ಕೇಂದ್ರ ಸರ್ಕಾರ ನನ್ನ ಹೃದಯ ಗೆದ್ದಿದೆ: ಮೋದಿಯನ್ನು ಹೊಗಳಿದ ಜಯಂತ್ ಚೌಧರಿ

ಮಾಧ್ಯಮಗಳೊಂದಿಗೆ ಮಾತನಾಡಿದ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ,ಹಿಂದಿನ ಸರ್ಕಾರಗಳು ಇಂದಿನವರೆಗೂ ಏನು ಮಾಡಲು ಸಾಧ್ಯವಾಗಲಿಲ್ಲವೋ ಅದು ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಪೂರ್ಣಗೊಂಡಿದೆ. ಮುಖ್ಯವಾಹಿನಿಯ ಭಾಗವಾಗಿರದ ಜನರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಪ್ರಧಾನಿ ಮೋದಿಯವರ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ

ಕೇಂದ್ರ ಸರ್ಕಾರ ನನ್ನ ಹೃದಯ ಗೆದ್ದಿದೆ: ಮೋದಿಯನ್ನು ಹೊಗಳಿದ ಜಯಂತ್ ಚೌಧರಿ
ಜಯಂತ್ ಚೌಧರಿ

Updated on: Feb 09, 2024 | 4:30 PM

ದೆಹಲಿ ಫೆಬ್ರುವರಿ 09: ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ (Jayant Chaudhary) ಅವರು ಶುಕ್ರವಾರ ತಮ್ಮ ಅಜ್ಜ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ( Chaudhary Charan Singh) ಅವರಿಗೆ ಭಾರತ ರತ್ನ ಘೋಷಿಸಿದ್ದರಿಂದ ಕೇಂದ್ರ ಸರ್ಕಾರ ತನ್ನ ಹೃದಯವನ್ನು ಗೆದ್ದಿದೆ ಎಂದು ಹೇಳಿದ್ದಾರೆ. ಖ್ಯಾತ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್, ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.

“ಹಿಂದಿನ ಸರ್ಕಾರಗಳು ಇಂದಿನವರೆಗೂ ಏನು ಮಾಡಲು ಸಾಧ್ಯವಾಗಲಿಲ್ಲವೋ ಅದು ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಪೂರ್ಣಗೊಂಡಿದೆ. ಮುಖ್ಯವಾಹಿನಿಯ ಭಾಗವಾಗಿರದ ಜನರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಪ್ರಧಾನಿ ಮೋದಿಯವರ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ” ಎಂದು ಆರ್‌ಎಲ್‌ಡಿ ಮುಖ್ಯಸ್ಥರು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ.
ನೀವು ಬಿಜೆಪಿ-ಎನ್‌ಡಿಎ ಜೊತೆ ಕೈಜೋಡಿಸಲು ಸಿದ್ಧರಿದ್ದೀರಾ ಎಂದು ಕೇಳಿದಾಗ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, “ಕೋಯಿ ಕಸರ್ ರೆಹತಿ ಹೈ? ಆಜ್ ಮೈನ್ ಕಿಸ್ ಮುಹ್ ಸೆ ಇನ್ಕಾರ್ ಕರೂನ್ ಆಪ್ಕೆ ಸವಲೋನ್ ಕೋ (ಯಾವುದಾದರೂ ಸಂದೇಹವಿದೆಯೇ? ಇಂದು ನಾನು ನಿಮ್ಮ ಪ್ರಶ್ನೆಯನ್ನು ಹೇಗೆ ನಿರಾಕರಿಸಲು ಸಾಧ್ಯ?) ಎಂದು ಕೇಳಿದ್ದಾರೆ.

ಎನ್‌ಡಿಎ ಸೇರಲಿದೆಯೇ ಆರ್‌ಎಲ್‌ಡಿ?

