ಭಾರತ ಸರ್ಕಾರ ಹೊಸ ಐಟಿ ರೂಲ್ಸ್ಗಳನ್ನು ಪಾಲಿಸುವಲ್ಲಿ ಒಂದಲ್ಲ ಒಂದು ಕ್ಯಾತೆ ತೆಗೆಯುತ್ತಲೇ ಬಂದಿರುವ ಟ್ವಿಟರ್, ಇದೀಗ ಇನ್ನು 8 ವಾರಗಳಲ್ಲಿ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡುವುದಾಗಿ ದೆಹಲಿ ಹೈಕೋರ್ಟ್ಗೆ ತಿಳಿಸಿದೆ. ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸಲು ಟ್ವಿಟರ್ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಕೂಡ ಟ್ವಿಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಸರಿಯಾದ ಮಾಹಿತಿ ನೀಡದೆ, ನೀವು ನಮ್ಮನ್ನೇ ತಪ್ಪುದಾರಿಗೆ ಎಳೆಯುತ್ತಿದ್ದೀರಿ ಎಂದು ಹೈಕೋರ್ಟ್ ಹೇಳಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಟ್ವಿಟರ್, ನಮಗೆ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಲು ಇನ್ನು 8ವಾರಗಳು ಬೇಕು ಎಂದು ಹೇಳಿದೆ.
ಕೇಂದ್ರದ ನೂತನ ಐಟಿ ನಿಯಮಗಳ ಪಾಲನೆ ಸಂಬಂಧ ಭಾರತದಲ್ಲಿ ಸಂಪರ್ಕ ಕಚೇರಿ ಸ್ಥಾಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಕಚೇರಿ ಶಾಶ್ವತವಾಗಿ ಇರಲಿದ್ದು, ಇಲ್ಲಿಗೆ ನಮ್ಮ ಗ್ರಾಹಕರು ಬಂದು ದೂರು ನೀಡಬಹುದು. ಕುಂದುಕೊರತೆ, ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಟ್ವಿಟರ್ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ಮಧ್ಯಂತರವಾಗಿ ನೇಮಕ ಮಾಡಲಾಗವುದು ಎಂದು ಟ್ವಿಟರ್ ಮಾಹಿತಿ ನೀಡಿರಲಿಲ್ಲ. ಭಾರತದಿಂದ ಬಂದ ಕುಂದುಕೊರತೆಯನ್ನು ಯುಎಸ್ನಲ್ಲಿ ಅಲ್ಲಿನ ಅಧಿಕಾರಿ ಪರಿಶೀಲನೆ ಮಾಡುವಂತೆ ಯೋಜನೆ ರೂಪಿಸಲಾಗಿದೆ. ಆದರೆ ಇದು ಭಾರತದ 2021ರ ಹೊಸ ಐಟಿ ನಿಯಮಗಳ ಅನುಸರಣೆ ಆದಂತೆ ಆಗಲಿಲ್ಲ. ಹೊಸದಾದ ಐಟಿ ನಿಯಮಗಳು ಈ ನೆಲದ ಕಾನೂನುಗಳಾಗಿದ್ದು ಅದನ್ನು ಪಾಲನೆ ಮಾಡುವುದು ಟ್ವಿಟರ್ ಸೇರಿ ಎಲ್ಲ ಸಾಮಾಜಿಕ ಮಾಧ್ಯಮಗಳಿಗೆ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ಅದಾದ ಬಳಿಕ ಹೈಕೋರ್ಟ್ ಕೂಡ ಟ್ವಿಟರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಕನಕದಾಸ ವೃತ್ತ ನಿರ್ಮಾಣ ವಿರೋಧಿಸಿ ಸಂಸದ ಕರಡಿ ಸಂಗಣ್ಣ ಪತ್ರ; ಸಂಗಣ್ಣ ಕ್ಷಮೆ ಯಾಚನೆಗೆ ಪಟ್ಟು ಹಿಡಿದ ಕುರುಬ ಸಮುದಾಯ
Will Appoint Grievance redressal Officer in 8 Weeks Twitter told to Delhi Highcourt