ಗಂಡ ನಪುಂಸಕ ಎಂದು 90 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆಯಿಟ್ಟ ಮಹಿಳೆಗೆ ಶಾಕ್ ಕೊಟ್ಟ ಕೋರ್ಟ್

ತನ್ನ ಪತಿ ನಪುಂಸಕ ಎಂದು ಮಹಿಳೆ ಹೇಳಿಕೊಂಡಿದ್ದು, ಅದಕ್ಕಾಗಿ ತನಗೆ 90 ಲಕ್ಷ ರೂ. ಶಾಶ್ವತ ಜೀವನಾಂಶ ನೀಡಬೇಕೆಂದು ತೆಲಂಗಾಣದ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು. ತನ್ನ ಪತಿ ವಿಚಿತ್ರವಾದ ರೋಗದಿಂದ ಬಳಲುತ್ತಿದ್ದಾರೆ, ಇದು ನಿಮಿರುವಿಕೆಯನ್ನು ತಂದೊಡ್ಡಿತು. ಇದು ಹಿಂದೂ ವಿವಾಹ ಕಾಯ್ದೆ, 1955ರ ಅಡಿಯಲ್ಲಿ ಕ್ರೌರ್ಯಕ್ಕೆ ಸಮನಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ಹೈಕೋರ್ಟ್ ಏನು ಹೇಳಿತು? ಎಂಬ ಮಾಹಿತಿ ಇಲ್ಲಿದೆ.

ಗಂಡ ನಪುಂಸಕ ಎಂದು 90 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆಯಿಟ್ಟ ಮಹಿಳೆಗೆ ಶಾಕ್ ಕೊಟ್ಟ ಕೋರ್ಟ್
Alimony

Updated on: Aug 25, 2025 | 10:54 PM

ನವದೆಹಲಿ, ಆಗಸ್ಟ್ 25: ತನ್ನ ಪತಿ ನಪುಂಸಕ. ಆತನಿಂದ ವಿಚ್ಛೇದನ (Divorce) ಮತ್ತು 90 ಲಕ್ಷ ರೂ. ಜೀವನಾಂಶ ಬೇಕೆಂದು ಮಹಿಳೆಯೊಬ್ಬರು ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪತಿಯ ನಪುಂಸಕತೆ ಅಥವಾ ಅವರು ಹೆಂಡತಿಗೆ ವಂಚನೆ ಮಾಡಿದ್ದಾರೆ ಎಂಬ ಆ ಮಹಿಳೆಯ ವಾದವನ್ನು ಪುಷ್ಟೀಕರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಆ ಮಹಿಳೆಯ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿದೆ.

ತನ್ನ ಪತಿ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಲೈಂಗಿಕ ಸಂಭೋಗಕ್ಕೆ ಅಸಮರ್ಥರಾಗಿದ್ದಾರೆ ಎಂಬ ಕಾರಣಕ್ಕೆ ಮಹಿಳೆ ವಿಚ್ಛೇದನವನ್ನು ಕೋರಿದ್ದರು. ಜೊತೆಗೆ 90 ಲಕ್ಷ ರೂ. ಶಾಶ್ವತ ಜೀವನಾಂಶದ ಬೇಡಿಕೆಯನ್ನು ಇಟ್ಟಿದ್ದರು. ಮದುವೆಗೂ ಮೊದಲು ತನ್ನ ನಪುಂಸಕತೆಯ ಬಗ್ಗೆ ತಿಳಿಸದೆ ಅವರು ವಿವಾಹ ವಂಚನೆ ಮಾಡಿದ್ದಾರೆ ಎಂದು ಮಹಿಳೆ ವಾದಿಸಿದ್ದರು. ಆದರೆ, ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಬಿ.ಆರ್. ಮಧುಸೂಧನ್ ರಾವ್ ಅವರ ಹೈಕೋರ್ಟ್ ಪೀಠವು ಆಕೆಯ ಮೇಲ್ಮನವಿಯನ್ನು ವಜಾಗೊಳಿಸಿತು ಮತ್ತು ಆಕೆಯ ಮನವಿಯನ್ನು ತಿರಸ್ಕರಿಸುವ ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿಯಿತು.

“ಆ ವ್ಯಕ್ತಿ ದುರ್ಬಲ ಮತ್ತು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ ಎಂಬುದಾಗಲಿ ಅಥವಾ ಆ ಮಹಿಳೆ ತನ್ನ ಗಂಡನಿಂದ ಕಿರುಕುಳ ಅನುಭವಿಸಿದ್ದಾಳೆ ಮತ್ತು 90 ಲಕ್ಷ ರೂ.ಗಳ ಶಾಶ್ವತ ಜೀವನಾಂಶಕ್ಕೆ ಅವಳು ಅರ್ಹಳು ಎಂದು ಸಾಬೀತುಪಡಿಸಲು ಸೂಕ್ತವಾದ ದಾಖಲೆಗಳಿಲ್ಲ. ಈ ಕಾರಣಕ್ಕಾಗಿ ವಿಚಾರಣಾ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ನಾವು ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ” ಎಂದು ನ್ಯಾಯಾಲಯವು ತಿಳಿಸಿದೆ.

