Kuvempu Death Anniversay : ಕುವೆಂಪು ಅವರ ಮಕ್ಕಳ ಕಥೆ ‘ನರಿಗಳಿಗೇಕೆ ಕೋಡಿಲ್ಲ?’; ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ನೋಟ

Children Story : ‘ನರಿ ಸ್ವಭಾವತಃ ಬೇಟೆಯಾಡುವುದಿಲ್ಲ. ಬೇರೆಯವರ ಬೇಟೆಯ ಆಹಾರದ ಮೇಲೆ ಅದು ಬದುಕುತ್ತದೆ. ಶ್ರಮ ಸಂಸ್ಕೃತಿಯನ್ನು ಪ್ರತಿಪಾದಿಸುವ ಕುವೆಂಪು ಸಾಹಿತ್ಯದಲ್ಲಿ ನರಿಯ ಈ ಬುದ್ಧಿಯೂ ಧ್ವನಿಪೂರ್ಣವಾಗಿಬಿಡುತ್ತದೆ.’ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

Kuvempu Death Anniversay : ಕುವೆಂಪು ಅವರ ಮಕ್ಕಳ ಕಥೆ ‘ನರಿಗಳಿಗೇಕೆ ಕೋಡಿಲ್ಲ?’; ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ನೋಟ
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಕುವೆಂಪು

Kuvempu Death Anniversary : `ನರಿಗಳಿಗೇಕೆ ಕೋಡಿಲ್ಲ’ – ಕುವೆಂಪು ಮಕ್ಕಳಿಗಾಗಿ ಬರೆದ ಕಥೆ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ `ಕುವೆಂಪು ಸಮಗ್ರ ಗದ್ಯ ಸಂಪುಟ’ದ ಕೃತಿ ಸೂಚಿಯಲ್ಲಿ ಇದು ೧೯೩೦ರಲ್ಲಿ ಪ್ರಕಟವಾಯಿತೆಂದು ನಮೂದಿಸಿದೆ. ನನ್ನ ಬಳಿಯಿರುವ ಈ ಕೃತಿಯ ನಾಲ್ಕನೆಯ ಮುದ್ರಣದ (೧೯೯೭) ಪ್ರತಿಯಲ್ಲಿ ಮೊದಲನೆಯ ಮುದ್ರಣದ ಪ್ರಕಟಣೆಯ ವರ್ಷ ೧೯೬೭ ಎಂದಿದೆ. ಆರಂಭದ ಪುಟದಲ್ಲಿ `ಐವತ್ತು ವರ್ಷಗಳ ಹಿಂದೆ `ಮಕ್ಕಳ ಪುಸ್ತಕ’ ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕತೆ’ ಎಂಬ ಸೂಚನೆಯಿದೆ. ಈ ಸೂಚನೆಯನ್ನು ಆಧರಿಸಿದರೆ ಈ ಕತೆ ಸರಿಸುಮಾರು ೧೯೧೭ರ ವೇಳೆಗೆ ಪ್ರಕಟವಾಗಿರಬೇಕು. ಆಗ ಸಹಜವಾಗಿಯೇ ಇದಕ್ಕೊಂದು ಐತಿಹಾಸಿಕ ಮಹತ್ವ ಒದಗಿಬಿಡುತ್ತದೆ. ಈಗಿನ ಮಾಹಿತಿಯ ಪ್ರಕಾರ ೧೯೨೨ರಲ್ಲಿ ಪ್ರಕಟವಾದ ಇಂಗ್ಲಿಷ್ ಕವನಸಂಕಲನ Beginner’s ಮ್ಯೂಸ್ ಬಿಟ್ಟರೆ ಕುವೆಂಪುರವರ ಮೊದಲ ಕನ್ನಡ ಕೃತಿ `ಅಮಲನ ಕಥೆ’ (೧೯೨೪). ಕುವೆಂಪುರವರ ಆತ್ಮಕಥೆ `ನೆನಪಿನ ದೋಣಿಯಲ್ಲಿ’ ಇದರ ಪ್ರಸ್ತಾಪವಿಲ್ಲ. ಕುವೆಂಪು ಅಭಿನಂದನ ಗ್ರಂಥ `ಗಂಗೋತ್ರಿ’ (೧೯೬೮)ಯಲ್ಲಿ ರಾಗೌ `ಕುವೆಂಪು ಅವರ ಶಿಶುಸಾಹಿತ್ಯ’ ಎಂಬ ಸುದೀರ್ಘ ಲೇಖನ ಬರೆದಿದ್ದಾರೆ. ಇದರಲ್ಲಿಯೂ ಈ ಕತೆಯ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಕುವೆಂಪು ಸಾಹಿತ್ಯ ಚರ್ಚೆಯಲ್ಲಿ ಹೆಚ್ಚು ಪ್ರಸ್ತಾಪಿತವಾಗದ ಆರಂಭಕಾಲದ ಈ ಕತೆ ಮುಂದೆ ಕಿರುಪುಸ್ತಕ ರೂಪದಲ್ಲಿ ಒಂದು ಸ್ವತಂತ್ರ ಕೃತಿಯಾಗಿ (ಸಂಕಲನದಲ್ಲಿ ಸೇರದೆ) ಪ್ರಕಟವಾಗಿದೆ.
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ಸಾಹಿತಿ

