ಬೆಂಗಳೂರಿನ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸಿ: ಸುಪ್ರೀಂಕೋರ್ಟ್ ನಿರ್ದೇಶನ
ಜಿಬಿಎ ಚುನಾವಣೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿ ಇರುವ 5 ನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಮತದಾರರ ಪಟ್ಟಿ ಮಾರ್ಚ್ 16ರೊಳಗೆ ಅಂತಿಮವಾಗಲಿದ್ದು, ಮೀಸಲಾತಿ ಅಧಿಸೂಚನೆ ಫೆಬ್ರವರಿ 20ರೊಳಗೆ ಹೊರಬೀಳಲಿದೆ. ಹಲವು ವರ್ಷಗಳಿಂದ ಮುಂದೂಡಲ್ಪಟ್ಟಿದ್ದ ಚುನಾವಣೆಗೀಗ ಮುಹೂರ್ತ ಕೂಡಿಬಂದಂತಿದೆ.

ಬೆಂಗಳೂರು, ಜನವರಿ 12: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿ ರಚನೆಯಾಗಿರುವ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುದೀರ್ಘ ಸಮಯದಿಂದ ಚಿಂತನೆ ನಡೆಯುತ್ತಲೇ ಇದೆ. ಸುಮಾರು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಯೇ ನಡೆಯದೆ ಪದೇ ಪದೇ ಮುಂದೂಡಿಕೊಂಡು ಬರಲಾಗುತ್ತಿತ್ತು. ಆದರೀಗ ನಗರದ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮ, ಜೂನ್ 30ರೊಳಗೆ ಚುನಾವಣೆ
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಲಿಖಿತ ದಾಖಲೆಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಾಲ್ಯ ಬಾಗ್ಚಿ ಅವರಿರುವ ಪೀಠವು ಹಿರಿಯ ವಕೀಲ ಎ.ಎಂ ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿತ್ತು. ಈ ಕುರಿತು ವಿಚಾರಣೆ ವೇಳೆ, ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಈಗಾಗಲೇ ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಫೆಬ್ರವರಿ 20ರೊಳಗೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸುವಂತೆ ಕೋರ್ಟ್ ಸೂಚನೆ ನೀಡಿದೆ.
ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮಗೊಳ್ಳಲಿದ್ದು, ಮಾರ್ಚ್‌ನಲ್ಲಿ ಎಸ್ಎಸ್ಎಲ್‌ಸಿ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಮೇ 26ರೊಳಗೆ ಚುನಾವಣಾ ದಿನಾಂಕ ಘೋಷಿಸಿ, ಜೂನ್ ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಕೋರ್ಟ್‌ಗೆ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:17 pm, Mon, 12 January 26