ಅಡುಗೆಮನೆ ಹೊಗೆಮುಕ್ತವಾಯಿತು, ಬೀದಿಯಿಂದ ಹೊಗೆ ತೆರವುಗೊಳಿಸುವವರು ಯಾರು?
Santosh Nair's article in 'Your India' series: ಭಾರತದಲ್ಲಿ ವಾಯುಮಾಲಿನ್ಯ ತೀವ್ರ ಆರೋಗ್ಯ ಅಪಾಯವಾಗಿದೆ. 2019ರಲ್ಲಿ 16.7 ಲಕ್ಷ ಸಾವುಗಳಿಗೆ ಇದು ಕಾರಣವಾಗಿದೆ, ಆರ್ಥಿಕತೆಗೆ ಭಾರಿ ನಷ್ಟ ಉಂಟುಮಾಡಿದೆ. ಒಳಾಂಗಣ ವಾಯುಮಾಲಿನ್ಯ ಕಡಿಮೆಯಾಗಿದ್ದರೂ, ಹೊರಾಂಗಣ ಮಾಲಿನ್ಯ ದ್ವಿಗುಣಗೊಂಡಿದೆ. ಮಕ್ಕಳು, ವೃದ್ಧರು, ಕಾರ್ಮಿಕರು ಹೆಚ್ಚು ಅಪಾಯದಲ್ಲಿದ್ದಾರೆ. ಮಾಲಿನ್ಯವನ್ನು 'ಋತು' ಎಂದು ಭಾವಿಸುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಜ್ಜಿ ಚಿಕ್ಕ ವಯಸ್ಸಿನವಳಿದ್ದಾಗ, ಅವಳ ಮನೆಯ ಅತ್ಯಂತ ಅಪಾಯಕಾರಿ ಕೊಠಡಿ ಎಂದರೆ ಅದು ಅಡುಗೆಮನೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮಣ್ಣಿನ ಒಲೆಯ ಮುಂದೆ ಕುಳಿತು ಅದಕ್ಕೆ ಕಟ್ಟಿಗೆ, ಬೆರಣಿ ಮತ್ತು ಒಣ ಕಡ್ಡಿಗಳನ್ನು ಹಾಕುತ್ತಿದ್ದಳು; ಅವಳ ಪುಟ್ಟ ಮಗು ಯಾವಾಗಲೂ ಅವಳ ಬಳಿಯೇ ಇರುತ್ತಿತ್ತು. ಕೊಠಡಿ ಹೊಗೆಯಿಂದ ತುಂಬಿಹೋಗುತ್ತಿತ್ತು. ಅವಳ ಕಣ್ಣುಗಳಿಂದ ನೀರು ಸುರಿಯುತ್ತಿತ್ತು. ಸೀರೆಯ ಸೆರಗಿನೊಳಗೆ ಕೆಮ್ಮುತ್ತಲೇ ಅವಳ ಅಡುಗೆ ಮುಂದುವರಿಯುತ್ತಿತ್ತು. ಇದು ತುರ್ತುಪರಿಸ್ಥಿತಿ ಎಂದು ಯಾರಿಗೂ ಅನಿಸುತ್ತಿರಲಿಲ್ಲ. ಅಡುಗೆ ಮಾಡುವ ವಿಧಾನವೇ ಹಾಗಿತ್ತು. ಇಂದು ಅಜ್ಜಿ ಗ್ಯಾಸ್ ಸ್ಟೌವ್‌ನಲ್ಲಿ ಅಡುಗೆ ಮಾಡುತ್ತಾಳೆ. ಅವಳ ಅಡುಗೆಮನೆ ಸ್ವಚ್ಛವಾಗಿದೆ. ಅವರ ಮೊಮ್ಮಗಳಾದ ಅನು ವಯಸ್ಸು 9 ವರ್ಷ. ಈ ಹುಡುಗೆ ನವೆಂಬರ್ನಲ್ಲಿ ರಸ್ತೆಯಲ್ಲಿ ನಡೆದು ಶಾಲೆ ಹೋಗುವಾಗ ಕೆಮ್ಮುತ್ತಾಳೆ. ಇದಕ್ಕೆ ಹವಾಮಾನ ಕಾರಣ ಎಂದು ಕುಟುಂಬದವರು ಹೇಳುತ್ತಾರೆ.
