ಕೋಲ್ಕತ್ತ: ಪಶ್ಚಿಮ ಬಂಗಾಳ (West Bengal) ಶಿಕ್ಷಕರ ನೇಮಕಾತಿ ಹಗರಣಕ್ಕೆ (Teachers’ Tecruitment Scam) ಸಂಬಂಧಿಸಿ ತೃಣಮೂಲ ಕಾಂಗ್ರೆಸ್ (TMC) ಯುವ ನಾಯಕ ಕುಂತಲ್ ಘೋಷ್ (Kuntal Ghsoh) ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಬೆಳಿಗ್ಗೆ ಬಂಧಿಸಿದೆ. ಚಿನಾರ್ ಪಾರ್ಕ್‌ನಲ್ಲಿರುವ ಕುಂತಲ್ ಘೋಷ್ ಅವರ ಐಷಾರಾಮಿ ಫ್ಲ್ಯಾಟ್ಗೆ ಶುಕ್ರವಾರವೇ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಕುಂತಲ್ ಅವರನ್ನು ಸುದೀರ್ಘ ವಿಚಾರಣೆಗೂ ಒಳಪಡಿಸಿದ್ದರು. ವಿಚಾರಣೆಗೆ ಸಹಕರಿಸದ ಕಾರಣ ಅವರನ್ನು ಬಂಧಿಸಲಾಗಿದೆ. ಅಧಿಕಾರಿಗಳು ಹಲವು ದಾಖಲೆಗಳನ್ನೂ ವಶಪಡಿಸಿದ್ದಾರೆ. ಆದರೆ, ಯಾವುದೇ ಹಣ ಸಿಕ್ಕಿಲ್ಲ ಎಂದು ಇ.ಡಿ ಮೂಲಗಳು ತಿಳಿಸಿವೆ.
ಕುಂತಲ್ ಘೋಷ್ ಅವರು ಬಳಗಢ ಬ್ಲಾಕ್‌ನ ಶ್ರೀಪುರ ಬಳಗಾರ ಪಂಚಾಯತ್‌ನ ಧವಾಪರ ನಿವಾಸಿಯಾಗಿದ್ದಾರೆ. 2016ರಲ್ಲಿ ರಾಜಕೀಯ ಆರಂಭಿಸಿದ ಅವರು, ಕ್ರಮೇಣ ರಾಜಕೀಯದಲ್ಲಿ ಔನ್ನತ್ಯಕ್ಕೇರಿದರು. ರಾಜಕೀಯದ ಹೊರತಾಗಿ ಎನ್‌ಜಿಒ ಒಂದನ್ನೂ ಅವರು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
2014ರಿಂದ 2021ರ ಅವಧಿಯಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಸಂದರ್ಭ ಅಭ್ಯರ್ಥಿಗಳಿಂದ ಟಿಎಂಸಿ ನಾಯಕರು ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತು ಸಿಬಿಐ ಹಾಗೂ ಇ.ಡಿ ತನಿಖೆ ನಡೆಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನು ಈ ಹಿಂದೆಯೇ ಇ.ಡಿ ಬಂಧಿಸಿದ್ದು, ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: Big News: ಶಿಕ್ಷಕರ ನೇಮಕಾತಿ ಹಗರಣ: ಇಡಿ ಅಧಿಕಾರಿಗಳಿಂದ ಟಿಎಂಸಿ ಶಾಸಕ ಮಾಣಿಕ್ ಭಟ್ಟಾಚಾರ್ಯ ಬಂಧನ
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಳಿಸಿರುವ ಇ.ಡಿ ಶುಕ್ರವಾರ ಪಶ್ಚಿಮ ಬಂಗಾಳದ ಹಲವೆಡೆ ದಾಳಿ ನಡೆಸಿತ್ತು. ಕುಂತಲ್ ಘೋಷ್ ಫ್ಲ್ಯಾಟ್ ಮಾತ್ರವಲ್ಲದೆ ಇನ್ನೂ ಕೆಲವು ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ಟಿಎಂಸಿ ನಾಯಕ ಶಂತನು ಬ್ಯಾನರ್ಜಿ ಅವರ ಹೂಗ್ಲಿಯ ಬಲಗಢ್‌ನಲ್ಲಿರುವ ಮನೆ ಮೇಲೂ ಇ.ಡಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಶೋಧ ನಡೆಸಿದ್ದರು. ಶಿಕ್ಷಕರ ನೇಮಕಾತಿ ಅವ್ಯವಹಾರ ಪ್ರಕರಣದಲ್ಲಿ ಶಂತನು ಹೆಸರೂ ಕೇಳಿ ಬಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Sat, 21 January 23