Explainer | ಇನ್​ಸ್ಟಂಟ್​ ಲೋನ್​ ಕರ್ಮಕಾಂಡ: ಸ್ವಲ್ಪ ಯಾಮಾರಿದ್ರೂ ಕಿರುಕುಳ ಗ್ಯಾರಂಟಿ!

| Updated By: ಪೃಥ್ವಿಶಂಕರ

Updated on: Dec 26, 2020 | 6:54 AM

ಹೆಚ್ಚಿನ ಬಡ್ಡಿಯೊಂದಿಗೆ ನಿಮಗೆ ಸಾಲವೇನೋ ಸಿಗುತ್ತದೆ! ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. 5 ಸಾವಿರ ರೂಪಾಯಿ ಸಾಲ ಪಡೆದರೆ ಕಂಪೆನಿ ಪ್ರೊಸೆಸಿಂಗ್​ ಶುಲ್ಕ ಹಾಗೂ ಜಿಎಸ್​ಟಿ ಎಂದು 1,180 ರೂಪಾಯಿ ಕಟ್​ ಮಾಡಿಕೊಳ್ಳುತ್ತದೆ. ಹೀಗಾಗಿ, ಕೊನೆಗೆ ನಿಮ್ಮ ಖಾತೆಗೆ ಬೀಳೋದು ಕೇವಲ 3,820 ರೂಪಾಯಿ ಮಾತ್ರ!

Explainer | ಇನ್​ಸ್ಟಂಟ್​ ಲೋನ್​ ಕರ್ಮಕಾಂಡ: ಸ್ವಲ್ಪ ಯಾಮಾರಿದ್ರೂ ಕಿರುಕುಳ ಗ್ಯಾರಂಟಿ!
ಸಾಂದರ್ಭಿಕ ಚಿತ್ರ
Follow us on

ಬ್ಯಾಂಕ್​ನಲ್ಲಿ ಸಾಲ ಪಡೆಯೋದು ಈಗ ಮೊದಲಿನಷ್ಟು ಸುಲಭವಿಲ್ಲ. ಸೂಕ್ತ ದಾಖಲೆ ಇಲ್ಲದೆ ಬ್ಯಾಂಕ್​ನಲ್ಲಿ ನಿಮಗೆ ಒಂದು ರೂಪಾಯಿ ಸಾಲ ಕೂಡ ಸಿಗುವುದಿಲ್ಲ. ಒಂದೊಮ್ಮೆ ನಿಮಗೆ ಸಾಲ ಸಿಗುತ್ತದೆ ಎಂದಾದರೂ ಅದಕ್ಕೆ ಸ್ವಲ್ಪ ಸಮಯ ಕಾಯಲೇಬೇಕು. ಇದೇ ಕಾರಣಕ್ಕೆ ಸಾಕಷ್ಟು ಜನ ತಕ್ಷಣಕ್ಕೆ ಸಾಲ ನೀಡುವ ಆ್ಯಪ್​ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಈ ರೀತಿ ಇನ್​​ಸ್ಟಂಟ್​ ಸಾಲ ಪಡೆಯುವ ಮುನ್ನ ಕೊಂಚ ಎಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ, ಈ ರೀತಿ ಸಾಲ ಪಡೆದು ನೀವು ನಂತರ ಕಿರುಕುಳಕ್ಕೆ ತುತ್ತಾಗಬಹುದು! ಹೀಗೆ ಆ್ಯಪ್​ಗಳ ಮೂಲಕ ಸಾಲ ನೀಡಿ ಟಾರ್ಚರ್​ ನೀಡುತ್ತಿದ್ದ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಏನಿದು ಇನ್​ಸ್ಟಂಟ್​ ಸಾಲ ಪ್ರಕರಣ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಆತ್ಮಹತ್ಯೆಗೆ ಶರಣಾಗಿದ್ದ ಸಾಲಗಾರರು
ತೆಲಂಗಾಣ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಖಾಸಗಿ ಕಂಪೆನಿಯ ಟೆಕ್ಕಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಕಾರಣಕ್ಕೆ ಮಾಡಿಕೊಂಡ ಆತ್ಮಹತ್ಯೆ ಇರಬಹುದು ಎನ್ನಿಸಿದರೂ ಪೊಲೀಸರಿಗೆ ಆ ಬಗ್ಗೆ ಅನುಮಾನ ಇತ್ತು. ಅನುಮಾನದ ಬೆನ್ನು ಹತ್ತಿ ಹೋದಾಗ ಆತ್ಮಹತ್ಯೆಯ ನಿಜವಾದ ಕಾರಣ ಬಯಲಾಗಿತ್ತು. ಅವರಿಬ್ಬರೂ ಇನ್​​ಸ್ಟಂಟ್​ ಆ್ಯಪ್​ ಮೂಲಕ ಸಾಲ ಪಡೆದಿದ್ದರು. ಆದರೆ, ಸಾಲ ಪಡೆದ ನಂತರ ಅದನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಟಿಲಿ ಕಾಲರ್​ಗಳು ಹಾಗೂ ರಿಕವರಿ ಏಜೆಂಟ್​ಗಳು ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಅಷ್ಟೇ ಅಲ್ಲ ಅವರ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಸಾಲಗಾರರು ಎನ್ನುವ ಹಣೆಪಟ್ಟಿ ಹಚ್ಚಿದ್ದರು. ಇಷ್ಟಕ್ಕೇ ಟಾರ್ಚರ್ ನಿಲ್ಲಿಸದೇ,  ಸಾಲಗಾರರು ಹಾಗೂ ಅವರ ಕುಟುಂಬದವರಿಗೆ ಅಶ್ಲೀಲ ಶಬ್ದಗಳಲ್ಲಿ ಬೈದಿದ್ದರು. ಇದರಿಂದಾಗಿ ಸಾಲಪಡೆದವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದರು.