‘ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್’ (The Lancet Planetary Health) ನಿಯತಕಾಲಿಕೆಯಲ್ಲಿ ಪ್ರಕಟವಾದ, ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಯೋಜನೆಯನ್ನು ಆಧರಿಸಿದ ಮತ್ತು ಭಾರತದ ಪ್ರತಿಯೊಂದು ರಾಜ್ಯವನ್ನೂ ಒಳಗೊಂಡ ಬೃಹತ್ ಅಧ್ಯಯನವು, ಅಜ್ಜಿಯ ಕಾಲದಿಂದ ಆ ಸ್ಥಿತಿಯಲ್ಲಿ ಏನಾಗಿದೆ ಎಂಬುದನ್ನು ತೋರಿಸುತ್ತದೆ. ಇದರ ಉತ್ತರವು ಹೆಚ್ಚಿನವರ ನಿರೀಕ್ಷೆಗಿಂತ ಹೆಚ್ಚು ಆಶ್ಚರ್ಯಕರವಾಗಿದೆ.
ಇಡೀ ಸಮಸ್ಯೆಯ ಗಾತ್ರದಿಂದ ಆರಂಭಿಸೋಣ. 2019ರಲ್ಲಿ ವಾಯುಮಾಲಿನ್ಯವು ಸುಮಾರು 16.7 ಲಕ್ಷ ಸಾವುಗಳಿಗೆ ಅಥವಾ 1.67 ದಶಲಕ್ಷ ಜನರ ಸಾವಿಗೆ ಕಾರಣ ಎಂದು ಅಧ್ಯಯನ ಕಂಡುಕೊಂಡಿದೆ. ಅದು ಆ ವರ್ಷ ದೇಶದಲ್ಲಿ ಸಂಭವಿಸಿದ ಎಲ್ಲಾ ಸಾವುಗಳ ಶೇಕಡಾ 17.8ರಷ್ಟಾಗಿತ್ತು. ಅಂದರೆ ಸುಮಾರು ಆರರಲ್ಲಿ ಒಂದು ಸಾವು ವಾಯುಮಾಲಿನ್ಯದಿಂದ ಆಗಿದೆ. ಇಲ್ಲಿ ಒಂದು ಎಚ್ಚರಿಕೆ ಅಗತ್ಯವಿದೆ. ಇವು ಮಾದರಿಗಳಿಂದ (models) ರೂಪಿಸಿದ ಅಂದಾಜುಗಳೇ ಹೊರತು ಮರಣ ಪ್ರಮಾಣಪತ್ರಗಳ ಎಣಿಕೆಯಲ್ಲ. ಯಾಕೆಂದರೆ ಯಾರೂ “ಗಾಳಿಯಿಂದ ಸತ್ತರು” ಎಂದು ಪ್ರಮಾಣೀಕರಿಸಲ್ಪಡುವುದಿಲ್ಲ. ಮಾಲಿನ್ಯವು ಒಂದೇ ಕೆಲಸ ಮಾಡುವುದು ಅಪರೂಪ. ಅದು ದುರ್ಬಲ ಹೃದಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಅನಾರೋಗ್ಯಪೀಡಿತ ಶ್ವಾಸಕೋಶವನ್ನು ಇನ್ನಷ್ಟು ಅಸ್ವಸ್ಥಗೊಳಿಸುತ್ತದೆ ಮತ್ತು ಚಿಕ್ಕ ಮಗುವಿನ ಉಸಿರಾಟವನ್ನು ಇನ್ನಷ್ಟು ಭಾರವಾಗಿಸುತ್ತದೆ. ಹಾಗೂ ಸ್ವಚ್ಛ ಪ್ರದೇಶಗಳಿಗೆ ಹೋಲಿಸಿದರೆ ಕಲುಷಿತ ಪ್ರದೇಶಗಳಲ್ಲಿ ಎಷ್ಟು ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂಬುದನ್ನು ಸಂಶೋಧಕರು ಲೆಕ್ಕ ಹಾಕುತ್ತಾರೆ. ಇತರ ಅಧ್ಯಯನಗಳು ಸ್ವಲ್ಪ ಭಿನ್ನವಾದ ಸಂಖ್ಯೆಗಳನ್ನು ನೀಡಬಹುದು. ವಿಜ್ಞಾನ ಸಾಗುವ ದಾರಿಯೇ ಹಾಗೆ. ಆದರೆ ಪುರಾವೆಗಳ ದಿಕ್ಕಿನ ಬಗ್ಗೆ ಯಾವುದೇ ಸಂದೇಹವಿಲ್ಲ. ಅಧ್ಯಯನವು ಇದಕ್ಕೆ ಬೆಲೆಯನ್ನೂ ಕಟ್ಟಿದೆ: 2019ರಲ್ಲಿ ಸುಮಾರು 36.8 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಉತ್ಪಾದನೆ ನಷ್ಟವಾಗಿದೆ. ಇದು ದೇಶದ ಜಿಡಿಪಿಯ ಶೇಕಡಾ 1.36ರಷ್ಟಿದೆ, ಮತ್ತು ಆರೋಗ್ಯ ರಕ್ಷಣೆಗಾಗಿ ಸುಮಾರು 12 ಶತಕೋಟಿ ಡಾಲರ್ ಹೆಚ್ಚು ಖರ್ಚಾಗಿದೆ.