ಇದನ್ನೂ ಓದಿ: Viral: 12 ಕೋಟಿ ರೂ, ಮನೆ, ಬಿಎಂಡಬ್ಲ್ಯೂ ಕಾರು ಗಂಡನಿಂದ ಜೀವನಾಂಶಕ್ಕಾಗಿ ಬೇಡಿಕೆಯಿಟ್ಟ ಪತ್ನಿ, ನೀವೇ ದುಡಿದು ಸಂಪಾದಿಸಿ ಎಂದ ಸುಪ್ರೀಂ ಕೋರ್ಟ್

ಈ ದಂಪತಿ ಡಿಸೆಂಬರ್ 2013ರಲ್ಲಿ ವಿವಾಹವಾಗಿದ್ದರು. ಆದರೆ, ಮದುವೆಯಾದಾಗಿನಿಂದ ತಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಪತ್ನಿ ತಮ್ಮ ಎರಡು ಹನಿಮೂನ್​ಗಳನ್ನು ಸಹ ಉಲ್ಲೇಖಿಸಿದ್ದಾರೆ. ಒಂದು 2013ರಲ್ಲಿ ಕೇರಳದಲ್ಲಿ ಮತ್ತು ಇನ್ನೊಂದು 2014ರಲ್ಲಿ ಕಾಶ್ಮೀರದಲ್ಲಿ ನಡೆದಿತ್ತು. ಆದರೆ, ಆಕೆಯ ಪತಿಗೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ತನಗೆ ವಂಚನೆಯಾಗಿದೆ ಎಂದು ಆಕೆ ಕೋರ್ಟ್​ ಮೆಟ್ಟಿಲೇರಿದ್ದರು. ಸುಳ್ಳು ಹೇಳಿ ತನ್ನನ್ನು ಮದುವೆಯಾಗಿದ್ದಾರೆ ಎಂದು ಆಕೆ ಆರೋಪಿಸಿದ್ದರು.

ತನ್ನ ಪತಿ ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದಾರೆ. ಇದು ನಿಮಿರುವಿಕೆಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬ ಅಂಶವನ್ನು ಅವರು ಮುಚ್ಚಿಟ್ಟಿದ್ದರು. ಇದು ಹಿಂದೂ ವಿವಾಹ ಕಾಯ್ದೆ, 1955 ರ ಅಡಿಯಲ್ಲಿ ಕ್ರೌರ್ಯಕ್ಕೆ ಸಮನಾಗಿರುತ್ತದೆ ಎಂದು ಆ ಮಹಿಳೆ ಆರೋಪಿಸಿದ್ದರು. 2017ರಲ್ಲಿ ನಡೆದ ವೈದ್ಯಕೀಯ ತಪಾಸಣೆಯ ವೇಳೆಯಲ್ಲೇ ಈ ವಿಷಯ ಅವರಿಗೆ ಗೊತ್ತಾಗಿದ್ದರೂ ಮಚ್ಚಿಟ್ಟಿದ್ದಾರೆ ಎಂದು ಆಕೆ ಹೇಳಿದ್ದರು. ಆ ಪರೀಕ್ಷೆಯಲ್ಲಿ ಅವರ ಪತಿ ವೈವಾಹಿಕ ಜೀವನಕ್ಕೆ ಅನರ್ಹ ಮತ್ತು ಮಕ್ಕಳನ್ನು ಹೊಂದಲು ಅಸಮರ್ಥ ಎಂದು ಕಂಡುಬಂದಿತ್ತು ಎಂದು ಆಕೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಜೀವನಾಂಶ ಪಾವತಿಸುವಂತೆ ಆದೇಶಿಸಿದ ಕೋರ್ಟ್;‌ 1 ಮತ್ತು 2 ರೂ. ಚಿಲ್ಲರೆ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣ ನೀಡಿದ ಪತಿರಾಯ

ಆದರೆ, ಆ ಮಹಿಳೆಯ ಪತಿ ಹೆಂಡತಿಯ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು. ತಮಗೆ ಸಣ್ಣಪುಟ್ಟ ಲೈಂಗಿಕ ಸಮಸ್ಯೆ ಇದ್ದರೂ ಅದಕ್ಕೆ ಈಗಾಗಲೇ ಚಿಕಿತ್ಸೆ ಪಡೆದಿದ್ದೇನೆ ಎಂದು ಹೇಳಿಕೊಂಡರು. ಎರಡೂ ಹನಿಮೂನ್‌ಗಳಲ್ಲಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಮದುವೆಯಾದ 5 ವರ್ಷಗಳ ನಂತರ ತನ್ನ ಪತಿ ಲೈಂಗಿಕವಾಗಿ ದುರ್ಬಲ ಎಂದು ಹೆಂಡತಿ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೂಕ್ತ ದಾಖಲೆಗಳಿಲ್ಲದ ಕಾರಣದಿಂದ ಆಕೆಯ ಅರ್ಜಿಯನ್ನು ವಜಾಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:44 pm, Mon, 25 August 25