West Bengal: ಪಶ್ಚಿಮ ಬಂಗಾಳ; ಇನ್​ಸ್ಟಾಗ್ರಾಂ ರೀಲ್ಸ್​ಗಾಗಿ ಐಫೋನ್ ಖರೀದಿಸಲು 8 ತಿಂಗಳ ಮಗುವನ್ನೇ ಮಾರಿದ ದಂಪತಿ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಯದೇವ್ ಘೋಷ್ ಮತ್ತು ಸತಿ ಎಂಬ ದಂಪತಿ ‘ಐಫೋನ್ 14’ ಖರೀದಿಸಲು ಎಂಟು ತಿಂಗಳ ಗಂಡು ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

West Bengal: ಪಶ್ಚಿಮ ಬಂಗಾಳ; ಇನ್​ಸ್ಟಾಗ್ರಾಂ ರೀಲ್ಸ್​ಗಾಗಿ ಐಫೋನ್ ಖರೀದಿಸಲು 8 ತಿಂಗಳ ಮಗುವನ್ನೇ ಮಾರಿದ ದಂಪತಿ
ಸಾಂದರ್ಭಿಕ ಚಿತ್ರ
Image Credit source: pixabay

Updated on: Jul 28, 2023 | 7:18 PM

ಕೋಲ್ಕತ್ತ: ಎಲ್ಲರೂ ಇನ್​​​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವುದನ್ನು ನೋಡಿದ್ದ ಆ ದಂಪತಿಗೆ ತಾವೂ ಹಾಗೆ ಮಾಡಬೇಕು ಎನಿಸಿತು. ಅದಕ್ಕಾಗಿ ‘ಐಫೋನ್ 14 (iPhone 14)’ ಕೊಂಡುಕೊಂಡರೆ ಒಳ್ಳೆಯದು ಎಂದುಕೊಂಡ ಆ ದಂಪತಿಗೆ ದುಬಾರಿ ಫೋನ್​ ಖರೀದಿಸಲು ಹಣ ಹೊಂದಿಸುವುದು ಹೇಗೆಂಬುದೇ ದೊಡ್ಡ ಸಮಸ್ಯೆಯಾಯಿತು. ಅದಕ್ಕೆ ಅವರು ಕಂಡುಕೊಂಡ ಪರಿಹಾರ ಏನು ಗೊತ್ತೇ? ತಮ್ಮ ಎಂಟು ತಿಂಗಳ ಮಗುವನ್ನೇ ಮಾರಾಟ ಮಾಡಿದ್ದು! ಹೌದು, ಇಂಥದ್ದೊಂದು ಘಟನೆ ಪಶ್ಚಿಮ ಬಂಗಾಳ(West Bengal) ಉತ್ತರ 24 ಪರಗಣ (North 24 Parganas) ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಯದೇವ್ ಘೋಷ್ ಮತ್ತು ಸತಿ ಎಂಬ ದಂಪತಿ ‘ಐಫೋನ್ 14’ ಖರೀದಿಸಲು ಎಂಟು ತಿಂಗಳ ಗಂಡು ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಈ ದಂಪತಿಗೆ ಏಳು ವರ್ಷದ ಮಗಳೊಬ್ಬಳು ಇದ್ದಾಳೆ ಎಂದೂ ವರದಿ ಉಲ್ಲೇಖಿಸಿದೆ.

ಅದೇ ಜಿಲ್ಲೆಯ ಖರ್ದಾಹ್ ನಿವಾಸಿ ಪ್ರಿಯಾಂಕಾ ಘೋಷ್ ಎಂಬಾಕೆಯಿಂದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಬಾಲಕನ ತಾಯಿ ಮತ್ತು ಹಣ ನೀಡಿದ ಎಂಎಸ್ ಘೋಷ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಂದೆ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಮಗುವಿನ ತಾಯಿ ವಿಚಾರಣೆಯ ವೇಳೆ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪತಿ ಹಾಗೂ ತಾನು ಇನ್​​ಸ್ಟಾಗ್ರಾಂಗೆ ರೀಲ್ಸ್​​​ ಮಾಡುವುದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲು ಬಯಸಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Delhi Crime: ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಸ್ನೇಹಿತನಿಂದ ವಿದ್ಯಾರ್ಥಿನಿ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ, ಸ್ಥಳದಲ್ಲೇ ಸಾವು

ಪಲೀಸ್ ಅಧಿಕಾರಿಗಳ ಪ್ರಕಾರ, ಜಯದೇವ್ ಘೋಷ್ ತನ್ನ ಮಗಳನ್ನು ಕೂಡ ಮಾರಾಟ ಮಾಡಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಗಂಡು ಮಗುವನ್ನು 2 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು. ದಂಪತಿಯು ಆ ಹಣದಲ್ಲಿ ದಿಘಾ ಬೀಚ್‌ನಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮೊಬೈಲ್ ಫೋನ್ ಸಹ ಖರೀದಿಸಿದ್ದಾರೆ ಎಂದು ದಂಪತಿಯ ನೆರೆಯವರಾದ ಲಕ್ಷ್ಮಿ ಕುಂದು ಎಂಬವರು ತಿಳಿಸಿರುವುದಾಗಿ ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:12 pm, Fri, 28 July 23