ಚೆನ್ನೈನಲ್ಲಿ ವಿಪರೀತ ಮಳೆ..(Chennai Rains)ಅನಾಹುತಗಳು ಸೃಷ್ಟಿಯಾಗುತ್ತಿವೆ. ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಚೆನ್ನೈನ ಈಗಿನ ಸನ್ನಿವೇಶದ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಈ ಮಧ್ಯೆ, ಪ್ರಜ್ಞೆ ತಪ್ಪಿ ಬಿದ್ದಿರುವ ವ್ಯಕ್ತಿಯೊಬ್ಬನನ್ನು ಮಹಿಳಾ ಪೊಲೀಸ್ ಅಧಿಕಾರಿ ರಾಜೇಶ್ವರಿ ಅವರು ಹೆಗಲ ಮೇಲೆ ಹೊತ್ತುಕೊಂಡು ಬಂದು ರಕ್ಷಿಸಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ನೆಟ್ಟಿಗರಂತೂ ಕೊಂಡಾಡಿದ್ದಾರೆ. ಟಿಪಿ ಚತ್ರಂ ಎಂಬ ಪ್ರದೇಶದಲ್ಲಿರುವ ಸ್ಮಶಾನದಲ್ಲಿ ವ್ಯಕ್ತಿಯೊಬ್ಬ ಎಚ್ಚರವಿಲ್ಲದೆ ಬಿದ್ದಿದ್ದ. ಆತನನ್ನು ಮಹಿಳಾ ಅಧಿಕಾರಿ ಸ್ವತಃ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಆಟೋದಲ್ಲಿ ಮಲಗಿಸಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸುರಿಯುತ್ತಿರುವ ಮಳೆಯ ಮಧ್ಯೆ ಆ ವ್ಯಕ್ತಿ ಅಸ್ವಸ್ಥನಾಗಿ ಬಿದ್ದಿದ್ದಾನೆ. ಮಹಿಳಾ ಪೊಲೀಸ್ ಅಧಿಕಾರಿ ರಾಜೇಶ್ವರಿ ಮತ್ತು ಕೆಲವರು ಅವನ ಬಳಿ ಹೋಗುತ್ತಾರೆ. ನಂತರ ರಾಜೇಶ್ವರಿಯವರು ಆತನನ್ನು ಎತ್ತಿ ತಮ್ಮ ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. ಅಲ್ಲಿಂದ ಕೆಲ ಮಾರು ದೂರ ಅವನನ್ನು ಹಾಗೇ ಹೊತ್ತುಕೊಂಡೇ ನಡೆಯುತ್ತಾರೆ. ಬಳಿಕ ಆಟೋದಲ್ಲಿ ಮಲಗಿಸುತ್ತಾರೆ. ಈತನ ಪ್ರಾಣವನ್ನು ಹೇಗಾದರೂ ರಕ್ಷಿಸಬೇಕು ಎಂದು ಅವರು ಹೇಳುವುದು ವಿಡಿಯೋದಲ್ಲಿ ಕೇಳುತ್ತದೆ. ವಿಡಿಯೋ ನೋಡಿದ ನೆಟ್ಟಿಗರಂತೂ ರಾಜೇಶ್ವರಿಯವರನ್ನು ಪರಿಪರಿಯಾಗಿ ಹೊಗಳಿದ್ದಾರೆ.
#WATCH | TP Chatram police inspector Rajeshwari carried an unconscious man on her shoulders and rushed him to a hospital in an autorickshaw. “We have to save his life at any cost,” she said. | #ChennaiRains
Report by @imjournalistRK https://t.co/ekcamZFgGg pic.twitter.com/doJTCbt0DS— News9 (@News9Tweets) November 11, 2021
ಚೆನ್ನೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಈಗಾಗಲೇ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲಿ ನೋಡಿದರೂ ರಸ್ತೆಗಳು ಜಲಾವೃತಗೊಂಡಿವೆ. ವಾಹನ, ಜನ ಸಂಚಾರ ಸ್ಥಗಿತಗೊಂಡಿದೆ. ರಾಜ್ಯಾದ್ಯಂತ ಸುಮಾರು 11 ಎನ್ಡಿಆರ್ಎಫ್ ಮತ್ತು 7 ಎಸ್ಡಿಆರ್ಎಫ್ ತಂಡಗಳು ಸನ್ನದ್ಧರಾಗಿ ನಿಂತಿದ್ದಾರೆ. ಇಂದು ಸಂಜೆ ಕೂಡ ಚೆನ್ನೈನ ಉತ್ತರ ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ.
ಇದನ್ನೂ ಓದಿ: Kuvempu Death Anniversay : ಕುವೆಂಪು ಅವರ ಮಕ್ಕಳ ಕಥೆ ‘ನರಿಗಳಿಗೇಕೆ ಕೋಡಿಲ್ಲ?’; ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ನೋಟ
Published On - 2:56 pm, Thu, 11 November 21