ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ಅರ್ಜಿಗಳ ಮುಂದಿನ ವಿಚಾರಣೆ ನ. 17ಕ್ಕೆ ಮುಂದೂಡಿಕೆ; ಆಯೋಗದ ಅಫಿಡವಿಟ್‌ಗೆ ಪ್ರತ್ಯುತ್ತರ ನೀಡಲು 10 ದಿನ ಕಾಲಾವಕಾಶ
ಭಾರೀ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ 'ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ' (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಈ ಸುದೀರ್ಘ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ನಿಗದಿಪಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಸಲ್ಲಿಸಿದ ಪ್ರತ್ಯುತ್ತರದ ಅಫಿಡವಿಟ್ ಅನ್ನು ದಾಖಲಿಸಿಕೊಂಡ ನ್ಯಾಯಪೀಠವು, ವಿಚಾರಣೆಯನ್ನು ನವೆಂಬರ್ ಮಧ್ಯಭಾಗಕ್ಕೆ ನಿಗದಿಪಡಿಸಿತು.

ನವದೆಹಲಿ, ಅಕ್ಟೋಬರ್ 27: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ವಿವಾದದಲ್ಲಿ, ಭಾರತೀಯ ಚುನಾವಣಾ ಆಯೋಗದ ಆಂತರಿಕ ಕಡತಗಳು, ಟಿಪ್ಪಣಿಗಳು ಮತ್ತು ಪತ್ರವ್ಯವಹಾರಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡಲು ತಕ್ಷಣದ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಆದರೆ, ಎಲ್ಲಾ ದಾಖಲೆಗಳನ್ನು ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಅರ್ಜಿದಾರರಿಗೆ ಭರವಸೆ ನೀಡಿದೆ. ಹಾಗೇ, ಎಸ್‌ಐಆರ್ ಕುರಿತ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ಹಾಗೇ, ಎಸ್‌ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ಸಲ್ಲಿಸಿರುವ ಪ್ರತ್ಯುತ್ತರ ಅಫಿಡವಿಟ್‌ಗೆ ಸವಿಸ್ತಾರ ಪ್ರತ್ಯುತ್ತರ ಸಲ್ಲಿಸಲು ರಾಹುಲ್ ಗಾಂಧಿ ಸೇರಿದಂತೆ ‘ಇಂಡಿಯಾ’ ಕೂಟದ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ 10 ದಿನಗಳ ಕಾಲಾವಕಾಶ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಚುನಾವಣಾ ಆಯೋಗದ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿ, ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ದಸರಾ ರಜಾದಿನಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ಚುನಾವಣಾ ಆಯೋಗವು, ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಮೂರು ಆದೇಶಗಳನ್ನು ಮೂವರೂ ಚುನಾವಣಾ ಆಯುಕ್ತರು ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: ಎಸ್‌ಐಆರ್: ಅಂತಿಮ ಮತದಾರರ ಪಟ್ಟಿ ಇಂದು ಪ್ರಕಟ, ಹೆಸರು ಇಲ್ಲದಿದ್ರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಮತದಾರರ ನೋಂದಣಿಯ ‘ಫಾರ್ಮ್ 6’ ರಲ್ಲಿ ಯಾವುದೇ ತಿದ್ದುಪಡಿ ಮಾಡಿಲ್ಲ ಮತ್ತು ಅರ್ಹ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ತೆಗೆದುಹಾಕಲಾಗಿಲ್ಲ. ಬದಲಾಗಿ ‘ಗೈರುಹಾಜರಿ, ಸ್ಥಳಾಂತರಗೊಂಡ, ಮೃತರಾದ ಮತ್ತು ನಕಲಿ’ (ASDD) ವರ್ಗದಡಿ ಪರಿಶೀಲಿಸಿ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ನ್ಯಾಯಪೀಠಕ್ಕೆ ವಿವರಣೆ ನೀಡಿತ್ತು.
ಚುನಾವಣಾ ಆಯೋಗದ ಅಫಿಡವಿಟ್‌ಗೆ ಪ್ರತ್ಯುತ್ತರ ನೀಡಲು ಮತ್ತು ವಿವರವಾದ ವಾದ-ಪ್ರತಿವಾದ ಮಂಡಿಸಲು ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ಕಡತಗಳ ಸಂರಕ್ಷಣೆಗೆ ಅರ್ಜಿದಾರರ ಪಟ್ಟು:
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಮೇನಕಾ ಗುರುಸ್ವಾಮಿ, “ಆಯೋಗದ ನಿರ್ಧಾರಗಳು ಸರ್ವಾನುಮತದ್ದೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲು ಆಯೋಗದ ಎಲ್ಲಾ ಆಂತರಿಕ ಕಡತಗಳು ಮತ್ತು ಟಿಪ್ಪಣಿಗಳನ್ನು ಸಂರಕ್ಷಿಸಿಡಲು ಆದೇಶಿಸಬೇಕು” ಎಂದು ಪೀಠವನ್ನು ಕೋರಿದರು.
ಇದನ್ನೂ ಓದಿ: ಎಸ್‌ಐಆರ್‌ಗೆ ಯಾವ ಸಾಫ್ಟ್‌ವೇರ್ ಬಳಕೆ? ಎಂಬ ಪ್ರಶ್ನೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ನೀಡಲು ಚುನಾವಣಾ ಆಯೋಗ ನಿರಾಕರಣೆ
ಆದರೆ, ಆಯೋಗದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಮನಿಂದರ್ ಸಿಂಗ್ ಈ ಮನವಿಯನ್ನು ತೀವ್ರವಾಗಿ ವಿರೋಧಿಸಿದರು. “ನಾವು ಸಂವಿಧಾನಾತ್ಮಕ ಸಂಸ್ಥೆಯೊಂದರ ಕುರಿತು ಮಾತನಾಡುತ್ತಿದ್ದೇವೆ. ಇಂತಹ ಶಂಕೆ ವ್ಯಕ್ತಪಡಿಸಿ ಆದೇಶ ಕೋರುವುದು ಸೂಕ್ತವಲ್ಲ” ಎಂದು ಮೆಹ್ತಾ ವಾದಿಸಿದರು.
ಅರ್ಜಿದಾರರು ಇದೊಂದು ಸಾಮಾನ್ಯ ಮಧ್ಯಂತರ ಆದೇಶವೆಂದು ಹೇಳಿದಾಗ, ನ್ಯಾಯಪೀಠವು “ನಮಗೆ ಎಲ್ಲವೂ ತಿಳಿದಿದೆ, ಯಾವುದಕ್ಕೂ ಚಿಂತಿಸಬೇಡಿ. ನಾವು ದಾಖಲೆಗಳನ್ನು ಪರಿಶೀಲಿಸುತ್ತೇವೆ” ಎಂದು ಭರವಸೆ ನೀಡಿತಾದರೂ, ಯಾವುದೇ ಲಿಖಿತ ಸಂರಕ್ಷಣಾ ಆದೇಶ ಹೊರಡಿಸಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