ಇನ್​ಸ್ಟಂಟ್​ ಲೋನ್​​​ ಆ್ಯಪ್​ ಕೇಸ್​ ಏನು?
ಅನಧಿಕೃತ ಸಾಲದಾತರು ಅತಿಯಾದ ಬಡ್ಡಿದರದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ತ್ವರಿತವಾಗಿ ವೈಯಕ್ತಿಕ ಸಾಲಗಳನ್ನು ನೀಡುತ್ತಾರೆ. ಗೂಗಲ್​ ಪ್ಲೇಸ್ಟೋರ್​ನಲ್ಲಿ ಈ ಆ್ಯಪ್​ಗಳು ಲಭ್ಯ ಇವೆ. ಆದರೆ, ಇವರಿಗೂ ಬ್ಯಾಂಕ್​ಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಮೂರು ತಿಂಗಳ ಬ್ಯಾಂಕ್​ ಸ್ಟೇಟ್​ಮೆಂಟ್​, ನಿಮ್ಮ ವೈಯಕ್ತಿಕ ಮಾಹಿತಿ, ಆಧಾರ್​ ಕಾರ್ಡ್​ ಕಾಪಿ ಹಾಗೂ ಪಾನ್​ ಕಾರ್ಡ್​ ಕಾಪಿಯನ್ನು ಆ್ಯಪ್​ನಲ್ಲಿ ಅಪ್​ಲೋಡ್​ ಮಾಡಬೇಕು. ಇದಾದ ನಂತರ ತಕ್ಷಣಕ್ಕೆ ₹1,000 ದಿಂದ ₹50 ಸಾವಿರ ತನಕ ನಿಮಗೆ ಸಾಲ ಸಿಗುತ್ತದೆ. ಅದೂ ಕಣ್ಮುಚ್ಚಿ ಬಿಡುವುದರೊಳಗೆ. ಇಲ್ಲಿರುವ ಏಕೈಕ ಷರತ್ತು ಅಂದರೆ ಏಳು ದಿನಗಳಲ್ಲಿ ನೀವು ಸಾಲ ಹಿಂದಿರುಗಿಸಲೇಬೇಕು!