ಇದನ್ನೂ ಓದಿ: ಭಾರತೀಯ ನಗರಗಳ ಸಂಚಾರ ಸಮಸ್ಯೆ; ವಾಹನಗಳ ದೃಷ್ಟಿಯಲ್ಲಿ ನಿರ್ಮಾಣವಾದ ನಗರಗಳಲ್ಲಿ ಪಾದಚಾರಿಗಳಿಂದಲೇ ಹೆಚ್ಚು ಸಂಚಾರ
ಸಮಸ್ಯೆಯು ಹೇಗೆ ವಿಭಜನೆಯಾಗಿದೆ ಎಂಬುದರಲ್ಲೇ ಹೆಚ್ಚು ಆಸಕ್ತಿದಾಯಕ ಸಂಗತಿ ಅಡಗಿದೆ. ಎರಡು ಬಗೆಯ ಕಲುಷಿತ ಗಾಳಿ ಇವೆ. ಒಂದು ಹೊರಾಂಗಣ ಗಾಳಿ: ವಾಹನಗಳು, ಕಾರ್ಖಾನೆಗಳು, ಧೂಳು, ಬೆಳೆ ತ್ಯಾಜ್ಯ ಸುಡುವಿಕೆ ಮತ್ತು ವಿದ್ಯುತ್ ಸ್ಥಾವರಗಳಿಂದ ಬರುವಂತದ್ದು. ಮತ್ತೊಂದು ಒಳಾಂಗಣ ಗಾಳಿ: ಕಟ್ಟಿಗೆ, ಬೆರಣಿ ಅಥವಾ ಬೆಳೆ ತ್ಯಾಜ್ಯದಿಂದ ಅಡುಗೆ ಮಾಡುವುದರಿಂದ ಬರುವಂತದ್ದು. 1990 ಮತ್ತು 2019ರ ನಡುವೆ, ಮನೆಯೊಳಗಿನ ವಾಯುಮಾಲಿನ್ಯದಿಂದ ಉಂಟಾಗುವ ಸಾವುಗಳ ದರವು ಶೇಕಡಾ 64.2ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ಕಂಡುಕೊಂಡಿದೆ. ಅದು ನಿಜವಾದ ಸಾಧನೆಯಾಗಿದೆ. ಹೆಚ್ಚು ಮನೆಗಳು ಈಗ ಸ್ವಚ್ಛವಾದ ಇಂಧನದಲ್ಲಿ ಅಡುಗೆ ಮಾಡುವುದರಿಂದ ಕಡಿಮೆ ಮಹಿಳೆಯರು ಮತ್ತು ಮಕ್ಕಳು ತಮ್ಮ ದಿನಗಳನ್ನು ಹೊಗೆಯ ಮೋಡದೊಳಗೆ ಕಳೆಯುತ್ತಿರುವುದು ಇದಕ್ಕೆ ಸಂಭವನೀಯ ಕಾರಣವಾಗಿದೆ. ಆದರೆ ಅದೇ ವರ್ಷಗಳಲ್ಲಿ, ಹೊರಾಂಗಣ ಗಾಳಿಯಲ್ಲಿನ ಸೂಕ್ಷ್ಮ ಕಣಗಳಿಂದ (fine particles) ಉಂಟಾಗುವ ಸಾವಿನ ದರವು ಶೇಕಡಾ 115.3ರಷ್ಟು, ಅಂದರೆ ದುಪ್ಪಟ್ಟಿಗಿಂತ ಹೆಚ್ಚು ಏರಿದೆ. ಹೊರಾಂಗಣ ಓಝೋನ್‌ನಿಂದ ಇದು ಶೇಕಡಾ 139.2ರಷ್ಟು ಹೆಚ್ಚಾಗಿದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹೊಗೆ ಕಣ್ಮರೆಯಾಗಲಿಲ್ಲ. ಅದು ಸ್ಥಳ ಬದಲಾಯಿಸಿದೆ. ಹೆಚ್ಚಾಗಿ ಬಡ ಗ್ರಾಮೀಣ ಮಹಿಳೆಯರ ಮೇಲೆ ಬೀಳುತ್ತಿದ್ದ ಅಪಾಯವು ಕುಗ್ಗಿದೆ. ಆದರೆ, ಹೊರಗೆ ಕಾಲಿಡುವ ಪ್ರತಿಯೊಬ್ಬರ ಮೇಲೆ ಬೀಳುವ ಮತ್ತೊಂದು ಅಪಾಯವು ಬೆಳೆದಿದೆ. ಒಲೆಯ ಮುಂದೆ ನಿಂತಿದ್ದ ವ್ಯಕ್ತಿಗೆ ಹಿಂದೆ ಹಾನಿ ಮಾಡುತ್ತಿದ್ದ ಗಾಳಿಯು ಈಗ ಇಡೀ ನೆರೆಹೊರೆಗೆ ಹಾನಿ ಮಾಡುತ್ತಿದೆ. ಯಾರು ಉಸಿರಾಡುತ್ತಿದ್ದಾರೆ ಎಂಬುದನ್ನು ಅದು ನೋಡುವುದೂ ಇಲ್ಲ.
