AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಭಾರತದ ಶಕ್ತಿ ಹೆಚ್ಚಳ; ಹೂಡಿಕೆಯಲ್ಲಿ ಚೀನಾ ಮೀರಿಸಿದ ಭಾರತ; ನಾಯಕತ್ವದಲ್ಲಿ ಮೋದಿ ನಂ. 2

ಆಸ್ಟ್ರೇಲಿಯಾದ ಲೊವಿ ಇನ್ಸ್​ಟಿಟ್ಯೂಟ್​ನ ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಭಾರತ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಅಮೆರಿಕ ಮತ್ತು ಚೀನಾ ಮೊದಲೆರಡು ಸ್ಥಾನ ಹೊಂದಿವೆ. ಹೂಡಿಕೆ ಆಕರ್ಷಣೆಯಲ್ಲಿ ಚೀನಾವನ್ನು ಭಾರತ ಮೀರಿಸಿ, ಅಮೆರಿಕದ ನಂತರ 2ನೇ ಸ್ಥಾನ ಪಡೆದಿದೆ. ಸಶಸ್ತ್ರ ಪಡೆ ಮತ್ತು ಭವಿಷ್ಯ ಕಾರ್ಮಿಕ ಶಕ್ತಿಯ ಸೂಚಕದಲ್ಲಿ ಭಾರತವು ಏಷ್ಯಾದ ನಂಬರ್ ಒನ್ ಶಕ್ತಿ ಎನಿಸಿದೆ.

ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಭಾರತದ ಶಕ್ತಿ ಹೆಚ್ಚಳ; ಹೂಡಿಕೆಯಲ್ಲಿ ಚೀನಾ ಮೀರಿಸಿದ ಭಾರತ; ನಾಯಕತ್ವದಲ್ಲಿ ಮೋದಿ ನಂ. 2
ಭಾರತದ ನಕ್ಷೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2026 | 3:40 PM

Share

ನವದೆಹಲಿ, ನವೆಂಬರ್ 23: ಏಷ್ಯಾದ ಪ್ರಭಾವಿ ದೇಶಗಳ ಸಾಲಿನಲ್ಲಿ ಭಾರತ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಲೋವಿ ಇನ್ಸ್​ಟಿಟ್ಯೂಟ್ (Lowy Institute) ಪ್ರತೀ ವರ್ಷ ಪ್ರಕಟಿಸುವ ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ (Asia Power Index 2026) ಭಾರತ ಏಷ್ಯಾದಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಏಷ್ಯಾದ ಅತ್ಯಂತ ಪ್ರಭಾವಿ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ, ಚೀನಾ ನಂತರದ ಸ್ಥಾನ ಭಾರತದ್ದಾಗಿದೆ. ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಕಳೆದ ಬಾರಿ 40 ಅಂಕ ಹೊಂದಿದ್ದ ಭಾರತ ಈ ಬಾರಿ 0.5 ಅಂಕ ವೃದ್ಧಿಸಿಕೊಂಡು 40.5 ಅಂಕ ಹೊಂದಿದೆ.

ಏಷ್ಯಾ ಪವರ್ ಇಂಡೆಕ್ಸ್ 2026 ನಲ್ಲಿ ಟಾಪ್-10 ದೇಶಗಳು

  1. ಅಮೆರಿಕ: 78.9 ಅಂಕಗಳು
  2. ಚೀನಾ: 73.6 ಅಂಕಗಳು
  3. ಭಾರತ: 40.5 ಅಂಕಗಳು
  4. ಜಪಾನ್: 38.6 ಅಂಕಗಳು
  5. ರಷ್ಯಾ: 32.2 ಅಂಕಗಳು
  6. ಆಸ್ಟ್ರೇಲಿಯಾ: 31.7 ಅಂಕಗಳು
  7. ಸೌತ್ ಕೊರಿಯಾ: 31 ಅಂಕಗಳು
  8. ಸಿಂಗಾಪುರ್: 26.9 ಅಂಕಗಳು
  9. ಇಂಡೋನೇಷ್ಯಾ: 21.7 ಅಂಕಗಳು
  10. ಮಲೇಷ್ಯಾ: 20.5 ಅಂಕಗಳು

