ಲೋಕಲ್ ರೈಲು ಬಂದ್, ಪಶ್ಚಿಮ ಬಂಗಾಳದಲ್ಲಿ ಕೊವಿಡ್ ನಿರ್ಬಂಧ ವಿಧಿಸಿದ ಮಮತಾ ಬ್ಯಾನರ್ಜಿ

|

Updated on: May 05, 2021 | 5:43 PM

West Bengal COVID19 Restrictions: ಸ್ಥಳೀಯ ರೈಲುಗಳ ಸಂಚಾರವನ್ನು ನಾಳೆಯಿಂದ ಸ್ಥಗಿತಗೊಳಿಸಲಾಗುವುದು. ಕೋಲ್ಕತಾ ಮೆಟ್ರೋ ಸೇರಿದಂತೆ ರಾಜ್ಯ ಸಾರಿಗೆ ಕೇವಲ 50 ಶೇಕಡಾ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಕೊವಿಡ್ ಪರಿಸ್ಥಿತಿಯನ್ನು ನೋಡಿದರೆ, ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮಮತಾ ಹೇಳಿದ್ದು , ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಲೋಕಲ್ ರೈಲು ಬಂದ್, ಪಶ್ಚಿಮ ಬಂಗಾಳದಲ್ಲಿ ಕೊವಿಡ್ ನಿರ್ಬಂಧ ವಿಧಿಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊವಿಡ್ 19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ರಾಜ್ಯದಲ್ಲಿ ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಎಲ್ಲಾ ಮಾರುಕಟ್ಟೆಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿಗಳು ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ರವರೆಗೆ ಮತ್ತು ಸಂಜೆ 5 ರಿಂದ ಸಂಜೆ 7 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಬ್ಯಾನರ್ಜಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದಲ್ಲದೆ, ಸ್ಥಳೀಯ ರೈಲುಗಳ ಸಂಚಾರವನ್ನು ನಾಳೆ (ಮೇ 6) ರಿಂದ ಸ್ಥಗಿತಗೊಳಿಸಲಾಗುವುದು. ಕೋಲ್ಕತಾ ಮೆಟ್ರೋ ಸೇರಿದಂತೆ ರಾಜ್ಯ ಸಾರಿಗೆ ಕೇವಲ 50 ಶೇಕಡಾ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಕೊವಿಡ್ ಪರಿಸ್ಥಿತಿಯನ್ನು ನೋಡಿದರೆ, ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮಮತಾ ಹೇಳಿದ್ದು , ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ರಾಜ್ಯ ಸರ್ಕಾರಿ ಕಚೇರಿಗಳು ಈಗ ಕೇವಲ 50 ಪ್ರತಿಶತದಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಖಾಸಗಿ ಕಚೇರಿಗಳಿಗೆ, ಶೇಕಡಾ 50 ರಷ್ಟು ಸಿಬ್ಬಂದಿಗೆ ಮನೆಯಿಂದ ಕೆಲಸ ಕಡ್ಡಾಯವಾಗಿದೆ.

ಶಾಪಿಂಗ್ ಕಾಂಪ್ಲೆಕ್ಸ್​ಗಳು , ಜಿಮ್‌ಗಳು, ಸಿನೆಮಾ ಹಾಲ್‌ಗಳು, ಬ್ಯೂಟಿ ಪಾರ್ಲರ್‌ಗಳು ಇತ್ಯಾದಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದ್ದು, ಜ್ಯುವೆಲ್ಲರಿಗಳು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರಬಹುದು. ಮನೆಗಳಿಗೆ ಹೋಮ್ ಡೆಲಿವರಿ ಇರಲಿದೆ.

