ಮದುವೆ ಸಂಭ್ರಮದಲ್ಲಿದ್ದ ಒಮರ್ ಅಬ್ದುಲ್ಲಾಗೆ ದೊಡ್ಡ ಶಾಕ್; ನ್ಯಾಷನಲ್ ಕಾನ್ಫರೆನ್ಸ್ಗೆ ಪಕ್ಷ, ಸಂಸದ ಸ್ಥಾನಕ್ಕೆ ಆಘಾ ರೂಹುಲ್ಲಾ ರಾಜೀನಾಮೆ
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಆಡಳಿತರೂಢ ನ್ಯಾಷನಲ್ ಕಾನ್ಫರೆನ್ಸ್ ನಾಯಕರ ವಿರುದ್ಧ ಇತ್ತೀಚೆಗಷ್ಟೇ ಲೋಕಸಭಾ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಶ್ರೀನಗರ ಸಂಸದ ಆಘಾ ಸೈಯದ್ ರೂಹುಲ್ಲಾ ಮೆಹ್ದಿ ಒಮರ್ ಅಬ್ದುಲ್ಲಾ ಪಕ್ಷದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. "ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಒಮರ್ ಅಬ್ದುಲ್ಲಾ ತಮ್ಮ ಲಗೇಜ್ ಕಟ್ಟಿಕೊಂಡು ಇಂಗ್ಲೆಂಡ್ಗೆ ಹೊರಟುಹೋಗಲಿ" ಎಂದು ಹೇಳುವ ಮೂಲಕ ರಾಜಕೀಯ ಸಂಚಲನವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. "ಕುರ್ಚಿ ಅಥವಾ ಅಧಿಕಾರಕ್ಕಿಂತ ತತ್ವಗಳು ಮುಖ್ಯ" ಎಂಬ ಸಂದೇಶದೊಂದಿಗೆ ಅವರು ರಾಜೀನಾಮೆ ಪ್ರಕಟಿಸಿದ್ದಾರೆ.

ಶ್ರೀನಗರ, ನವೆಂಬರ್ 3: ಜಮ್ಮು-ಕಾಶ್ಮೀರದ ಆಡಳಿತರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದೆ. ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪಕ್ಷದ ಅತ್ಯಂತ ಪ್ರಮುಖ ಶಿಯಾ ನಾಯಕರಾದ ಆಘಾ ಸೈಯದ್ ರೂಹುಲ್ಲಾ ಮೆಹ್ದಿ ತಮ್ಮ ಸಂಸದ ಸ್ಥಾನಕ್ಕೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬದ್ಗಾಮ್ನಲ್ಲಿ ನಡೆದ ತಮ್ಮ ತಂದೆ ಆಘಾ ಸೈಯದ್ ಮೆಹ್ದಿ ಅವರ 26ನೇ ಪುಣ್ಯತಿಥಿಯ ಸಮಾವೇಶದಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಳೆದ ವಾರ ಮದುವೆಯಾಗಿದ್ದ ಒಮರ್ ಅಬ್ದುಲ್ಲಾಗೆ ವೈಯಕ್ತಿಕ ಸಂಭ್ರಮದ ನಡುವೆ ಈ ಬೆಳವಣಿಗೆ ದೊಡ್ಡ ಶಾಕ್ ನೀಡಿದೆ.
ಇದರೊಂದಿಗೆ ಎನ್ಸಿ ಪಕ್ಷದೊಂದಿಗಿನ ಆಘಾ ಸೈಯದ್ ರೂಹುಲ್ಲಾ ಮೆಹ್ದಿ ಅವರ 24 ವರ್ಷಗಳ ಸುದೀರ್ಘ ಬಾಂಧವ್ಯ ಮುಕ್ತಾಯಗೊಂಡಿದೆ. ಲೋಕಸಭಾ ಅಧ್ಯಕ್ಷರು ಇವರ ರಾಜೀನಾಮೆಯನ್ನು ಅಂಗೀಕರಿಸಿದ ತಕ್ಷಣವೇ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಲಿದೆ. ಒಮರ್ ಅಬ್ದುಲ್ಲಾ ಮತ್ತು ಫಾರುಕ್ ಅಬ್ದುಲ್ಲಾ ರಾಜ್ಯದ ಜನತೆಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ತಮ್ಮ ರಾಜೀನಾಮೆ ವೇಳೆ ಆಘಾ ಸೈಯದ್ ರೂಹುಲ್ಲಾ ಮೆಹ್ದಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದ ವಿರುದ್ಧ ಪಕ್ಷದ ಶಾಸಕರಲ್ಲೇ ಅತೃಪ್ತಿ ಭುಗಿಲೆದ್ದಿದೆ. ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ 8 ಸಚಿವರನ್ನು ಬದಲಾಯಿಸಬೇಕು ಮತ್ತು ಪಕ್ಷದ ರಾಜಕೀಯ ಸಲಹೆಗಾರ ನಾಸಿರ್ ಅಸ್ಲಮ್ ವಾನಿ ಅವರನ್ನು ಕೂಡಲೇ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಡಳಿತರೂಢ ಪಕ್ಷದ ಸುಮಾರು 25ಕ್ಕೂ ಹೆಚ್ಚು ಶಾಸಕರು ಆಗ್ರಹಿಸಿದ್ದಾರೆ.