ಕುವೆಂಪುರವರ ಆರಂಭ ಕಾಲದ ರಚನೆಗಳನ್ನು ಗಮನಿಸಿದಾಗ ಎಲ್ಲ ನವೋದಯ ಲೇಖಕರಂತೆ ಕುವೆಂಪು ಅವರೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಪ್ರಯೋಗ ನಡೆಸಿದಂತೆ ತೋರುತ್ತದೆ. ಕಥೆ (ನರಿಗಳಿಗೇಕೆ ಕೋಡಿಲ್ಲ), ಕಾವ್ಯ (ಅಮಲನ ಕಥೆ), ನಾಟಕ (ಮೋಡಣ್ಣನ ತಮ್ಮ, ನನ್ನ ಗೋಪಾಲ), ಅನುವಾದ (ಬಿರುಗಾಳಿ), ಜೀವನ ಚರಿತ್ರೆ (ಸ್ವಾಮಿ ವಿವೇಕಾನಂದ) – ಹೀಗೆ ವಿವಿಧ ಪ್ರಕಾರಗಳಲ್ಲಿ ಅವರು ಕೃತಿ ರಚಿಸುವ ಪ್ರಯತ್ನ ಮಾಡಿದ್ದರು. ಮತ್ತೊಂದು ಬಹಳ ಮುಖ್ಯವಾದ, ಗಮನಿಸಬೇಕಾದ ಅಂಶ – ಅವರ ಆರಂಭದ ರಚನೆಗಳೆಲ್ಲವೂ ಮಕ್ಕಳನ್ನು ಕುರಿತಂಥವು. ನರಿಗಳಿಗೇಕೆ ಕೋಡಿಲ್ಲ – ಮಕ್ಕಳಿಗಾಗಿ ಬರೆದ ಕಥೆ. ಅಮಲನ ಕಥೆ – ಮಕ್ಕಳಿಗಾಗಿ ಬರೆದ ಲಘು ಕಾಲ್ಪನಿಕ ಕಾವ್ಯ. ಮೋಡಣ್ಣನ ತಮ್ಮ, ನನ್ನ ಗೋಪಾಲ – ಮಕ್ಕಳಿಗೆಂದೇ ಬರೆದ ನಾಟಕಗಳು, ಬ್ರೌನಿಂಗ್ ಕವಿಯ `ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಆಧರಿಸಿ ರೂಪಿತವಾದ `ಬೊಮ್ಮನಹಳ್ಳಿ ಕಿಂದರಿಜೋಗಿ’ ಸಹ ಮಕ್ಕಳಿಗಾಗಿಯೇ ಬರೆದಂಥದು. ಇದು ಕೇವಲ ಆಕಸ್ಮಿಕವೆಂದು ನಾನು ಭಾವಿಸುವುದಿಲ್ಲ. ಕುವೆಂಪು ಅವರ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ನವಭಾರತ ನರ‍್ಮಾಣದ ಸಂಕಲ್ಪ ಹಾಗೂ ಅದಕ್ಕಾಗಿ ಹೊಸ ಜನಾಂಗವನ್ನು ಸಜ್ಜುಗೊಳಿಸುವ ಆಕಾಂಕ್ಷೆ ಗಾಢವಾಗಿದೆ.

