್ಯದಲ್ಲೀಗ ಅರಾಜಕ ಪರಿಸ್ಥಿತಿ ನೆಲೆಗೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಜೊತೆಗೆ ಐಎಸ್ಎಫ್ನ ಸೀಟು ಹಂಚಿಕೆ ಮಾತುಕತೆ ಇನ್ನೂ ನಡೆಯುತ್ತಿದೆ. ಕಾಂಗ್ರೆಸ್ನೊಂದಿಗೆ ಒಪ್ಪಂದ ಅಂತಿಮಗೊಳ್ಳುವ ಮೊದಲೇ ಎಡಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಐಎಸ್ಎಫ್ ಅಂತಿಮಗೊಳಿಸಿದೆ.
ಚುನಾವಣಾ ದಿನಾಂಕ ಘೋಷಣೆ
ಚುನಾವಣಾ ಆಯೋಗವು ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ಮಾರ್ಚ್ 27ರಿಂದ ಆರಂಭವಾಗಲಿರುವ ಚುನಾವಣೆ ಏಪ್ರಿಲ್ 29ರವರೆಗೆ ಒಟ್ಟು 8 ಹಂತಗಳಲ್ಲಿ ನಡೆಯಲಿದೆ. ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 209 ಸ್ಥಾನ ಪಡೆದಿತ್ತು. ಬಿಜೆಪಿ 27, ಕಾಂಗ್ರೆಸ್ 23, ಸಿಪಿಎಂ 19 ಸ್ಥಾನ ಪಡೆದಿತ್ತು. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಜಿದ್ದಾಜಿದ್ದೆ ಹೋರಾಟ ನಡೆಯುತ್ತಿದ್ದು ಚುನಾವಣಾ ಕಣ ರಂಗೇರಿದೆ.
ಇದನ್ನೂ ಓದಿ: ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಇದನ್ನೂ ಓದಿ: West Bengal Election Date 2021: ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ, ಮೇ 2ರಂದು ಫಲಿತಾಂಶ