ಹೆಚ್ಚಿನ ಬಡ್ಡಿಯೊಂದಿಗೆ ನಿಮಗೆ ಸಾಲವೇನೋ ಸಿಗುತ್ತದೆ! ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. 5 ಸಾವಿರ ರೂಪಾಯಿ ಸಾಲ ಪಡೆದರೆ ಕಂಪೆನಿ ಪ್ರೊಸೆಸಿಂಗ್​ ಶುಲ್ಕ ಹಾಗೂ ಜಿಎಸ್​ಟಿ ಎಂದು 1,180 ರೂಪಾಯಿ ಕಟ್​ ಮಾಡಿಕೊಳ್ಳುತ್ತದೆ. ಹೀಗಾಗಿ, ಕೊನೆಗೆ ನಿಮ್ಮ ಖಾತೆಗೆ ಬೀಳೋದು ಕೇವಲ 3,820 ರೂಪಾಯಿ ಮಾತ್ರ!

ಸಾಲ ಪಡೆದ ನಂತರ ನೀವು ಅದನ್ನು ವಾಪಾಸು ಮಾಡದಿದ್ದರೆ, ಕಾಲ್​ ಸೆಂಟರ್​ನಿಂದ ನಿಮಗೆ ಕರೆ ಬರಲಿದೆ. ಒಂದೊಮ್ಮೆ ನೀವು ನಂಬರ್​ ಬದಲಿಸಿ ಹೊಸ ನಂಬರ್​ ಪಡೆದರೂ ಅವರು ನಿಮ್ಮನ್ನು ಟ್ರ್ಯಾಕ್​ ಮಾಡಿ ಬಿಡುತ್ತಾರೆ. ಕೊನೆಗೆ ನೀವು ಟ್ರ್ಯಾಪ್​ನಲ್ಲಿ ಸಿಕ್ಕಿ ಬಿದ್ದಂತೆಯೇ.

ಈ ಆ್ಯಪ್​ಗಳು ಯಾವುವು? ಇವುಗಳನ್ನು ನಡೆಸೋರು ಯಾರು?
ಈ ರೀತಿ ಇನ್​ಸ್ಟಂಟ್​ ಸಾಲ ನೀಡುವ ಸುಮಾರು 30 ಆ್ಯಪ್​ಗಳನ್ನು ತೆಲಂಗಾಣ ಪೊಲೀಸರು ಗುರುತಿಸಿದ್ದಾರೆ. ಕ್ಯಾಶ್​ ಮಾಮಾ, ಲೋನ್​ ಜೋನ್​, ಧನ ಧನ ಲೋನ್​, ಕ್ಯಾಶ್​ ಅಪ್, ಕ್ಯಾಶ್​ ಬಸ್​, ಮೆರಾ ಲೋನ್​, ಹೇ ಫಿಶ್​, ಮಂಕಿ ಕ್ಯಾಶ್​, ಕ್ಯಾಶ್​ ಎಲಿಫಂಟ್​, ವಾಟರ್​ ಎಲಿಫಂಟ್​, ಕ್ವಿಕ್​ ಕ್ಯಾಶ್​, ಕಿಶತ್​, ಲೋನ್​ ಕ್ಲೌಡ್, ಇನ್​ಸ್ಟಾ ರುಪೀ ಲೋನ್​, ಫ್ಲಾಶ್​ ರುಪೋಸ್​ ಕ್ಯಾಶ್​ ಲೋನ್​, ಮಾಸ್ಟರ್​ ಮೆಲನ್​ ಕ್ಯಾಶ್​ಟ್ರೈನ್​, ಗೆಟ್​ ರುಪೀ, ಇಬೆ ಲೋನ್​, ಪಂಡಾ ಐ ಕ್ರೆಡಿಟ್​, ಈಸಿ ಲೋನ್​, ರುಪೀ ಕ್ಲಿಕ್​, ಒಕ್ಯಾಶ್​, ಕ್ಯಾಶ್​ಮ್ಯಾಪ್​, ಸ್ನಾಪಿಟ್​, ರಾಪಿಡ್​ ರುಪೀ, ರೆಡಿ ಕ್ಯಾಶ್​, ಲೋನ್​ ಬಜಾರ್, ಲೋನ್​ಬ್ರೊಮ ಕ್ಯಾಶ್​ ಪೋಸ್ಟ್, ರುಪೀಗೋ, ಕ್ಯಾಶ್​ ಪೋರ್ಟ್​, ಆರ್​ಎಸ್​ ರಶ್​, ಪ್ರೋ ಫಾರ್ಚೂನ್​ ಬ್ಯಾಗ್​, ರೋಬೋ ಕ್ಯಾಶ್​, ಕ್ಯಾಶ್​ಟಿಎಂ, ಉಧಾರ್​ ಲೋನ್​, ಕ್ರೆಡಿಟ್​ ಫ್ರೀ ಹೆಸರಿನ ಆ್ಯಪ್​ಗಳು ಇನ್​ಸ್ಟಂಟ್​ ಸಾಲ ನೀಡುತ್ತಿದ್ದವು.