ಹೋಗುತಿದೆ ಹಳೆಕಾಲ, ಹೊಸಕಾಲ ಬರುತಲಿದೆ
ಬರುತಲಿದೆ ಹೊಸದೃಷ್ಟಿ ಹೊಸ ಬಯಕೆಗಳಲಿ
ಹೋಗುತಿದೆ ಹಳೆಬಾಳು, ಹೊಸಬಾಳು ಬರುತಲಿದೆ
ಬರುತಲಿದೆ ಕುದಿಗೊಂಡು ತರುಣರೆದೆಗಳಲಿ
ತರುಣರಿರ ಎದ್ದೇಳಿ | ಎಚ್ಚರಗೊಳ್ಳಿ! ಕೇಳಿ (ತರುಣರಿರ ಎದ್ದೇಳಿ)

ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಗಮನಿಸಿದಾಗ ಹೊಸ ತಲೆಮಾರಿನ ಬಗೆಗಿನ ಅವರ ಆಸಕ್ತಿ ಅದರ ಒಂದು ಪ್ರಧಾನ ನೆಲೆ. ಈ ಹಿನ್ನೆಲೆಯಲ್ಲಿಯೇ ನಾವು ಅವರ ಆರಂಭದ ಈ ರಚನೆಗಳನ್ನೂ ನೋಡಬೇಕಾಗುತ್ತದೆ. `ನರಿಗಳಿಗೇಕೆ ಕೋಡಿಲ್ಲ’ ಕತೆಯಲ್ಲಿಯೇ ಬರುವ ಒಂದು ಸಂದರ್ಭ ಹೀಗಿದೆ. ಗುಬ್ಬಕ್ಕನ ಮನೆಯ ಗೋಡೆಯ ಮೇಲೆ ಮಹಾತ್ಮ ಗಾಂಧಿ, ವಿವೇಕಾನಂದ, ರಾಮಕೃಷ್ಣರ ಪಟಗಳಿರುತ್ತವೆ. ಅತಿಥಿಗಳು `ಇವೇಕೆ ಈ ಪಟಗಳು’ ಎಂದು ಕೇಳಿದಾಗ ಗುಬ್ಬಕ್ಕ ಹೇಳುತ್ತಾಳೆ. `ಮಕ್ಕಳು ಈ ಮಹಾಪುರುಷರ ಸನ್ನಿಧಿಯಲ್ಲಿಯೇ ಬೆಳೆದರೆ ಅವರೂ ಮಹಾತ್ಮರಾಗುತ್ತಾರೆ. ಭರತಮಾತೆಯ ಉದ್ಧಾರ ಮಾಡುತ್ತಾರೆ. ಅದಕ್ಕೋಸ್ಕರ ಈ ಪಟಗಳನ್ನು ಇಟ್ಟಿದ್ದೇನೆ. ಅವರಿಗೆ ದಿನವೂ ಅವರ ಕಥೆಗಳನ್ನು ಜೋಗುಳದಂತೆ ಹೇಳುತ್ತೇನೆ. ಹಾಲು ಬೆಣ್ಣೆಗಳಲ್ಲಿ ಅವರ ಮಹಿಮೆಯನ್ನು ಊಡುತ್ತೇನೆ’. (ನರಿಗಳಿಗೇಕೆ ಕೋಡಿಲ್ಲ, ಉದಯರವಿ ಪ್ರಕಾಶನ, ಮೈಸೂರು, ಪುಟ-೫) ಮಕ್ಕಳ ಸಾಹಿತ್ಯದ ಮಹತ್ವವನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಗ್ರಹಿಸುವುದು ಕಷ್ಟವೇ ಸರಿ.

