ಶಾಸಕ ರಾಜು ಕಾಗೆ ಸಹೋದರನ ಪುತ್ರನಿದ್ದ ಕಾರು ಅಪಘಾತ: ಓರ್ವ ಸಾವು
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶಾಸಕ ರಾಜು ಕಾಗೆ ಅವರ ಸಹೋದರನ ಮಗ ಚಾಲನೆ ಮಾಡುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗಾವಿ, ಏಪ್ರಿಲ್ 02: ಶಾಸಕ ರಾಜು ಕಾಗೆಯ (Raju Kage) ಸಹೋದರನ ಪುತ್ರ ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು (Kittur) ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ. ಗೋಕಾಕ್ ಮೂಲದ ಬಸವರಾಜ ಪುಡಕಲಕಟ್ಟಿ(22) ಮೃತ ದುರ್ದೈವಿ. ಬೈಕ್ನಲ್ಲಿದ್ದ ಸಣ್ಣ ವಿಠ್ಠಲ್ ದುರದುಂಡಿ, ನಿಂಗಪ್ಪ ಹೆಬ್ಬಾಳ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜು ಕಾಗೆ ಸಹೋದರನ ಪುತ್ರ ಪುತ್ರ ಶ್ರೀಪ್ರಸಾದ್ ಸಿದ್ದನಗೌಡ ಕಾಗೆ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಬಟ್ಟೆ ಹರಿದು ಅತ್ತೆ ಮೇಲೆ ಅಳಿಯನಿಂದ ಹಲ್ಲೆ
ಶಾಸಕಿ ಕರೆಮ್ಮಾ ಜಿ.ನಾಯಕ ಪುತ್ರಿ ಕಾರು ಅಪಘಾತ
ರಾಯಚೂರು: ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮಾ ಜಿ.ನಾಯಕ ಪುತ್ರಿ ಗೌರಿಯ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ದೇವದುರ್ಗ ತಾಲೂಕಿನ ಮಿಯ್ಯಾಪುರ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶ ಮೂಲದ ಬೈಕ್ ಸವಾರ ಕೋಮಿಶೆಟ್ಟಿ ಕೃಷ್ಣ ಗಾಯಗೊಂಡಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕಿ ಕರೆಮ್ಮಾ ಬೆಳಗ್ಗೆಯಿಂದ ನೀರಿಗಾಗಿ ಪಾದಯಾತ್ರೆ ನಡೆಸ್ತಿದ್ದರು. ಪಾದಯಾತ್ರೆ ಶುರುವಾದ ಬಳಿಕ ಶಾಸಕಿ ಪುತ್ರಿ ಗೌರಿ ಹೊರಟಿದ್ದರು. ಈ ವೇಳೆ ಕಾರು ಅಪಘಾತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಕರೆಮ್ಮಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಸೇತುವೆಯಿಂದ ಕೆಳಗೆ ಬಿದ್ದ ಕಾರು
ಚಾಮರಾಜನಗರ: ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತಗ್ಗಲೂರು ಗೇಟ್ ಬಳಿ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆನಲ್ಲಿ ನಡೆದಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಏಳು ಮಂದಿಗೆ ಗಾಯವಾಗಿದೆ. ಕಾರು ಬೆಂಗಳೂರಿನಿಂದ ಊಟಿಗೆ ತೆರಳುತ್ತಿತ್ತು. ಸ್ಥಳಕ್ಕೆ ಬೇಗೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Wed, 2 April 25