ಆಘಾ ಸೈಯದ್ ರೂಹುಲ್ಲಾ ಮೆಹ್ದಿ ಮಾಡಿದ ಆರೋಪಗಳೇನು?:
ಕೇವಲ ರಾಜೀನಾಮೆ ಪತ್ರವನ್ನು ನೀಡದೆ, ಪಕ್ಷದ ನಾಯಕತ್ವದ ವಿರುದ್ಧ 4 ಪುಟಗಳ ಕಟು ದೋಷಾರೋಪಣ ಪತ್ರವನ್ನು ಅವರು ಬಿಡುಗಡೆ ಮಾಡಿದ್ದಾರೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ಜನತೆ ನೀಡಿದ್ದ ಭಾರೀ ಜನಾದೇಶ, ಕೋಪ ಮತ್ತು ನಿರೀಕ್ಷೆಗಳಿಗೆ ನ್ಯಾಷನಲ್ ಕಾನ್ಫರೆನ್ಸ್ ದ್ರೋಹ ಎಸಗಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ರಾಜ್ಯಸಭಾ ಚುನಾವಣೆ ಫಲಿತಾಂಶ; ನ್ಯಾಷನಲ್ ಕಾನ್ಫರೆನ್ಸ್ಗೆ 3, ಬಿಜೆಪಿಗೆ 1 ಸ್ಥಾನ
“ಜಮ್ಮು-ಕಾಶ್ಮೀರದ ಇತಿಹಾಸ ಮತ್ತು ವರ್ತಮಾನವನ್ನು ಬೆಸೆಯುವ ಸತ್ಯದೊಂದಿಗೆ ನನ್ನ ಮಾತು ಆರಂಭಿಸುತ್ತಿದ್ದೇನೆ. ನಮ್ಮ ಪ್ರದೇಶ ಮತ್ತು ಇಲ್ಲಿನ ಜನರು ಇತಿಹಾಸದ ಭಾರಿ ಹೊರೆಯನ್ನು ಹೊತ್ತು ಸಾಗುತ್ತಿದ್ದಾರೆ. ಕಾಶ್ಮೀರದ ಗತಕಾಲ, ವರ್ತಮಾನ ಮತ್ತು ಭವಿಷ್ಯದ ಮೇಲಿನ ಇತಿಹಾಸ ನಿರಂತರ ಅಪಾಯವಾಗಿ ತೂಗುಗತ್ತಿಯಂತೆ ನೇತಾಡುತ್ತಿದೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
2019ರಲ್ಲಿ ವಿಧಿ 370 ಮತ್ತು 35-ಎ ರದ್ದುಗೊಳಿಸಿರುವುದನ್ನು ಕಾಶ್ಮೀರಿಗಳ ಹಕ್ಕುಗಳ ಮೇಲಿನ ‘ಬೆತ್ತಲೆ ದಾಳಿ’ ಎಂದು ಬಣ್ಣಿಸಿರುವ ಅವರು, “ಹಕ್ಕುಗಳು ಜನರನ್ನು ರೂಪಿಸುತ್ತವೆ. ಅವು ಇಲ್ಲದೆ ಹೋದರೆ ಜನರ ಅಸ್ತಿತ್ವವೇ ಇಲ್ಲದಂತಾಗುತ್ತದೆ” ಎಂದಿದ್ದಾರೆ. 2019ರ ನಂತರ ಹಕ್ಕುಗಳ ಮರುಸ್ಥಾಪನೆಗಾಗಿ ಹೋರಾಡುವ ಸುವರ್ಣ ಅವಕಾಶವಿತ್ತು ಮತ್ತು ಆ ಹೋರಾಟವನ್ನು ಎನ್ಸಿ ಮುನ್ನಡೆಸುತ್ತದೆ ಎಂಬ ಭರವಸೆಯ ಮೇಲೆ 2024ರ ಚುನಾವಣೆಯಲ್ಲಿ ಹಗಲಿರುಳು ಪ್ರಚಾರ ನಡೆಸಿದ್ದಾಗಿ ತಿಳಿಸಿದ ಅವರು, “ಚುನಾವಣಾ ಕಣದ ಕಾವು ಆರುವ ಮುನ್ನವೇ ನ್ಯಾಷನಲ್ ಕಾನ್ಫರೆನ್ಸ್ ಉಲ್ಟಾ ಹೊಡೆಯಿತು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಕ್ಕಾಗಿ ಹೋರಾಟದ ತ್ಯಾಗ:
ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಗಳು ಹಾಗೂ ಸಾರ್ವಜನಿಕರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರೂಹುಲ್ಲಾ ಆರೋಪಿಸಿದ್ದಾರೆ. ಪಕ್ಷವು ತನ್ನ ಮೂಲ ತತ್ವಗಳಿಂದ ದೂರ ಸರಿದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಒಮರ್ ಅಬ್ದುಲ್ಲಾ ಅವರ ನಾಯಕತ್ವದ ಶೈಲಿ ಮತ್ತು ನಿರ್ಧಾರಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಜಮ್ಮು-ಕಾಶ್ಮೀರದ ಜನರ ಹಿತಾಸಕ್ತಿಗಿಂತ ಅಧಿಕಾರದ ಕುರ್ಚಿಯೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: 51 ಸ್ಥಾನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್, 32 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ
“ಜಮ್ಮು-ಕಾಶ್ಮೀರ ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿರುವ ಈ ನಿರ್ಣಾಯಕ ಸಮಯದಲ್ಲಿ, ಹಕ್ಕುಗಳ ಹೋರಾಟವನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಅಗತ್ಯವಿತ್ತು. ಆದರೆ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಕೇವಲ ಸರ್ಕಾರ ರಚನೆಗಾಗಿ ಹಾಗೂ ರಾಜ್ಯತ್ವದ ಮರುಸ್ಥಾಪನೆಯ ವ್ಯರ್ಥ ಭರವಸೆಗಾಗಿ ತನ್ನ ಹೋರಾಟದ ಹಾದಿಯನ್ನು ಸಂಪೂರ್ಣವಾಗಿ ತ್ಯಜಿಸಿದೆ” ಎಂದು ಅವರು ಆರೋಪಿಸಿದ್ದಾರೆ.
ಮೀಸಲಾತಿ ಸುವ್ಯವಸ್ಥೆ, ರಾಜಕೀಯ ಬಂದಿಗಳ ಬಿಡುಗಡೆ ಹಾಗೂ ವಿಧಿ 370 ಮರುಸ್ಥಾಪನೆ ವಿಚಾರದಲ್ಲಿ ಪಕ್ಷ ತೋರಿದ ನಿಷ್ಕ್ರಿಯತೆಯೇ ಈ ಹಾದಿ ಬೇರೆಯಾಗಲು ಪ್ರಮುಖ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನನ್ನ ಧರ್ಮ, ಮೌಲ್ಯಗಳು ಮತ್ತು ಪಿತೃಗಳ ಮಾರ್ಗದರ್ಶನದಿಂದ ಪ್ರೇರಿತವಾದ ತತ್ವಗಳಿಗೆ ನಾನು ಬದ್ಧನಾಗಿರುತ್ತೇನೆಯೇ ಹೊರತು, ಸ್ವಾರ್ಥದ ರಾಜಕೀಯ ಮಾಡುವುದಿಲ್ಲ. ನನ್ನ ತಂದೆಯ ಆತ್ಮದ ಮೇಲಾಣೆಯಾಗಿ ನನ್ನ ಜನರ ಸೇವೆಗಾಗಿ ಹೊಸ ಹಾದಿಯನ್ನು ಕಂಡುಕೊಳ್ಳುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದಾರೆ.
ಆಘಾ ರೂಹುಲ್ಲಾ ಮೆಹ್ದಿ ಅವರು ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಆಲೋಚನೆ ಹೊಂದಿಲ್ಲ. ಅವರು ಯುವಕರ ನೇತೃತ್ವದ ಹೊಸ ಸಂಘಟನೆಯನ್ನು ಕಟ್ಟಲು ನಿರ್ಧರಿಸಿದ್ದಾರೆ. ಆದರೆ, ಒಮರ್ ಅಬ್ದುಲ್ಲಾ ಸರ್ಕಾರವನ್ನು ಬೀಳಿಸುವ ಅಥವಾ ಅಸ್ಥಿರಗೊಳಿಸುವ ಯಾವುದೇ ಉದ್ದೇಶ ತಮಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಶಾಸಕರ ಸಭೆ ಮತ್ತು ಬಂಡಾಯ:
ಇತ್ತೀಚೆಗೆ ಎನ್ಸಿ ಶಾಸಕ ಕೈಸರ್ ಜಮ್ಷೈದ್ ಲೋನ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ (18 ಶಾಸಕರು ನೇರ ಹಾಗೂ 7 ಶಾಸಕರು ಆನ್ಲೈನ್ ಮೂಲಕ ಭಾಗಿ) ಸಚಿವ ಸಂಪುಟದ ಸಮಗ್ರ ಪುನಾರಚನೆಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿತ್ತು. 90 ಸದಸ್ಯ ಬಲದ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಎನ್ಸಿ 41 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್, ಸಿಪಿಎಂ ಹಾಗೂ ಸ್ವತಂತ್ರರ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿದೆ. ಆಂತರಿಕ ಭಿನ್ನಮತ ಮತ್ತು ವಿರೋಧದ ನಡುವೆಯೇ ಶ್ರೀನಗರ ಎಂಪಿ ರಾಜೀನಾಮೆ ನೀಡಿರುವುದು ಒಮರ್ ಅಬ್ದುಲ್ಲಾ ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Tue, 3 November 26