`ನರಿಗಳಿಗೇಕೆ ಕೋಡಿಲ್ಲ’ – ಒಂದು ಸರಳ ಕಥೆ. ಜಾನಪದ ಶೈಲಿಯಲ್ಲಿ ನಿರೂಪಿತವಾಗಿದೆ. ಇಲ್ಲಿಯ ಪ್ರಾಣಿಪ್ರಪಂಚ, ಕತೆ ಪ್ರಕಟಿಸುವ ನೀತಿ – ಪಂಚತಂತ್ರದ ನೆನಪು ತರುತ್ತದೆ. ಮಕ್ಕಳ ಕತೆಗೆ ಇದಕ್ಕಿಂತ ಬೇರೆ ಮಾದರಿ ಎಲ್ಲಿದೆ?
ತೀರ್ಥಹಳ್ಳಿಯ ಬಳಿಯ ನವಿಲುಕಲ್ಲು ಬೆಟ್ಟದಲ್ಲಿ ಗುಬ್ಬಚ್ಚಿಯ ಸಂಸಾರ-ವೊಂದಿರುತ್ತದೆ. ಹೆಣ್ಣು ಗುಬ್ಬಚ್ಚಿಯ ಹೆಸರು ಗುಬ್ಬಕ್ಕ, ಗಂಡು ಗುಬ್ಬಚ್ಚಿಯ ಹೆಸರು ಗುಬ್ಬಣ್ಣ, ಇವರಿಬ್ಬರದು ಸುಖಸಂಸಾರ. ಅವರ ಮನೆಯನ್ನು ಕುವೆಂಪು ವರ್ಣಿಸುವ ಕ್ರಮ ನೋಡಿ. “ಅವರಿಗಿದ್ದ ಮನೆ ಸವಿಯಾದ ಮನೆ. ಅದು ಒಂದು ಹೆಮ್ಮರದ ನೆತ್ತಿಯ ಕೊಂಬೆಯ ತುದಿಯಲ್ಲಿತ್ತು. ಗಾಳಿ ಬಂದಾಗ ಆ ಕೊಂಬೆ ತೊಟ್ಟಿಲಂತೆ ತೂಗುತ್ತಿತ್ತು. ಆಗ ಆ ಗಂಡು ಹೆಣ್ಣು ಹಕ್ಕಿಗಳೆರಡೂ ಹಾಡಿ ನಲಿಯುತ್ತಿದ್ದವು. ಅವರ ಮನೆಗೆ ಬೆಲ್ಲದ ಗೋಡೆ; ಸಕ್ಕರೆ ಬಾಗಿಲು; ಕಬ್ಬಿನ ಮುಚ್ಚಿಗೆ. ಮನೆಯ ಅಂಗಳದಲ್ಲಿ ಒಂದು ಪುಟ್ಟ ಸರೋವರ. ಅದರಲ್ಲಿ ನೀರಿರಲಿಲ್ಲ, ಜೇನು ತುಪ್ಪವಿತ್ತು.’’ ಗುಬ್ಬಚ್ಚಿಯ ಕತೆ ಸಹಜವಾಗಿ ನಮಗೆಲ್ಲ ಬಾಲ್ಯದ ನೆನಪು ತರುತ್ತದೆ. ಜಾನಪದದಲ್ಲಿ ಗುಬ್ಬಕ್ಕನ ಕತೆ ಅತ್ಯಂತ ಜನಪ್ರಿಯ. ಕಾಗಕ್ಕ, ಗುಬ್ಬಕ್ಕನ ಕತೆಯಲ್ಲಿ ಗುಬ್ಬಕ್ಕನದು ಕಲ್ಲಿನ ಮನೆ. ಆದರೆ ಕುವೆಂಪುರವರ ಈ ಕತೆಯಲ್ಲಿನ ಗುಬ್ಬಕ್ಕನ ಮನೆಯ ಕಲ್ಪನೆಯೇ ಬೇರೆ ರೀತಿಯದು. ಹಾಗೆ ನೋಡಿದರೆ ಈ ವೈಭವೀಕರಣವೂ ಜಾನಪದ ಸಾಹಿತ್ಯದಿಂದಲೇ ಬಂದಿರುವಂಥದು. ಉತ್ಪ್ರೇಕ್ಷೆ ಜಾನಪದ ಸಾಹಿತ್ಯದ ಪ್ರಧಾನ ಗುಣ.