ಇಲ್ಲಿ ಅಮೆರಿಕ ಮತ್ತು ಚೀನಾ ದೇಶಗಳು ಏಷ್ಯಾದಲ್ಲಿ ಸೂಪರ್ ಪವರ್ ವಿಭಾಗಕ್ಕೆ ಸೇರುತ್ತವೆ. ಭಾರತವು ಪ್ರಮುಖ ಶಕ್ತಿ ಎನಿಸಿದೆ. ಈ ಪ್ರಮುಖ ಶಕ್ತಿ ವಿಭಾಗದಲ್ಲಿ ಭಾರತ ಮಾತ್ರವೇ ಇರೋದು.

ಇದನ್ನೂ ಓದಿ: ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದ ಡಿಸೆಂಬರ್ 16ಕ್ಕೆ ಸಹಿ ಸಾಧ್ಯತೆ: ವರದಿ

ಹೂಡಿಕೆ ಆಕರ್ಷಣೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ಹೂಡಿಕೆ ಆಕರ್ಷಣೆ ಸೂಚಕದಲ್ಲಿ ಚೀನಾವನ್ನು ಭಾರತ ಮೀರಿಸಿ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಮೊದಲ ಸ್ಥಾನ ಹೊಂದಿದೆ. 2016ರಿಂದ 2025ರವರೆಗೆ ಯಾವ ದೇಶಕ್ಕೆ ವಿದೇಶೀ ಬಂಡವಾಳ ಹೂಡಿಕೆ ಹರಿದುಬಂದಿದೆ ಎಂಬುದರ ಮೇಲೆ ಈ ಪಟ್ಟಿ ಮಾಡಲಾಗಿದೆ. ಭಾರತಕ್ಕೆ ಈ ಅವಧಿಯಲ್ಲಿ 581 ಬಿಲಿಯನ್ ಡಾಲರ್ ಎಫ್​ಡಿಐ ಬಂದರೆ, ಚೀನಾ 506 ಬಿಲಿಯನ್ ಡಾಲರ್ ಪಡೆದಿದೆ.

ಸಶಸ್ತ್ರ ಪಡೆಯಲ್ಲಿ ಭಾರತ ನಂಬರ್ ಒನ್

ಲೋವಿ ಇನ್ಸ್​ಟಿಟ್ಯೂಟ್​ನ ಈ ಇಂಡೆಕ್ಸ್​ನಲ್ಲಿ ಏಷ್ಯನ್ ರಾಷ್ಟ್ರಗಳ ಸಶಸ್ತ್ರ ಪಡೆಗಳ ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ಭಾರತ ನೂರಕ್ಕೆ ನೂರು ಅಂಕ ಪಡೆದು ಅಗ್ರಸ್ಥಾನ ಪಡೆದಿದೆ. ಚೀನಾ ಮತ್ತು ಅಮೆರಿಕ ಕ್ರಮವಾಗಿ 85.3 ಮತ್ತು 64.8 ಅಂಕಗಳನ್ನು ಪಡೆದು ಟಾಪ್-3 ನಲ್ಲಿ ಇವೆ.

ಗಮನಿಸಬೇಕಾದ ಸಂಗತಿ ಎಂದರೆ, ಈ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿ ಇದೆ ಎಂದರೆ ಅದರ ಮಿಲಿಟರಿ ಶಕ್ತಿ ಎಲ್ಲರಿಗಿಂತ ಬಲಿಷ್ಠವಾದುದು ಎಂದರ್ಥವಲ್ಲ. ಮಿಲಿಟರಿ ಸಿಬ್ಬಂದಿ, ಸನ್ನದ್ಧತೆ ಮತ್ತು ಸಂಘಟನೆಯ ಬಲ ಇವುಗಳನ್ನು ಮಾಪನ ಮಾಡಿ ಶ್ರೇಯಾಂಕ ನೀಡಲಾಗಿದೆ.