ಆನಿಯನ್​ ಕ್ರೆಡಿಟ್​ ಮತ್ತು ಕ್ರೆಡ್​ ಬಾಕ್ಸ್​ ಟೆಕ್ನಾಲಜಿ ಸಂಸ್ಥೆಗಳು ಕ್ಯಾಶ್​ ಮಾಮಾ, ಲೋನ್​ ಜೋನ್​, ಧನ ಧನ ಲೋನ್​, ಕ್ಯಾಶ್​ ಅಪ್, ಕ್ಯಾಶ್​ ಬಸ್​, ಮೆರಾ ಲೋನ್​ ಮತ್ತು ಕ್ಯಾಶ್ ಜೋನ್​ ನಡೆಸುತ್ತಿದ್ದರು. ಕೆ.ಶರತ್​ ಚಂದ್ರ ಇದರ ಮುಖ್ಯಸ್ಥ ಹಾಗೂ ಪುಷ್ಪಲತಾ ಎಂಬಾಕೆ ಇದರ ನಿರ್ದೇಶಕಿ. ಸದ್ಯ ತೆಲಂಗಾಣ ಪೊಲೀಸರು ಈ ಆ್ಯಪ್​ಗಳ ಮೇಲೆ ದಾಳಿ ನಡೆಸಿದ್ದಾರೆ.

ಫಟಾಫಟ್​ ಸಾಲಕ್ಕೆ ಶೇ.35ರಷ್ಟು ಬಡ್ಡಿ!
ಆ್ಯಪ್​ ಡೌನ್​ಲೋಡ್ ಮಾಡಿಕೊಂಡ ನಂತರ ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಲ್ಲದೇ, ನಿಮ್ಮ ಕುಟುಂಬದ ಮಾಹಿತಿ ಮತ್ತು ಅವರ ಮೊಬೈಲ್ ಸಂಖ್ಯೆ ನೀಡೋದು ಕೂಡ ಇಲ್ಲಿ ಕಡ್ಡಾಯ. ಮೊದಲ ಬಾರಿ ಸಾಲ ಪಡೆದುಕೊಂಡು ಅದನ್ನು ಹಿಂದಿರುಗಿಸಿದ ನಂತರ ನಿಮಗೆ ಕಸ್ಟಮರ್​ ಕೇರ್​ನಿಂದ ಕಾಲ್​ ಬರುತ್ತದೆ. ಇದೇ ರೀತಿ ಸಾಲ ನೀಡುವ ಸಾಕಷ್ಟು ಆ್ಯಪ್​ಗಳ ಬಗ್ಗೆ ನಿಮಗೆ ಅವರು ಮಾಹಿತಿ ನೀಡುತ್ತಾರೆ. ಅಷ್ಟೇ ಅಲ್ಲ, ನೀವು ಹೆಚ್ಚಿನ ಸಾಲ ಪಡೆಯಲು ಅರ್ಹರು ಎಂದು ಬೆಣ್ಣೆ ಹಚ್ಚುತ್ತಾರೆ. ಸುಲಭವಾಗಿ ಸಾಲ ಸಿಗುವ ಆಸೆಗೆ ಬಿದ್ದು ನೀವು 50 ಸಾವಿರ ರೂಪಾಯಿ ಲೋನ್​ ಪಡೆದಿರಿ ಎಂದಿಟ್ಟುಕೊಳ್ಳಿ. ನಿಮ್ಮ ಕತೆ ಮುಗಿದಂತೆ. ಏಕೆಂದರೆ ಈ ಆ್ಯಪ್​ಗಳಲ್ಲಿ ₹50 ಸಾವಿರ ಸಾಲಕ್ಕೆ ಶೇ. 35 ಬಡ್ಡಿದರ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಹಣ ಹಿಂದಿರುಗಿಸಲು ವಿಫಲರಾದರೆ ದಿನಕ್ಕೆ 3 ಸಾವಿರ ರೂಪಾಯಿಯಂತೆ ದಂಡವನ್ನೂ ಕಟ್ಟಬೇಕಾಗುತ್ತದೆ.