ಜಾನಪದ ಕತೆಯ ಕ್ರಮದಲ್ಲಿ ನಿರ್ದಿಷ್ಟತೆಯಿರುವುದಿಲ್ಲ. ಒಂದೂರಿನಲ್ಲಿ ಒಬ್ಬ ರಾಜನಿದ್ದ ಎಂಬ ರೀತಿಯಲ್ಲಿಯೇ ಅದರ ಆರಂಭ. ಆ ಊರು ಯಾವುದು, ಆ ರಾಜ ಯಾರು ಎಂಬುದು ಇಲ್ಲಿ ಮುಖ್ಯವೇ ಅಲ್ಲ. ಆದರೆ ಕುವೆಂಪು ಇಲ್ಲಿ ತೀರ್ಥಹಳ್ಳಿ, ನವಿಲುಕಲ್ಲು, ಮಹಾತ್ಮ ಗಾಂಧಿ, ವಿವೇಕಾನಂದ ಇತ್ಯಾದಿ ವಿವರಗಳ ಮೂಲಕ ಅದಕ್ಕೊಂದು ಐತಿಹಾಸಿಕತೆಯನ್ನು ತಂದುಕೊಡುವ, ಅದನ್ನು ಸಮಕಾಲೀನಗೊಳಿಸುವ ಪ್ರಯತ್ನ ಮಾಡುತ್ತಾರೆ. ಮುಂದೆ ಕುವೆಂಪು ಸಾಹಿತ್ಯದಲ್ಲಿ ಮಲೆನಾಡಿನ ನಿರ್ಲಕ್ಷ್ಯ ಪ್ರದೇಶಗಳಾದ ನವಿಲುಕಲ್ಲು, ಕವಿಶೈಲ, ಹುಲಿಕಲ್ಲು ಇವೆಲ್ಲ ಪಡೆದುಕೊಳ್ಳುವ ಪ್ರಾಮುಖ್ಯತೆ ಗಮನಿಸಬೇಕಾದಂಥದು. ಅವರ ಕಾದಂಬರಿ ಜಗತ್ತಿನಲ್ಲಿ ಬರುವ ಮಲೆನಾಡಿನ ಪ್ರತಿಯೊಂದು `ಸ್ಥಳ’ವೂ ಒಂದು ಐತಿಹಾಸಿಕ ಸ್ಥಳವೆಂಬಂತೆ ಕುವೆಂಪು ವರ್ಣಿಸುತ್ತಾರೆ. ಇದು ಸಾಮಾನ್ಯ ಜನರ ಬದುಕನ್ನು ಚಾರಿತ್ರಿಕವಾಗಿಸುವ ಕ್ರಮವೂ ಹೌದು. ಇದು ರಾಮ ನಡೆದಾಡಿದ ಪ್ರದೇಶ ಎಂದು ನಮ್ಮಲ್ಲಿ ರೂಢಿಯಲ್ಲಿರುವಂತೆಯೇ ಕುವೆಂಪು ಇದು ಗುತ್ತಿ ಓಡಿಯಾಡಿದ ಸ್ಥಳ ಎಂದು ವರ್ಣಿಸುತ್ತಾರೆ. `ಮಲೆನಾಡಿನ ಚಿತ್ರಗಳು’ ಪ್ರಬಂಧವೊಂದರಲ್ಲಿ ಬರುವ ಈ ಸನ್ನಿವೇಶವನ್ನು ಗಮನಿಸಿ:

