ಜ್ಞಾನೇಶ್ ಕುಮಾರ್ ಜೈಲಿಗೆ ಹೋಗಲಿದ್ದಾರೆ, 2024ರ ಲೋಕಸಭೆ ಚುನಾವಣೆ ಅಕ್ರಮ: ರಾಹುಲ್ ಗಾಂಧಿ ಆರೋಪ
ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಬೃಹತ್ ರ‍್ಯಾಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಮತ್ತು ಮತದಾರರ ಪಟ್ಟಿ ಅಕ್ರಮ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮುಖ್ಯಾಂಶಗಳು
- ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುವುದು ನಿಶ್ಚಿತ: ರಾಹುಲ್ ಭವಿಷ್ಯ
- ಇವಿಎಂ-ಮತದಾರರ ಪಟ್ಟಿ ಅಕ್ರಮದಿಂದ ಲೋಕಸಭೆ ಚುನಾವಣೆ ಅಸಿಂಧು ಎಂದ ರಾಹುಲ್ ಗಾಂಧಿ
- ಮತ ಕಳವಿನ ಸರ್ಕಾರಗಳನ್ನು ಕಿತ್ತೊಗೆಯಲು ಖರ್ಗೆ ಕರೆ
ನವದೆಹಲಿ, ನವೆಂಬರ್ 1: 2024ರ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು (EVM) ಹಾಗೂ ಮತದಾರರ ಪಟ್ಟಿಗಳನ್ನು ತಿರುಚುವ ಮೂಲಕ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗವು ಮತಗಳನ್ನು ಕಳವು ಮಾಡಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯ ಐತಿಹಾಸಿಕ ರಾಮ್‌ಲೀಲಾ ಮೈದಾನದಲ್ಲಿ ನಡೆದ ‘ಇಂಡಿ (INDIA)’ ಮೈತ್ರಿಕೂಟದ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗುವುದು ಮತ್ತು ಅವರು ಜೈಲಿಗೆ ಹೋಗುವುದು ನಿಶ್ಚಿತ ಎಂದು ಗುಡುಗಿದ್ದಾರೆ.
‘ಈ ಮತಗಳ ಕಳವು ಸಾಮಾನ್ಯ ಕಳವ ಅಲ್ಲ. ಇದು ಭಾರತದ ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನು ಅಡಗಿಸುವ ದೇಶದ್ರೋಹದ ಕೆಲಸ. ಜ್ಞಾನೇಶ್ ಕುಮಾರ್ ಅವರ ನೆರವಿಲ್ಲದಿದ್ದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಅಥವಾ ಅಮಿತ್ ಶಾ ಅವರು ಗೃಹಸಚಿವರಾಗಲಿ ಆಗುತ್ತಿರಲಿಲ್ಲ’ ಎಂದು ರಾಹುಲ್ ಗಾಂಧಿ ನೇರವಾಗಿ ವಾಗ್ದಾಳಿ ನಡೆಸಿದರು. 2024ರ ಲೋಕಸಭಾ ಚುನಾವಣೆಯು ಸಂಪೂರ್ಣವಾಗಿ ನಿಯಮಬಾಹಿರ ಹಾಗೂ ಅಕ್ರಮವಾಗಿತ್ತು ಎಂದು ಅವರು ಆರೋಪಿಸಿದರು.
‘ಇಂಡಿ’ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮಾತು
#WATCH | INDIA bloc mega rally | Delhi: Lok Sabha LoP Rahul Gandhi says, “Listen to me. What I say always turns out to be true, doesn’t it? I am telling every citizen and every youth of India: Gyanesh Kumar will be removed from the post of Chief Election Commissioner. Gyanesh Kumar will go to jail.”
“Without Gyanesh Kumar, neither Narendra Modi would have become Prime Minister nor Amit Shah would have become Home Minister.”
“The farmer is not getting his rights. The youth are not getting employment. The labourer is not getting his rights, and the entire wealth has gone into the hands of two or three people. We do not want such an India, and we will not accept such an India.”
(Source: ANI/Congress)
— ANI (@ANI) November 1, 2026
ಮತ ಕಳವಿನ ಮೂಲಕ ಬಿಜೆಪಿಗೆ ಅಧಿಕಾರ: ಖರ್ಗೆ ವಾಗ್ದಾಳಿ
ಇದೇ ರ‍್ಯಾಲಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಹಾಗೂ ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳು ಮತ ಕಳವಿನ ಮೂಲಕ ಅಧಿಕಾರಕ್ಕೆ ಬಂದಿವೆ ಎಂದು ಕಿಡಿಕಾರಿದರು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಅವರು ಕರೆ ನೀಡಿದರು. ‘ಇಂಡಿ’ ಮೈತ್ರಿಕೂಟದ ಪ್ರಮುಖ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಾರ್ಟಿಯ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು
ಮತ್ತೊಂದೆಡೆ, ರಾಹುಲ್ ಗಾಂಧಿ ಅವರ ಈ ಆರೋಪಗಳನ್ನು ಆಡಳಿತಾರೂಢ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹರಿಯಾಣದ ಫರೀದಾಬಾದ್‌ನಲ್ಲಿ ನಡೆದ ‘ಲೋಕತಂತ್ರ ಬಚಾವೋ’ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ನಂಬಿಕೆ ಉಳಿಲಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಜೈಲಿಂದ ಬಿಡುಗಡೆಗೊಂಡ ಬೆನ್ನಲ್ಲೇ ಅಜಮ್ ಖಾನ್ ಬಂಧನ; 14 ದಿನ ನ್ಯಾಯಾಂಗ ಕಸ್ಟಡಿಗೆ
ಹಾಗೆಯೇ, ಗೋವಾದಲ್ಲಿ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಾಂವಿಧಾನಿಕ ಹಕ್ಕಾಗಿದ್ದು, ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಗೊಂದಲ ಮೂಡಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




