ಹೈದರಾಬಾದ್: ತೆಲಂಗಾಣದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾದ ಪ್ರವಾದಿ ಮೊಹಮ್ಮದ್ (prophet muhammad) ಕುರಿತಾದ ಹೇಳಿಕೆಯ ಕಾರಣಕ್ಕೆ ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ (T Raja Singh) ಅವರನ್ನು ಬಂಧಿಸಲಾಗಿದೆ. ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್, ನನ್ನನ್ನು ಬಂಧಿಸಿದ ಹಾಗೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದವರ, ಹಿಂದೂ ಧರ್ಮದ ಬಗ್ಗೆ ಹಾಸ್ಯ ಮಾಡಿದವರ ವಿರುದ್ಧ ಕೂಡ ಏಕೆ ಕೇಸ್ ದಾಖಲಿಸುವುದಿಲ್ಲ? ಎಂದು ಕೇಳಿದ್ದಾರೆ.
ಇಂದು ಹೈದರಾಬಾದ್ನಾದ್ಯಂತ ನನ್ನ ವಿರುದ್ಧ ದೂರುಗಳು ದಾಖಲಾಗಿವೆ. ನನ್ನ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಆದರೆ, ಅದು ಯಾವ ಕಾರಣಕ್ಕಾಗಿ? ನಮ್ಮ ದೇವರಾದ ರಾಮ ರಾಮನಲ್ಲವೇ? ನಮ್ಮ ಸೀತೆ ಸೀತಾ ಮಾತೆಯಲ್ಲವೇ? ಇಂದು ತೆಲಂಗಾಣದ ಶ್ರೀರಾಮ ಮತ್ತು ಸೀತೆಯ ಅನುಯಾಯಿಗಳು ನಮ್ಮ ರಾಮನ ವಿರುದ್ಧ ಕೆಟ್ಟದಾಗಿ ಮಾತನಾಡುವವರಿಗೆ ಯಾಕೆ ಶಿಕ್ಷೆ ನೀಡುತ್ತಿಲ್ಲ? ಎಂದು ಕೇಳುತ್ತಿದ್ದಾರೆ. ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರಿಗೆ ಪ್ರಧಾನಿಗೂ ಸಿಗದಂತಹ ರಕ್ಷಣೆ ನೀಡಲಾಗುತ್ತಿದೆ. ಈ ಮೂಲಕ ನೀವು ಸಾರ್ವಜನಿಕರಿಗೆ ಯಾವ ರೀತಿಯ ಸಂದೇಶವನ್ನು ಕಳುಹಿಸಲು ಬಯಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Big News: ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ; ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ
ತೆಲಂಗಾಣ ರಾಜ್ಯದಲ್ಲಿ ಬಿಗಿ ಭದ್ರತೆಯ ನಡುವೆ ಪ್ರದರ್ಶನ ನೀಡಿದ ಹಾಸ್ಯನಟ ಮುನಾವರ್ ಫಾರೂಕಿ ಅವರನ್ನು ಉಲ್ಲೇಖಿಸಿ ರಾಜಾ ಸಿಂಗ್ ಟೀಕಾಪ್ರಹಾರ ನಡೆಸಿದ್ದಾರೆ. ತೆಲಂಗಾಣದಲ್ಲಿ ರಾಮನನ್ನು ಪೂಜಿಸುವವರಿಗೆ ಬೆಲೆ ಇಲ್ಲ, ರಾಮನ ವಿರುದ್ಧ ಕೆಟ್ಟ ಮಾತುಗಳನ್ನು ಆಡುವವರಿಗೆ ಮಾತ್ರ ಬೆಲೆ ಇದೆ ಎಂದು ಟೀಕಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿರುದ್ಧ ಪೊಲೀಸರು ಇಂದು ಕೇಸ್ ದಾಖಲಿಸಿ, ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ಸೋಮವಾರ ರಾತ್ರಿ ಬಿಜೆಪಿ ಶಾಸಕ ರಾಜಾ ಸಿಂಗ್ ಪ್ರವಾದಿ ಮೊಹಮ್ಮದ್ ಕುರಿತು ಮಾತನಾಡುವ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಅದಾದ ನಂತರ ಪ್ರತಿಭಟನೆ ನಡೆದು, ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.