“ಪುಟ್ಟಣ್ಣ ಅಲ್ಲಲ್ಲಿ ನಿಂತು ಅರಣ್ಯದ ಐತಿಹಾಸಿಕ ಸುಪ್ರಸಿದ್ಧ ಸ್ಥಳಗಳನ್ನು ತೋರಿಸಿದ. ಒಂದೆಡೆ ಜಟ್ಟಿನಮಕ್ಕಿ ಸುಬ್ಬಯ್ಯಗೌಡರು ಹುಲಿ ಬಿಟ್ಟ ಸ್ಥಳವೆಂದು ತೋರಿದ. ಅವರು ಕೂತಿದ್ದ ಮರದ ಹರೆಯನ್ನೂ, ಹುಲಿ ಬಂದ ಮಾರ್ಗವನ್ನೂ ಹುಲಿ ಕುಳಿತ ಜಾಗವನ್ನೂ ಎಲ್ಲಾ ತೋರಿಸಿ ಅವುಗಳ ಮೇಲೆ ವ್ಯಾಖ್ಯಾನ ಟೀಕೆಗಳನ್ನು ಮಾಡಿಬಿಟ್ಟ. ಮತ್ತೊಂದೆಡೆ ತಾನೇ ಒಂದು ದೊಡ್ಡ ಹಂದಿ ಹೊಡೆದ ಸ್ಥಳವೆಂದು ತೋರಿದ’’ (ಮಲೆನಾಡಿನ ಚಿತ್ರಗಳು, ಉದಯರವಿ ಪ್ರಕಾಶನ, ಒಂಬತ್ತನೆಯ ಮುದ್ರಣ, ಮೈಸೂರು-೧೯೯೮, ಪುಟ-೮೭). ಹೊಸ ಇತಿಹಾಸವನ್ನು ಬರೆಯುವ ಕ್ರಮವಿದು. ಇದು ಚರಿತ್ರೆಯನ್ನು ನಾವು ಮತ್ತೆ ಪುನರ್ ರೂಪಿಸಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ. ಕುವೆಂಪು ಅಂಥ ಪ್ರಯತ್ನ ಮಾಡಿದರು. ಈ ಪ್ರಕ್ರಿಯೆಯ ಆರಂಭವನ್ನು `ನರಿಗಳಿಗೇಕೆ ಕೋಡಿಲ್ಲ’ ಕತೆಯಲ್ಲಿಯೇ ನಾವು ಕಾಣುತ್ತೇವೆ. ಇಲ್ಲಿ ಕುವೆಂಪು ಕತೆ ಆರಂಭಿಸುವ ರೀತಿ ನೋಡಿ: `ತೀರ್ಥಹಳ್ಳಿಗೆ ನಾಲ್ಕೈದು ಮೈಲುಗಳ ದೂರದಲ್ಲಿ ಒಂದು ಬೆಟ್ಟವಿದೆ. ಅದರ ಹೆಸರು ನವಿಲುಕಲ್ಲು’ ಮುಂದೆ ಆ ಬೆಟ್ಟವನ್ನು ವರ್ಣಿಸುವ ಕುವೆಂಪು ಅದನ್ನೂ ಅವರು ವಿಂಧ್ಯ ಹಿಮಾಲಯವನ್ನು ವರ್ಣಿಸುವಂತೆಯೇ ವರ್ಣಿಸುತ್ತಾರೆ – ಆ ಪ್ಯಾರಾದ ಕಡೆಯಲ್ಲಿ ಮತ್ತೆ ಹೇಳುತ್ತಾರೆ: “ಮರಳಿ ಹೇಳುತ್ತೇನೆ – ಆ ಬೆಟ್ಟದ ಹೆಸರು ನವಿಲುಕಲ್ಲು’’. ಒಂದು ಸಾಮಾನ್ಯ ಸ್ಥಳ ಐತಿಹಾಸಿಕವಾಗುವ ಕ್ರಮವಿದು. ಹೊಸ ಇತಿಹಾಸ ಬರೆಯುವ ಕುವೆಂಪು ಹಂಬಲ ಅವರ ಆರಂಭದ ಈ ಬರಹದಲ್ಲಿಯೇ ವ್ಯಕ್ತವಾಗುತ್ತಿರುವುದು ಗಮನಿಸಬೇಕಾದ ಅಂಶ.

Kuvempu Death Anniversary special Narigaligeke kodilla by Narahalli Balasubrahmanya

ನರಿಗಳಿಗೇಕೆ ಕೋಡಿಲ್ಲ ಅಜ್ಜಾ?

`ಆ ಪಕ್ಷಿ ದಂಪತಿಗೆ ಎಲ್ಲ ಬಗೆಯ ಸುಖಗಳಿದ್ದರೂ ಮಕ್ಕಳಿರಲಿಲ್ಲ. ಗುಬ್ಬಣ್ಣನು ದೇವರಿಗೆ ಮೊರೆಯಿಟ್ಟು, ಹರಕೆ ಹೊತ್ತ ಮೇಲೆ ಮೂರು ಮಕ್ಕಳಾದರು. ಹರಕೆ ಸಲ್ಲಿಸುವುದಕ್ಕಾಗಿ ಅವನು ಕಾಶಿಗೆ ಯಾತ್ರೆ ಹೋದನು. ಗುಬ್ಬಕ್ಕನೊಬ್ಬಳೇ ಮಕ್ಕಳನ್ನು ನೋಡಿಕೊಂಡು ಸಂಸಾರವನ್ನು ಸಾಂಗವಾಗಿ ನಡೆಸಿಕೊಂಡು ಬರುತ್ತಿದ್ದಳು. ಹೀಗಿರುತ್ತಲಿರಲು…’