ಜಯಂತ್ ಚೌಧರಿ ಅವರು ಸಮಾಜವಾದಿ ಪಕ್ಷದ ಮೈತ್ರಿಯನ್ನು ತೊರೆದು ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂಬ ಬಲವಾದ ಊಹಾಪೋಹಗಳ ನಡುವೆ ಇದು ಬಂದಿದೆ. ಬಿಜೆಪಿ ಮತ್ತು ಆರ್‌ಎಲ್‌ಡಿ ನಡುವಿನ ಸಂಭವನೀಯ ಮೈತ್ರಿ ಕುರಿತು ಪ್ರಶ್ನಿಸಿದಾಗ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಗುರುವಾರ, ಪಕ್ಷಗಳನ್ನು ಹೇಗೆ ಒಡೆಯಬೇಕು ಮತ್ತು ಯಾವಾಗ ಯಾರನ್ನು ಸೆಳೆಯಬೇಕು ಎಂಬುದು ಬಿಜೆಪಿಗೆ ತಿಳಿದಿದೆ ಎಂದು ಹೇಳಿದರು. ಆಡಳಿತ ಪಕ್ಷವು ಇಡಿ, ಸಿಬಿಐ ಮತ್ತು ಆದಾಯ ತೆರಿಗೆಯಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಯಾರನ್ನು ಯಾವಾಗ ತೆಗೆದುಕೊಳ್ಳಬೇಕು ಎಂಬುದು ಬಿಜೆಪಿಗೆ ಗೊತ್ತಿದೆ, ಹೇಗೆ ಮೋಸ ಮಾಡಬೇಕೆಂಬುದು ಅವರಿಗೂ ಗೊತ್ತು. ಚಂಡೀಗಢದಲ್ಲಿ ಏನು ಹೇಗೆ ನಡೆದಿದೆ ಎಂಬುದನ್ನು ನೀವು ನೋಡಿದ್ದೀರಿ. ಯಾರನ್ನು ಯಾವಾಗ ಖರೀದಿಸಬೇಕು ಎಂಬುದು ಬಿಜೆಪಿಗೂ ಗೊತ್ತಿದೆ. ಅದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಸುಮ್ಮನೇ ಅಲ್ಲ ಯಾವಾಗ ಮತ್ತು ಏನು ಮಾಡಬೇಕು ಎಂಬುದು ಬಿಜೆಪಿಗೆ ಗೊತ್ತಿದೆ. ಇಡಿ ಮತ್ತು ಸಿಬಿಐ ಅನ್ನು ಯಾವಾಗ ಮತ್ತು ಎಲ್ಲಿಗೆ ಕಳುಹಿಸಬೇಕು ಮತ್ತು ಆದಾಯ ತೆರಿಗೆ ದಾಳಿಗಳನ್ನು ನಡೆಸಬೇಕು ಮತ್ತು ಯಾವ ಪತ್ರಕರ್ತನನ್ನು ಯಾವಾಗ ಮೌನಗೊಳಿಸಬೇಕು ಎಂದು ಅದಕ್ಕೆ ತಿಳಿದಿದೆ. ಪಕ್ಷಗಳನ್ನು ಒಡೆಯುವುದು ಬಿಜೆಪಿಗೆ ಗೊತ್ತಿದೆ ಎಂದಿದ್ದಾರೆ ಅಖಿಲೇಶ್.

ಇದನ್ನೂ ಓದಿ:ನರಸಿಂಹ ರಾವ್ ಸೇರಿ ಮೂವರಿಗೆ ಭಾರತ ರತ್ನ; ನಾನಿದನ್ನು ಸ್ವಾಗತಿಸುತ್ತೇನೆ: ಸೋನಿಯಾ ಗಾಂಧಿ

ಆರ್‌ಎಲ್‌ಡಿ ಮತ್ತು ಬಿಜೆಪಿ ನಡುವೆ ವರದಿಯಾಗಿರುವ ನಿಕಟ ಸಂಬಂಧದ ಬಗ್ಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರನ್ನು ಕೇಳಿದಾಗ, “ರಾಜಕೀಯದಲ್ಲಿ ಯಾವಾಗಲೂ ಸಾಧ್ಯತೆಗಳಿವೆ. ಬಿಜೆಪಿ ಭಾರತ ಮಾತೆಯ ಕಡೆಗೆ ಸಮರ್ಪಣಾಭಾವದಿಂದ ಕೆಲಸ ಮಾಡುವ ಪಕ್ಷವಾಗಿದೆ. ಉತ್ತರ ಪ್ರದೇಶ ಜನರ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ. ನಾವು ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