ಭವಿಷ್ಯದ ಕಾರ್ಮಿಕ ಶಕ್ತಿಯಲ್ಲಿ ಭಾರತ ನಂಬರ್ ಒನ್

2050ರವರೆಗೆ ಲಭ್ಯ ಇರಬಹುದಾದ ಮಾನವ ಸಂಪನ್ಮೂಲ ಸೂಚಕದಲ್ಲಿ ಭಾರತ ನೂರಕ್ಕೆ ನೂರು ಅಂಕ ಪಡೆದು ಮೊದಲ ಸ್ಥಾನ ಪಡೆದಿದೆ. ಮುಂದಿನ ಕೆಲ ದಶಕಗಳ ಕಾಲ ಭಾರತದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ದುಡಿಯುವ ವಯಸ್ಸಿನ ಜನರು ಇರಲಿದ್ದಾರೆ. ಆರ್ಥಿಕ ಬೆಳವಣಿಗೆಗೆ ಇವರ ಕೊಡುಗೆ ಮಹತ್ತರವಾಗಿರಲಿದೆ. ಈ ಕಾರಣದಿಂದ ಭಾರತಕ್ಕೆ ಈ ಸೂಚಕದಲ್ಲಿ ಮೊದಲ ಸ್ಥಾನ ಸಿಕ್ಕಿದೆ.

ಏಷ್ಯಾ ನಾಯಕತ್ವ ಪಟ್ಟಿಯಲ್ಲಿ 5ರಿಂದ 2ನೇ ಸ್ಥಾನಕ್ಕೆ ಜಿಗಿದ ನರೇಂದ್ರ ಮೋದಿ

ಪ್ರಾದೇಶಿಕ ನಾಯಕತ್ವ ಶ್ರೇಯಾಂಕದಲ್ಲಿ ಲೋವಿ ಇನ್ಸ್​ಟಿಟ್ಯೂಟ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವನ್ನು ಗುರುತಿಸಿದೆ. ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಅವರ ಬಳಿಕ ಮೋದಿ ಅವರು ಏಷ್ಯಾದ ಅತ್ಯಂತ ಪ್ರಭಾವಿ ನಾಯಕರೆನಿಸಿದ್ದಾರೆ.

ಆದರೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಲ್ಲಿ ಭಾರತದ ರಾಜತಾಂತ್ರಿಕ ಪಾತ್ರ ಬಹಳ ಸೀಮಿತವಾಗಿರುವುದರಿಂದ ಮೋದಿ ಅವರ ಜಾಗತಿಕ ನಾಯಕತ್ವದ ಆಕಾಂಕ್ಷೆಗೆ ಹಿನ್ನಡೆಯಾಗಿರುವುದನ್ನು ಈ ವರದಿಯಲ್ಲಿ ಗಮನಿಸಲಾಗಿದೆ.

ಇದನ್ನೂ ಓದಿ: ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ

ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಎಂಟು ಮಾಪನಗಳು, 131 ಸೂಚಕಗಳು

ಲೋವಿ ಇನ್ಸ್​ಟಿಟ್ಯೂಟ್​ನ ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಎಂಟು ಮಾಪನಗಳನ್ನು ಬಳಸಲಾಗಿದೆ. 131 ಸೂಚಕಗಳನ್ನು ರೂಪಿಸಲಾಗಿದೆ. ಈ ಎಂಟು ಮಾಪನಗಳು ಈ ಕೆಳಕಂಡಂತಿವೆ.

  1. ಆರ್ಥಿಕ ಸಾಮರ್ಥ್ಯ
  2. ಮಿಲಿಟರಿ ಸಾಮರ್ಥ್ಯ
  3. ಪ್ರತಿರೋಧ ಶಕ್ತಿ
  4. ಭವಿಷ್ಯ ಸಂಪನ್ಮೂಲಗಳು
  5. ಆರ್ಥಿಕ ಸಂಬಂಧಗಳು
  6. ಡಿಫೆನ್ಸ್ ನೆಟ್ವರ್ಕ್
  7. ರಾಜತಾಂತ್ರಿಕ ಪ್ರಭಾವ
  8. ಸಾಂಸ್ಕೃತಿಕ ಪ್ರಭಾವ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More