ಪುರಾಣದ ಕತೆ ಹೇಳುವ ಕ್ರಮವಿದು ಅಥವಾ ರಾಜರಾಣಿಯರ ಕತೆ ಹೇಳುವ ಕ್ರಮವೂ ಇದೆ.
ಒಂದು ದಿನ ಭಯಂಕರ ಮಳೆ ಬರುತ್ತದೆ. ಅದು ಅಂತಿಂಥ ಮಳೆಯಲ್ಲ, ಮಲೆನಾಡಿನ ಮಳೆ. ಆ ಮಳೆಯಲ್ಲಿ ಸಿಕ್ಕ ಮೂವರು ಪ್ರಯಾಣಿಕರು ಹುಲಿಯಣ್ಣ, ಕರಡಿಯಣ್ಣ, ನರಿಯಣ್ಣ ಆಶ್ರಯಕ್ಕಾಗಿ ಹಂಬಲಿಸಿ ಕಡೆಗೆ ಗುಬ್ಬಕ್ಕನ ಮನೆಗೆ ಬರುತ್ತಾರೆ. ಆರಂಭದಲ್ಲಿ ಆತಂಕಗೊಂಡ ಗುಬ್ಬಕ್ಕ ಹುಲಿಯಣ್ಣ, ಕರಡಿಯಣ್ಣ ಇವರ ಭರವಸೆಯ ಮಾತುಗಳಿಂದ ಸಮಾಧಾನಗೊಂಡು ಅತಿಥಿಗಳನ್ನು ಆದರಿಸಿ, ಸತ್ಕರಿಸಿ ಅವರಿಗೆ ಆ ರಾತ್ರಿ ತನ್ನ ಮನೆಯಲ್ಲಿಯೇ ಆಶ್ರಯ ನೀಡುತ್ತಾಳೆ. ಮಾರನೆಯ ಬೆಳಿಗ್ಗೆ ನಸುಕು ಹರಿದಾಗ ಮಳೆ ನಿಂತಿರುತ್ತದೆ. ಗುಬ್ಬಕ್ಕ ಎದ್ದು ಮನೆಯನ್ನು ಗುಡಿಸಿ ರಂಗೋಲಿ ಹಾಕಿ ಹಾಲು ಕರೆಯಲು ಕೊಟ್ಟಿಗೆಗೆ ಹೋಗುತ್ತಾಳೆ. ಹುಲಿಯಣ್ಣ ಕರಡಿಯಣ್ಣ ಎದ್ದು, ಯಜಮಾನಿಗಾಗಿ ಹುಡುಕಿ, ಕಾಣದೆ ತಮ್ಮ ಪಾಡಿಗೆ ತಾವು ಹೊರಟುಹೋಗುತ್ತಾರೆ. ನಂತರ ತಡವಾಗಿ ಎದ್ದ ನರಿಯಣ್ಣ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಆಗ ತಾನೇ ಎದ್ದು ಅಳುತ್ತಿದ್ದ ಮಿಂಚಿನುಂಡೆಗಳಂತಿದ್ದ ಮೂರು ಮಕ್ಕಳನ್ನು ನುಂಗಿ, ನೀರು ಕುಡಿದು ಓಡಿಹೋಗುತ್ತಾನೆ. `ನರಿಬುದ್ಧಿ’ ಎಂಬ ನುಡಿಗಟ್ಟು ರೂಢಿಗೆ ಬಂದದ್ದು ಈ ಬಗೆಯ ನರಿಯ ಬುದ್ಧಿಯಿಂದಲೇ. ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ನರಿ ಸ್ವಭಾವತಃ ಬೇಟೆಯಾಡುವುದಿಲ್ಲ. ಬೇರೆಯವರ ಬೇಟೆಯ ಆಹಾರದ ಮೇಲೆ ಅದು ಬದುಕುತ್ತದೆ. ಶ್ರಮ ಸಂಸ್ಕೃತಿಯನ್ನು ಪ್ರತಿಪಾದಿಸುವ ಕುವೆಂಪು ಸಾಹಿತ್ಯದಲ್ಲಿ ನರಿಯ ಈ ಬುದ್ಧಿಯೂ ಧ್ವನಿಪೂರ್ಣವಾಗಿಬಿಡುತ್ತದೆ. ಮುಂದೆ ಗುಬ್ಬಕ್ಕ, ಹುಲಿಯಣ್ಣ, ಕರಡಿಯಣ್ಣ ಇವರ ನೆರವಿನಿಂದ ನರಿಯಣ್ಣನನ್ನು ಹುಡುಕಿ, ಅವನ ಹೊಟ್ಟೆಯಿಂದ ಮಕ್ಕಳನ್ನು ಕಕ್ಕಿಸಿ, ಮರಳಿ ಮಕ್ಕಳನ್ನು ಪಡೆಯುತ್ತಾಳೆ. ಹುಲಿಯಣ್ಣ ನರಿಯಣ್ಣನಿಗಿದ್ದ ಎರಡು ಕೋಡುಗಳನ್ನು ಶಿಕ್ಷೆಗಾಗಿ ಮುರಿಯುತ್ತಾನೆ. ಕರಡಿಯಣ್ಣ: `ಇನ್ನು ಮೇಲೆ ನಿನ್ನ ಜಾತಿಗೆ ಕೋಡುಗಳಿರದೆ ಹೋಗಲಿ’ ಎಂದು ಶಾಪ ಕೊಡುತ್ತಾನೆ. ಅಂದಿನಿAದ ನರಿಯ ಜಾತಿಗಳಿಗೆ ಕೋಡುಗಳಿಲ್ಲ!

