ಮಹಿಳಾ ಮೀಸಲಾತಿ ಜಾರಿಗೆ ವಿಶೇಷ ಸಂಸತ್ ಅಧಿವೇಶನಕ್ಕೆ ಕೇಂದ್ರ ಸಿದ್ಧತೆ, ಮಸೂದೆ ಗೆಲ್ಲುವ ವಿಶ್ವಾಸ

ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಕೇಂದ್ರ ಸರ್ಕಾರ ವಿಶೇಷ ಸಂಸತ್ ಅಧಿವೇಶನಕ್ಕೆ ಸಿದ್ಧತೆ ನಡೆಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಕೋಟಾ ಜಾರಿಗೆ ತರುವುದು ಗುರಿಯಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಬಳಿಕವೇ ಇದು ಕಾರ್ಯರೂಪಕ್ಕೆ ಬರಲಿದ್ದು, 'ನಾರಿ ಶಕ್ತಿ ವಂದನ್ ಅಧಿನಿಯಮ್' ಅನುಷ್ಠಾನಕ್ಕೆ ಸರ್ಕಾರದ ಮುಂದಿನ ಮಹತ್ವದ ಹೆಜ್ಜೆ ಇದು.

ಮಹಿಳಾ ಮೀಸಲಾತಿ ಜಾರಿಗೆ ವಿಶೇಷ ಸಂಸತ್ ಅಧಿವೇಶನಕ್ಕೆ ಕೇಂದ್ರ ಸಿದ್ಧತೆ, ಮಸೂದೆ ಗೆಲ್ಲುವ ವಿಶ್ವಾಸ
ಸಂಸತ್

Updated on: Nov 13, 2026 | 7:27 AM

ನವದೆಹಲಿ, ನವೆಂಬರ್ 13: ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಈ ಮಸೂದೆಯನ್ನು ಅಂಗೀಕರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯಿದೆ. ಮಸೂದೆಗೆ ಅಗತ್ಯವಿರುವ ಬಹುಮತ ಸಿಗಲಿದೆ ಎಂಬ ವಿಶ್ವಾಸವನ್ನು ಕೇಂದ್ರದ ಮೂಲಗಳು ವ್ಯಕ್ತಪಡಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಪ್ರಸ್ತುತ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ ಮೂರು ಸ್ಥಾನಗಳು ಖಾಲಿ ಇವೆ. ಹೀಗಾಗಿ 540 ಸದಸ್ಯರ ಬಲದ ಆಧಾರದಲ್ಲಿ 361 ಮತಗಳ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಸಂಖ್ಯೆಯನ್ನು ಅಗತ್ಯಕ್ಕಿಂತ 15ರಿಂದ 18 ಮತಗಳ ಹೆಚ್ಚಿನ ಅಂತರದಿಂದ ಪಡೆಯುವ ವಿಶ್ವಾಸ ಸರ್ಕಾರಕ್ಕಿದೆ ಎನ್ನಲಾಗಿದೆ. ಆದರೆ ವಿಶೇಷ ಅಧಿವೇಶನದ ದಿನಾಂಕ ಮತ್ತು ಅವಧಿಯನ್ನು ಇನ್ನೂ ಪ್ರಕಟಿಸಿಲ್ಲ.

Loading...

ಲೋಕಸಭೆ ಸ್ಥಾನಗಳ ಸಂಖ್ಯೆ 850ಕ್ಕೆ ಏರಿಕೆಯಾಗುತ್ತಾ?
ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಯ ಪ್ರಕಾರ, ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಈಗಿರುವ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವ ಉದ್ದೇಶವಿದೆ. ಕ್ಷೇತ್ರ ಪುನರ್ವಿಂಗಡಣೆ (Delimitation) ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವುದು ಇದರ ಗುರಿ. ಈ ಬದಲಾವಣೆಯಿಂದ ಲೋಕಸಭೆಯಲ್ಲಿ ಮಹಿಳಾ ಸಂಸದರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಮಹಿಳಾ ಮೀಸಲಾತಿಯನ್ನು 2029ರ ಲೋಕಸಭಾ ಚುನಾವಣೆಯ ವೇಳೆಗೆ ಜಾರಿಗೆ ತರುವುದು ಕೇಂದ್ರದ ಗುರಿಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿದ್ದ ಒಮರ್ ಅಬ್ದುಲ್ಲಾಗೆ ದೊಡ್ಡ ಶಾಕ್; ನ್ಯಾಷನಲ್ ಕಾನ್ಫರೆನ್ಸ್‌ಗೆ ಪಕ್ಷ, ಸಂಸದ ಸ್ಥಾನಕ್ಕೆ ಆಘಾ ರೂಹುಲ್ಲಾ ರಾಜೀನಾಮೆ

ದಕ್ಷಿಣ ರಾಜ್ಯಗಳ ಆತಂಕಕ್ಕೆ ಪರಿಹಾರವೇನು?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಹಲವು ಆತಂಕಗಳನ್ನು ವ್ಯಕ್ತಪಡಿಸಿವೆ. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ದಕ್ಷಿಣ ರಾಜ್ಯಗಳಿಗೆ ಹೊಸ ಕ್ಷೇತ್ರ ಹಂಚಿಕೆಯಿಂದ ಅನ್ಯಾಯವಾಗಬಹುದು ಎಂಬುದು ಅವುಗಳ ಪ್ರಮುಖ ಕಳವಳ.

ಇದನ್ನು ನಿವಾರಿಸಲು ಪ್ರತಿ ರಾಜ್ಯದ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಪರಿಶೀಲಿಸುತ್ತಿದೆ. ಅಲ್ಲದೆ, 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಈಗಿನ ಲೋಕಸಭಾ ಸ್ಥಾನಗಳ ಅನುಪಾತವನ್ನು ಉಳಿಸಿಕೊಳ್ಳುವ ಆಯ್ಕೆಯೂ ಚರ್ಚೆಯಲ್ಲಿದೆ. ಆದರೆ ಈ ಪ್ರಸ್ತಾವನೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಏಪ್ರಿಲ್‌ನಲ್ಲೇ ಮಸೂದೆಗೆ ಹಿನ್ನಡೆಯಾಗಿತ್ತು
ಇದೇ ರೀತಿಯ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಏಪ್ರಿಲ್ 17ರಂದು ಬಜೆಟ್ ಅಧಿವೇಶನದ ವಿಶೇಷ ಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಹೊಸ ಪ್ರಯತ್ನದ ಮೂಲಕ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಮುಂದಾಗಿದೆ.

ಈಗಾಗಲೇ ಜಾರಿಯಾಗಿದೆಯೇ ಮಹಿಳಾ ಮೀಸಲಾತಿ?
2023ರಲ್ಲಿ ಸಂಸತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ 106ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತ್ತು. ಇದಕ್ಕೆ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಹೆಸರಿಡಲಾಗಿದೆ. ಆದರೆ ಈ ಕಾಯ್ದೆಯ ಪ್ರಕಾರ ಮೀಸಲಾತಿ ಜಾರಿಗೆ ಬರಲು ಸಂಬಂಧಿತ ಜನಗಣತಿಯ ಅಂಕಿಅಂಶಗಳು ಪ್ರಕಟವಾದ ಬಳಿಕ ಕ್ಷೇತ್ರ ಪುನರ್ವಿಂಗಡಣೆ ನಡೆಯಬೇಕಿದೆ. ಹೀಗಾಗಿ ಕಾಯ್ದೆ ಅಂಗೀಕಾರವಾಗಿದ್ದರೂ ಮೀಸಲಾತಿ ಇನ್ನೂ ಜಾರಿಗೆ ಬಂದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us