ಇಲಿ ಕತ್ತರಿಯಲ್ಲಿ ಸಿಕ್ಕಂತಾಗುತ್ತದೆ ಸಾಲಗಾರರ ಬಾಳು 
ನೀವು ಸಾಲ ಪಡೆದು 7 ದಿನದಲ್ಲಿ ವಾಪಾಸ್​ ಮಾಡಿಲ್ಲ ಎಂದರೆ ನಿಮಗೆ ಕಸ್ಟಮರ್​ ಕೇರ್​ನಿಂದ ಕಾಲ್​ ಬರುತ್ತದೆ. ಸಾಲ ನೀಡುವಾಗ ಮಧುರ ಧ್ವನಿಯಲ್ಲಿ ಮಾತನಾಡಿಸಿದವರೇ ಈಗ ನಿಮಗೆ ಧಮ್ಕಿ ಹಾಕುತ್ತಾರೆ. ಬ್ಲಾಕ್​ ಮೇಲ್​ ಮಾಡುತ್ತಾರೆ. ಹಣ ಹಿಂದಿರುಗಿಸದಿದ್ದರೆ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಕಿರುಕುಳ ನೀಡುತ್ತಾರೆ! ಅಲ್ಲಿಗೆ ಸಾಲ ಪಡೆದವನ ಎದೆಯಲ್ಲಿ ಢವಢವ ಶುರುವಾಗುತ್ತದೆ.

ಇಲ್ಲಿ ಮೂರು ವಿಧಗಳಲ್ಲಿ ಸಾಲಗಾರರನ್ನು ವಿಂಗಡನೆ ಮಾಡಲಾಗುತ್ತದೆ. ಅವಧಿ ಮುಗಿದ 1-3 ದಿನಗಳವರೆಗೆ ಸಾಲ ಹಿಂದಿರುಗಿಸದಿದ್ದರೆ ಅವರನ್ನು ಎಸ್​1 ಸಾಲಿಗೆ, 4-10 ದಿನಗಳವರೆಗೆ ಸಾಲ ಹಿಂದಿರುಗಿಸದಿದ್ದರೆ ಎಸ್​​2, ಹಾಗೂ 10-30 ದಿನಗಳವರೆಗೆ ಸಾಲ ಹಿಂದಿರುಗಿಸದಿದ್ದರೆ ಎಸ್​3 ಬಕೆಟ್​ ಸಾಲಿಗೆ ಸೇರಿಸಲಾಗುತ್ತದೆ. ನೀವು ಯಾವ ಸಾಲಿನಲ್ಲಿದ್ದೀರಾ ಎನ್ನುವುದನ್ನು ಆಧರಿಸಿ ನಿಮಗೆ ನೀಡಬೇಕಾದ ಕಿರುಕುಳದ ಹಂತ ನಿರ್ಧಾರವಾಗುತ್ತದೆ.

ಆ್ಯಪ್​ ಮೂಲಕ ನೀಡುತ್ತಿದ್ದ ಸಾಲಕ್ಕೆ ಶೇ 35 ಬಡ್ಡಿ! ರೈಡ್​ ವೇಳೆ ಹೊರಬಿತ್ತು ಭಯಾನಕ ಸತ್ಯ

ಮೈಕ್ರೊ ಫೈನಾನ್ಸ್​ ಕಂಪನಿಗಳ ಮೇಲೆ ಸಿಐಡಿ ದಾಳಿ: ಆರ್​ಬಿಐ ನಿಯಮ ಉಲ್ಲಂಘನೆ ಆರೋಪ