‘ಪಶ್ಚಿಮ ಬಂಗ’ವಾಗಲಿದೆ ಬಂಗಾಳ; ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ
ಪಶ್ಚಿಮ ಬಂಗಾಳ ರಾಜ್ಯವನ್ನು ಇಂಗ್ಲಿಷ್ನಲ್ಲೂ ಅಧಿಕೃತವಾಗಿ ‘ಪಶ್ಚಿಮ ಬಂಗ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಇಂದು ಘೋಷಿಸಿದ್ದಾರೆ. ರಾಜ್ಯ ಸಚಿವ ಸಂಪುಟವು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಡಿಸೆಂಬರ್ 9ರಂದು ವಿಧಾನಸಭೆಯಲ್ಲಿ ಈ ಕುರಿತು ನಿರ್ಣಯವನ್ನು ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೊಲ್ಕತ್ತಾದ ರಾಜ್ಯ ಸಚಿವಾಲಯದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೊಲ್ಕತ್ತಾ, ನವೆಂಬರ್ 23: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಪಶ್ಚಿಮ ಬಂಗ’ ಎಂದು ಮರುನಾಮಕರಣ ಮಾಡುವ ದೀರ್ಘಕಾಲದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪಶ್ಚಿಮ ಬಂಗಾಳದ ಸರ್ಕಾರವು ರಾಜ್ಯದ ಹೆಸರನ್ನು ಇಂಗ್ಲಿಷ್ನಲ್ಲಿ ವೆಸ್ಟ್ ಬೆಂಗಾಲ್ ಬದಲಾಗಿ ಪಶ್ಚಿಮ ಬಂಗಾ ಎಂದು ಬದಲಾಯಿಸಲು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದೆ. ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಈ ಕುರಿತು ಮರು-ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು.
ಹೆಸರು ಬದಲಾಯಿಸಲು ಮುಖ್ಯ ಕಾರಣವೇನು?:
ಪಶ್ಚಿಮ ಬಂಗಾಳ ಎಂಬ ಹೆಸರು ಇಂಗ್ಲಿಷ್ ವರ್ಣಮಾಲೆಯ ಕೊನೆಯ ಅಕ್ಷರ ‘ಡಬ್ಲು’ನಿಂದ ಪ್ರಾರಂಭವಾಗುವುದರಿಂದ, ಕೇಂದ್ರ ಸರ್ಕಾರದ ಸಭೆಗಳು, ನೀತಿ ಆಯೋಗದ ಸಮಾವೇಶಗಳು ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಿಗೆ ಮಾತನಾಡಲು ಅತ್ಯಂತ ಕೊನೆಯಲ್ಲಿ ಅವಕಾಶ ಸಿಗುತ್ತಿತ್ತು. ‘ಪಿ’ ಅಕ್ಷರದಿಂದ ಪ್ರಾರಂಭವಾಗುವ ಪಶ್ಚಿಮ್ ಬಂಗಾ ಹೆಸರಿನಿಂದ ರಾಜ್ಯಕ್ಕೆ ಮುಂಚಿತವಾಗಿ ಆದ್ಯತೆ ದೊರೆಯಲಿದೆ ಎಂಬುದು ರಾಜ್ಯ ಸರ್ಕಾರದ ಪ್ರಮುಖ ವಾದವಾಗಿದೆ.
ಇದನ್ನೂ ಓದಿ: ‘ಈ ಜನಾದೇಶ ಹೊಸ ಬಲ ತುಂಬಿದೆ’; ಬಂಗಾಳ, ಅಸ್ಸಾಂ ಉಪಚುನಾವಣೆಯ ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ
ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆ:
ಬಂಗಾಳಿ ಭಾಷೆಯಲ್ಲಿ ರಾಜ್ಯವನ್ನು ಮೊದಲಿನಿಂದಲೂ ‘ಪಶ್ಚಿಮ ಬಂಗ’ ಎಂದೇ ಕರೆಯಲಾಗುತ್ತದೆ. ಹೀಗಾಗಿ ಎಲ್ಲಾ ಭಾಷೆಗಳಲ್ಲೂ ಒಂದೇ ಹೆಸರಿರಬೇಕು ಎಂಬುದು ರಾಜ್ಯದ ಆಶಯವಾಗಿದೆ. 2011ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ತಕ್ಷಣ, ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಪಶ್ಚಿಮ ಬಂಗ’ ಎಂದು ಬದಲಾಯಿಸಲು ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿದ್ದರು; ಆದರೆ ಅದು ಅಂಗೀಕಾರವಾಗಿರಲಿಲ್ಲ.
#WATCH | Kolkata: West Bengal CM Suvendu Adhikari says, “In English, too, West Bengal will be ‘Paschim Banga’. ‘Paschim Banga’—it must be written exactly as is. We are bringing a resolution to the Legislative Assembly on the 9th; following that, it will go to the Government of India and then to Parliament. The Cabinet has given its approval today, and we will move the resolution in the Legislative Assembly on the 9th. This is a matter of history—the history surrounding the formation of West Bengal, which took place in 1947. This change is something that ought to happen. Instead of ‘West Bengal’, it will be ‘Paschim Banga’.”
— ANI (@ANI) November 23, 2026
2016 ಮತ್ತು 2018ರಲ್ಲಿ ರಾಜ್ಯದ ಹೆಸರನ್ನು ಕೇವಲ ‘ಬಾಂಗ್ಲಾ’ ಎಂದು ಬದಲಾಯಿಸಲು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ನೆರೆಯ ರಾಷ್ಟ್ರ ‘ಬಾಂಗ್ಲಾದೇಶ’ದ ಹೆಸರಿಗೆ ಇದು ತೀರಾ ಸಾಮ್ಯತೆ ಹೊಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಇದೀಗ ಮತ್ತೆ ಎಲ್ಲಾ ಭಾಷೆಗಳಲ್ಲಿ ‘ಪಶ್ಚಿಮ ಬಂಗ’ ಎಂದು ಮರುನಾಮಕರಣ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಇದನ್ನೂ ಓದಿ: ಎಸ್ಐಆರ್ ವಿವಾದ; ಬಿಹಾರ, ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಆಕ್ಷೇಪಣೆ ಸಲ್ಲಿಸದ ಕಾಂಗ್ರೆಸ್!
ಸಂವಿಧಾನಿಕ ಪ್ರಕ್ರಿಯೆ ಹೇಗಿರುತ್ತದೆ?:
ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸಲು ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆಯೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮಸೂದೆಯನ್ನು ಮಂಡಿಸಿ ಅಂಗೀಕರಿಸಬೇಕು ಮತ್ತು ರಾಷ್ಟ್ರಪತಿಗಳ ಅಂಕಿತ ಪಡೆಯಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಬೀಳಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