ಸಾಮಾಜಿಕ ಮತ್ತು ರಾಜಕೀಯ ಸಭೆ ಸಮಾರಂಭಗಳ ಮೇಲೆ ನಿಷೇಧ ಹೇರಲಾಗುವುದು . ಪ್ರಯಾಣಿಕರು ಪ್ರಯಾಣದ ವೇಳೆ ಆರ್​ಟಿ- ಪಿಸಿರ್ ನೆಗೆಟಿವ್ ವರದಿ ಒಯ್ಯುವುದು ಕಡ್ಡಾಯ. ಮೇ 7 ರಿಂದ, 72 ಗಂಟೆಗಳ ಅವಧಿಯಲ್ಲಿ ಪಡೆದಿರುವ ಆರ್ ಟಿ ಪಿಸಿ ಆರ್ ನೆಗೆಟಿವ್ ವರದಿ ಇಲ್ಲದೆ ಯಾರೂ ವಿಮಾನ ನಿಲ್ದಾಣಗಳಿಗೆ ಬರಲು ಅನುಮತಿಸುವುದಿಲ್ಲ ಕೊವಿಡ್ ಪಾಸಿಟಿವ್ ಇರುವವವರನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ಏರ್ಪಡಿಸಿರುವ 14 ದಿನಗಳ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.

ಅಂತರ ರಾಜ್ಯ ಬಸ್‌ಗಳಲ್ಲಿ ತಪಾಸಣೆ ಮಾಡಲಾಗುವುದು. ಅಂತಹ ಪ್ರಯಾಣಿಕರಿಗೆ 72 ಗಂಟೆಗಳ ಅವಧಿಯಲ್ಲಿ ಪಡೆದ ಆರ್​ಟಿ- ಪಿಸಿರ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಈ ತೀರ್ಪು ರೈಲು ಸೇವೆಗಳ ಪ್ರಯಾಣಿಕರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು. ಕೊವಿಡ್ ಲಸಿಕೆಯ ಮೊದಲ ಡೋಸ್ ನೀಡುವವರೆಗೆ ವ್ಯಾಪಾರಿಗಳು, ಸಾಗಣೆದಾರರು ಮತ್ತು ಪತ್ರಕರ್ತರಿಗೆ ಆದ್ಯತೆ ನೀಡಲಾಗುವುದು.

ಪಶ್ಚಿಮ ಬಂಗಾಳ ಸಿಎಂ ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಎಲ್ಲರಿಗೂ ಉಚಿತವಾಗಿ ಕೊವಿಡ್ 19 ಲಸಿಕೆಗಳನ್ನು ಕೋರಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಯ ಮಧ್ಯೆ ರೆಮ್‌ಡೆಸಿವಿರ್ ನಂತಹ ಅಗತ್ಯ ಔಷಧಿಗಳ ಸಮರ್ಪಕ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಅವರು ಪತ್ರದಲ್ಲಿ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದರು.

ಕೊವಿಡ್ ನಿರ್ವಹಣೆಯಲ್ಲಿ, ಸಾಕಷ್ಟು ಲಸಿಕೆಗಳು ಮತ್ತು ಆಮ್ಲಜನಕ ಪೂರೈಕೆ, ಆಸ್ಪತ್ರೆ ಹಾಸಿಗೆಗಳು, ಅಗತ್ಯ
ಔಷಧಗಳು ಮತ್ತು ಎಲ್ಲರಿಗೂ ಉಚಿತ ವ್ಯಾಕ್ಸಿನೇಷನ್ ನೀಡುವಂತೆ ನಾನು ವಿನಂತಿಸುತ್ತೇನೆ. ನಮಗೆ ಪ್ರತಿದಿನ ಕನಿಷ್ಠ 10,000 ಡೋಸ್ ರೆಮ್‌ಡೆಸಿವಿರ್ ಮತ್ತು 1,000 Tocilizumab ವಯಲ್ ಬೇಕಾಗುತ್ತವೆ ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ.

ಇದನ್ನೂ  ಓದಿ:  West Bengal Violence: ಎರಡು ದಿನಗಳಲ್ಲಿ 14 ಮಂದಿ ಸಾವು, ಹಿಂಸಾಚಾರದಿಂದ ದೂರವಿರಿ ಎಂದು ರಾಜಕೀಯ ಪಕ್ಷಗಳಿಗೆ ಮಮತಾ ಬ್ಯಾನರ್ಜಿ ಮನವಿ

Mamata Banerjee Swearing-in Ceremony: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಮತಾ ಬ್ಯಾನರ್ಜಿ

Published On - 5:28 pm, Wed, 5 May 21