ಅದು ಎಲ್ಲರಿಗೂ ಸಮಾನವಾಗಿ ಹಾನಿ ಮಾಡುತ್ತದೆ ಎಂದರ್ಥವಲ್ಲ. ದಿನವಿಡೀ ಸಂಚಾರ ದಟ್ಟಣೆಯಲ್ಲಿ ಇರುವ ಡೆಲಿವರಿ ರೈಡರ್, ಕಟ್ಟಡ ಕಾರ್ಮಿಕ, ಬೀದಿಬದಿ ವ್ಯಾಪಾರಿ, ವೃದ್ಧ ಮತ್ತು ಚಿಕ್ಕ ಮಗು ಇವರುಗಳು ಹೆಚ್ಚು ರೀತಿಯಲ್ಲಿ ತೊಂದರೆ ಅನುಭವಿಸುತ್ತಾರೆ. ಆರ್ಥಿಕವಾಗಿ ಸಬಲವಾಗಿರುವ ಕುಟುಂಬವು ಏರ್ ಪ್ಯೂರಿಫೈಯರ್ ಕೊಂಡು ಕಿಟಕಿಗಳನ್ನು ಮುಚ್ಚಿಟ್ಟುಕೊಳ್ಳಬಹುದು. ಚಹಾ ಮಾರುವವನು ರಸ್ತೆಯನ್ನು ಮುಚ್ಚಲು ಸಾಧ್ಯವಿಲ್ಲ. ಸಮಸ್ಯೆಯು ಎಲ್ಲೆಡೆ ಒಂದೇ ರೀತಿ ಇಲ್ಲದ ಕಾರಣ ಅಧ್ಯಯನವು ರಾಜ್ಯವಾರು ಪರಿಶೀಲಿಸಿದೆ. ದೊಡ್ಡ ನಗರಗಳಿಗೆ ಚಿಂತೆಯ ವಿಷಯ ಇರುವುದು ವಾಯು ಗುಣಮಟ್ಟವೊಂದೇ ಅಲ್ಲ.
ಇದನ್ನೂ ಓದಿ: ಪ್ರಯಾಣಿಕರಿಂದ ಬರುವ ಹಣಕ್ಕಿಂತ ರೈಲ್ವೆ ಖರ್ಚು ಮಾಡುತ್ತಿರುವುದೇ ಹೆಚ್ಚು
ಇದೆಲ್ಲದರ ನಡುವೆ ಹುದುಗಿಹೋದ ಮನುಷ್ಯ ಗಮನದ ಕುರಿತ ಒಂದು ಗಂಭೀರ ಸಂಗತಿ ಇದೆ. ಆಕಾಶವು ಹಾಲಿನ ಬಣ್ಣಕ್ಕೆ ತಿರುಗಿದ ಮತ್ತು ಬೆಳಿಗ್ಗೆ ಮಗುವೊಂದು ಕೆಮ್ಮಿದ ದಿನಗಳನ್ನು ನಮ್ಮಲ್ಲಿ ಹೆಚ್ಚಿನವರು ಕಂಡಿದ್ದೇವೆ. ಅದನ್ನು “ಋತು” ಎಂದು ಕರೆಯಲು ಕಲಿತಿದ್ದೇವೆ. ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ಒಮ್ಮೆ ನಾವು ಯಾವುದಕ್ಕಾದರೂ ಒಗ್ಗಿಕೊಂಡರೆ, ಅದರ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸುತ್ತೇವೆ. ಅನುವಿನ ತಾಯಿ ಅಸಡ್ಡೆಯ ಸ್ವಭಾವದವಳಲ್ಲ. ಅನುಳ ಕೆಮ್ಮಿಗೆ ಒಂದು ಸಂಖ್ಯೆ ಜೋಡಣೆಯಾಗಿದೆ ಎಂಬುದನ್ನು ಅವಳಿಗೆ ಎಂದಿಗೂ ತೋರಿಸಲಾಗಿಲ್ಲ ಅಷ್ಟೇ.
