ಭೋಪಾಲ್: 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಬಲ್ಲಳು. ಹೀಗಿರುವಾಗ ಮದುವೆ ವಯಸ್ಸಿನ ಮಿತಿ ಏರಿಕೆ ಯಾಕೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಸಜ್ಜನ್ ಸಿಂಗ್ ವರ್ಮಾ ಪ್ರಶ್ನಿಸಿದ್ದಾರೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಸೋಮವಾರ ನಡೆದ ‘ನಾರಿ ಸಮ್ಮಾನ್’ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ವಿವಾಹ ವಯಸ್ಸು 18ರಿಂದ 21ಕ್ಕೆ ಏರಿಸಬೇಕು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವರ್ಮಾ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಲು ಶಕ್ತಳಾಗಿರುತ್ತಾಳೆ ಎಂದು ವೈದ್ಯರು ಹೇಳುತ್ತಾರೆ. ಇಂತಿರುವಾಗ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಸುವುದು ಯಾಕೆ ? ಶಿವರಾಜ್ ಅವರು ದೊಡ್ಡ ವೈದ್ಯರಾ? ಅಪ್ರಾಪ್ತರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳು ಮಧ್ಯಪ್ರದೇಶದಲ್ಲಿ ಜಾಸ್ತಿ ಇದೆ. ಈ ರೀತಿ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಮುಖ್ಯಮಂತ್ರಿ ಬೂಟಾಟಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ವರ್ಮಾ ಕಿಡಿ ಕಾರಿದ್ದಾರೆ.
ವರ್ಮಾ ಅವರ ಹೇಳಿಕೆಯನ್ನು ಖಂಡಿಸಿದ ಮಧ್ಯಪ್ರದೇಶದ ಬಿಜೆಪಿ ನಾಯಕಿ ನೇಹಾ ಬಗ್ಗಾ, ವರ್ಮಾ ಅವರು ಭಾರತದ ಹೆಣ್ಣು ಮಕ್ಕಳನ್ನು ಅವಮಾನಿಸಿದ್ದಾರೆ. ಅವರ ಪಕ್ಷದ ಅಧ್ಯಕ್ಷೆ ಮಹಿಳೆ ಎಂಬುದನ್ನು ಅವರು ಮರೆತಿದ್ದಾರೆಯೇ? ಪ್ರಿಯಾಂಕಾ ಗಾಂಧಿ ಕೂಡಾ ಮಹಿಳೆ ಅಲ್ಲವೇ? ವರ್ಮಾ ಸಾರ್ವಜನಿಕರ ಕ್ಷಮೆ ಕೇಳಬೇಕು. ಅವರನ್ನು ಪಕ್ಷದಿಂದ ವಜಾ ಮಾಡಿ ಎಂದು ನಾನು ಸೋನಿಯಾಗಾಂಧಿ ಅವರಲ್ಲಿ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.
ಬಿಜೆಪಿ ಏನಾದರೊಂದು ಕಾರಣ ಹುಡುಕುತ್ತಿದೆ. ವರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ವೈದ್ಯರು ಏನು ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಿ ಮಾತನಾಡಿದ್ದರು. ಮಹಿಳೆಯರ ವಿವಾಹ ವಯಸ್ಸು ಮಿತಿ ಏರಿಕೆ ಬಗ್ಗೆ ಯಾವುದಾದರೂ ಅಧ್ಯಯನ ನಡೆದಿದೆ ಎಂಬುದು ಮುಖ್ಯಮಂತ್ರಿಯವರಿಗೆ ಗೊತ್ತಿದೆಯೇ? ಎಂದು ಅವರು ಕೇಳಿರುವುದಾಗಿ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಸಮಜಾಯಿಷಿ ನೀಡಿದ್ದಾರೆ.