ಪುಸ್ತಕದ ಕಡೆಯಲ್ಲಿ `ಕುಣಿಯುತ ಬಾ ಕಂದಯ್ಯ’ ಎಂಬ ಒಂದು ಕವಿತೆಯಿದೆ. ಇದಕ್ಕೂ ಕತೆಗೂ ಯಾವುದೇ ನೇರ ಸಂಬಂಧವಿದ್ದಂತಿಲ್ಲ – ಈ ಕವಿತೆಯೂ ಮಗುವನ್ನು ಕುರಿತದ್ದು ಎಂಬುದನ್ನು ಹೊರತುಪಡಿಸಿ.
ಕುವೆಂಪು ಸಾಹಿತ್ಯದಲ್ಲಿ ಮುಂದೆ ಪ್ರಧಾನವಾಗಿ ಕಾಣಿಸಿಕೊಳ್ಳುವ ಮಲೆನಾಡು, ಮಕ್ಕಳ ಪ್ರಪಂಚ, ನಂಬಿಕೆ, ಶ್ರಮಸಂಸ್ಕೃತಿ – ಮೊದಲಾದ ಸಂಗತಿಗಳು ಈ ಕತೆಯಲ್ಲಿ ಸೂಚನಾ ರೂಪದಲ್ಲಿ ಗೋಚರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಐತಿಹಾಸಿಕ ಪ್ರಕ್ರಿಯೆಯ ಅಂಶ ನನಗೆ ಮಹತ್ವದ್ದಾಗಿ ತೋರುತ್ತದೆ. ಆರಂಭಘಟ್ಟದ ಈ ಬರಹದಲ್ಲಿಯೂ ಕವಿ ಪ್ರತಿಭೆಯ ಹೊಳಹುಗಳಿವೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಬಹುಶಃ ಇದು ಕುವೆಂಪು ಬರೆದ ಮೊದಲ ಕತೆ ಎಂಬುದೂ ಇಲ್ಲಿ ಗಮನೀಯ. ಈ ಕೃತಿಗೆ ಕುವೆಂಪು ಸಾಹಿತ್ಯ ಚರ್ಚೆಯಲ್ಲಿ ಒಂದು ರೀತಿಯ ಐತಿಹಾಸಿಕ ಮಹತ್ವವಿದೆ.

(ಬಾ ಕುವೆಂಪು ದರ್ಶನಕೆ ಪುಸ್ತಕದಿಂದ ಆಯ್ದ ಅಧ್ಯಾಯ. ಪ್ರಕಾಶನ : ಅಭಿನವ, ಬೆಂಗಳೂರು 9448804905)

ಇದನ್ನೂ ಓದಿ : New Publication : ಭಾರತದ ಬಹುಭಾಷಾ ಸಾಹಿತ್ಯಕನ್ನಡಿ ‘ಬಹುವಚನ’; ಕನ್ನಡಕ್ಕೊಂದು ಹೊಸ ಪ್ರಕಾಶನ

Click on your DTH Provider to Add TV9 Kannada