ಆದರೂ, ಅಜ್ಜಿಗೆ ಅಡುಗೆಮನೆಯಲ್ಲಿದ್ದ ಹೊಗೆ ಚೆನ್ನಾಗಿ ನೆನಪಿದೆ. ಈಗ ಹೊರಗೆ ಇರುವ ಹೊಗೆಯೂ ಅಂಥದ್ದೇ ಎಂದು ಅವಳು ಭಾವಿಸುವುದಿಲ್ಲ. “ನಮ್ಮದು ಮನೆಯಲ್ಲೇ ಇರುತ್ತಿತ್ತು. ನಿಮ್ಮದು ಎಲ್ಲೆಡೆ ಇದೆ” ಎಂಬುದು ಅವಳ ಪ್ರಜ್ಞೆ. ಅವಳು ಒಂದು ರೀತಿಯಲ್ಲಿ ಸರಿ, ಇನ್ನೊಂದು ರೀತಿಯಲ್ಲಿ ತಪ್ಪು. ಹಳೆಯ ಹೊಗೆಯೂ ಒಂದು ಅಪಾಯವೇ ಆಗಿತ್ತು, ಆದರೆ ಅದೊಂದು ಮೌನ ಅಪಾಯವಾಗಿತ್ತು. ಅದು ಮಹಿಳೆಯರಿಗೆ, ಅಡುಗೆಮನೆಗಳಲ್ಲಿ, ಬಾಗಿಲುಗಳ ಹಿಂದೆ ಸಂಭವಿಸುತ್ತಿದ್ದ ಕಾರಣ ಗಮನಕ್ಕೆ ಬರಲು ಹೆಚ್ಚು ಸಮಯ ಹಿಡಿಯಿತು. ಭಾರತದ್ದೇ ಇತಿಹಾಸದ ಪಾಠ ಹೀಗಿದೆ: ದೇಶವು ಏನಾದರೂ ಮಾಡಲು ನಿರ್ಧರಿಸಿದಾಗ, ಹಿಂದೆ ಒಮ್ಮೆ ಸಹಜವೆಂದು ಒಪ್ಪಿಕೊಳ್ಳಲಾಗಿದ್ದ ಅಪಾಯವನ್ನು ತಗ್ಗಿಸಲು ಸಾಧ್ಯ.
ನಾವು ಅಡುಗೆಮನೆಯನ್ನು ಹೊಗೆಮುಕ್ತಗೊಳಿಸಿದೆವು. ಆದರೆ ಬೀದಿಯಿಂದ ಹೊಗೆ ತೆರವುಗೊಳಿಸುವವರು ಯಾರು?
(ಆಧಾರಗಳು: ಭಾರತ ರಾಜ್ಯ ಮಟ್ಟದ ರೋಗ ಹೊರೆ ಉಪಕ್ರಮ (India State-Level Disease Burden Initiative), “ಭಾರತದ ರಾಜ್ಯಗಳಲ್ಲಿ ವಾಯುಮಾಲಿನ್ಯದ ಆರೋಗ್ಯ ಮತ್ತು ಆರ್ಥಿಕ ಪರಿಣಾಮ: ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನ 2019” (Health and economic impact of air pollution in the states of India: the Global Burden of Disease Study 2019), ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ (2021), ಭಾರತದಲ್ಲಿ ವಾಯುಮಾಲಿನ್ಯದ ಕುರಿತ ಬೋಸ್ಟನ್ ಕಾಲೇಜ್ ಪುಟದ ಸಾರಾಂಶದ ಆಧಾರದ ಮೇಲೆ. ಈ ಅಂಕಿಅಂಶಗಳು ಮಾದರಿ ಆಧಾರಿತ ಅಂದಾಜುಗಳೇ ಹೊರತು ಮರಣ ಪ್ರಮಾಣಪತ್ರಗಳ ಎಣಿಕೆಗಳಲ್ಲ. ಅಜ್ಜಿ ಮತ್ತು ಅನು ಕಾಲ್ಪನಿಕ ಪಾತ್ರಗಳು; ಆದರೆ ಸಂಶೋಧನಾ ಫಲಿತಾಂಶಗಳು ನೈಜವಾದವು.)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




