
ನವದೆಹಲಿ, ಅಕ್ಟೋಬರ್ 27: ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮತ್ತು ಚಿಲ್ಲರೆ ವ್ಯಾಪಾರಿಗಳು ಖರೀದಿಸುವ ದರದ ನಡುವೆ ಇರುವ ಭಾರಿ ವ್ಯತ್ಯಾಸವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, “ಇಡೀ ವ್ಯವಸ್ಥೆಯು ಔಷಧ ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡಲು ಏಕೆ ಕೆಲಸ ಮಾಡುತ್ತಿದೆ?” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ದೇಶದಲ್ಲಿ ಔಷಧಗಳ ಬೆಲೆ ನಿಗದಿ ಕುರಿತ ಅರ್ಜಿಗಳ ವಿಚಾರಣೆ ನಡೆಸಿ, ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.
ಸರ್ಕಾರದ ಕಣ್ಣೆದುರೇ ಅಕ್ರಮ:
“ಸರ್ಕಾರವೇ ಇದಕ್ಕೆ ಆಸ್ಪದ ನೀಡುತ್ತಿದೆ. ಸರ್ಕಾರದ ಕಣ್ಣೆದುರಲ್ಲೇ ಈ ಭಾರಿ ಲಾಭಾಂಶದ ದಂದೆ ನಡೆಯುತ್ತಿದೆ. ಇದನ್ನು ಯಾವುದೇ ನಿಯಂತ್ರಣವಿಲ್ಲದೆ ಹೀಗೆಯೇ ಮುಂದುವರಿಯಲು ಬಿಡಬೇಕೇ?” ಎಂದು ಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಭಾರತ ದೇಶದಲ್ಲಿ ಔಷಧಗಳ ಬೆಲೆಯನ್ನು ನಿಯಂತ್ರಿಸಬೇಕಾದ ‘ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ’ವು (NPPA) ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿರುವ ಸಂಸ್ಥೆಯಂತೆ ಕಾಣಿಸುತ್ತಿದೆ ಎಂದು ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಇದನ್ನೂ ಓದಿ: ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ಆರೋಪ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್
ಕೇಂದ್ರ ಸರ್ಕಾರದ ವಾದ ಮತ್ತು ಸಮರ್ಥನೆ:
ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, “ಇಡೀ ಔಷಧೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರದಿರುವುದೇ ಸರ್ಕಾರದ ನಿಯಮಾವಳಿಯಾಗಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿ ಔಷಧಗಳ ಬೆಲೆ ಅತ್ಯಂತ ಕಡಿಮೆಯಾಗಿದೆ” ಎಂದು ವಾದಿಸಿದರು.
ಇದನ್ನೂ ಓದಿ: ವಿಪಕ್ಷದ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ; ಎಸ್‌ಐಆರ್ ಪರ ಸುಪ್ರೀಂ ಕೋರ್ಟ್ನಲ್ಲಿ ಸರ್ವಾನುಮತದ ಸಮರ್ಥನೆ
ಕ್ಯಾನ್ಸರ್ ಔಷಧಗಳ ಬೆಲೆ ಮಿತಿ ಉಲ್ಲೇಖ:
ಇದೇ ವಿಚಾರಣೆಯ ಸಂದರ್ಭದಲ್ಲಿ ಅಕ್ಟೋಬರ್ 12ರಂದು ನಡೆದ ವಿಚಾರಣೆಯನ್ನು ಉಲ್ಲೇಖಿಸಿದ ಕೋರ್ಟ್, ಕ್ಯಾನ್ಸರ್ ನಿರೋಧಕ ಔಷಧಗಳ ವ್ಯಾಪಾರ ಲಾಭಾಂಶವನ್ನು ಶೇ. 30ಕ್ಕೆ ಮಿತಿಗೊಳಿಸಿರುವುದಾಗಿ ಸರ್ಕಾರ ಹೇಳಿರುವುದು ಸಂತಸಪಡುವ ವಿಷಯವೇನಲ್ಲ. ಕ್ಯಾನ್ಸರ್ ಔಷಧಗಳಂತೆ ಇತರ ಅಗತ್ಯ ಹಾಗೂ ಜೀವ ರಕ್ಷಕ ಔಷಧಗಳ ವ್ಯಾಪಾರ ಲಾಭಾಂಶಕ್ಕೂ ಸರ್ಕಾರ ಏಕೆ ಮಿತಿ ವಿಧಿಸುತ್ತಿಲ್ಲ? ಎಂದು ಪ್ರಶ್ನಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