ಬಿಸ್ಲೆರಿ ನೀರಿನ ವಿವಾದಕ್ಕೆ ಕಂಪನಿ ಸ್ಪಷ್ಟನೆ, 14 ತಿಂಗಳ ಹಿಂದಿನ ಪ್ರಕರಣ, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ
ಬಿಸ್ಲೆರಿ ನೀರಿನ ಗುಣಮಟ್ಟದ ಬಗ್ಗೆ ಎಫ್‌ಎಸ್‌ಎಸ್‌ಎಐ ಕಾನೂನು ಕ್ರಮಕ್ಕೆ ಮುಂದಾಗಿದೆ. 14 ತಿಂಗಳ ಹಿಂದಿನ ಮಾದರಿಯಲ್ಲಿ ಬ್ರೋಮೇಟ್ ಮತ್ತು PAHs ಪತ್ತೆಯಾಗಿದ್ದೇ ಇದಕ್ಕೆ ಕಾರಣ. ಬಿಸ್ಲೆರಿ ಇದು ಹಳೆಯ ಪ್ರಕರಣವೆಂದು ಹೇಳಿ, ತನ್ನ ಉತ್ಪನ್ನದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದೆ. ಈ ಪ್ರಕರಣದ ಸಂಪೂರ್ಣ ವಿವರ ಮತ್ತು ಗ್ರಾಹಕರ ಮೇಲಿನ ಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ.

ನವದೆಹಲಿ, ನವೆಂಬರ್ 23: ಬಿಸ್ಲೆರಿ ನೀರಿನ ಬಗ್ಗೆ ದೇಶಾದ್ಯಂತ ಚರ್ಚೆ ಶುರುವಾಗಿದೆ. ನೀರಿನ ಮಾದರಿ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂಬ ವರದಿ ಹೊರಬಿದ್ದ ಬೆನ್ನಲ್ಲೇ ಎಫ್ಎಸ್ಎಸ್ಐ ಕಾನೂನು ಕ್ರಮಕ್ಕೆ ಮುಂದಾಗಿದೆ. ಆದರೆ ಈ ಪ್ರಕರಣ 14 ತಿಂಗಳ ಹಿಂದಿನದ್ದು ಎಂದು ಹೇಳಿರುವ ಬಿಸ್ಲೆರಿ, ತನ್ನ ಉತ್ಪನ್ನದ ಗುಣಮಟ್ಟದ ಬಗ್ಗೆ ಏನು ಸ್ಪಷ್ಟನೆ ನೀಡಿದೆ? ಇಲ್ಲಿದೆ ಮಾಹಿತಿ.
ಈ ಪ್ರಕರಣ ಸುಮಾರು 14 ತಿಂಗಳ ಹಿಂದಿನದ್ದು ಎಂದು ಕಂಪನಿ ಹೇಳಿದೆ. ಕುಡಿಯುವ ನೀರಿನ ಸುರಕ್ಷತೆ ತನ್ನ ಮೊದಲ ಆದ್ಯತೆಯಾಗಿದ್ದು, ಗುಣಮಟ್ಟ ಕಾಪಾಡಲು ಕಟ್ಟುನಿಟ್ಟಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಎಫ್ಎಸ್ಎಸ್ಐ ಜೊತೆ ಸಹಕರಿಸುವುದಾಗಿಯೂ ಬಿಸ್ಲೆರಿ ತಿಳಿಸಿದೆ.
ಬಿಸ್ಲೆರಿ ಕಂಪನಿ ಹೇಳಿದ್ದೇನು?
ಕಂಪನಿಯ ಹೇಳಿಕೆಯ ಪ್ರಕಾರ, ಕಳೆದ ವರ್ಷ ಸೆಪ್ಟೆಂಬರ್ 30ರಂದು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಗೋವಾದಲ್ಲಿರುವ ಬಿಸ್ಲೆರಿ ಘಟಕದಿಂದ ಒಟ್ಟು ಆರು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಈ ಪೈಕಿ ಐದು ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ್ದವು.
ಆದರೆ ಆರನೇ ಮಾದರಿಯ ಆರಂಭಿಕ ಪರೀಕ್ಷೆಯಲ್ಲಿ ಪ್ರತಿ ಲೀಟರ್ ನೀರಿನಲ್ಲಿ 12 ಮೈಕ್ರೋಗ್ರಾಂ ಬ್ರೋಮೇಟ್ ಪತ್ತೆಯಾಗಿತ್ತು. ನಿಗದಿತ ಮಿತಿ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂ ಆಗಿದೆ. ಹೀಗಾಗಿ ಆರಂಭಿಕ ಪರೀಕ್ಷೆಯಲ್ಲಿ ಪ್ರಮಾಣ ಸ್ವಲ್ಪ ಹೆಚ್ಚಾಗಿತ್ತು.
ಈ ಫಲಿತಾಂಶದ ಬಳಿಕ ಕಂಪನಿ ಸ್ವತಂತ್ರವಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಿದ್ದು, ಅದರಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗೆ ಇತ್ತು ಎಂದು ಹೇಳಿದೆ. ಆದರೆ ಎಫ್ಎಸ್ಎಸ್ಐ ಪರೀಕ್ಷೆಯ ಫಲಿತಾಂಶವನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿದ ಬಳಿಕ, ಮಾದರಿಯನ್ನು ಮತ್ತೊಂದು ಉಲ್ಲೇಖಿತ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಪತ್ತೆಯಾಗಿವೆ ಎಂದು ಎಫ್ಎಸ್ಎಸ್ಐ ತಿಳಿಸಿದೆ. ಆ ಪ್ರಯೋಗಾಲಯವೂ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಿದೆ.
ಇದನ್ನೂ ಓದಿ: ಬಿಸ್ಲೇರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ
ಎಫ್ಎಸ್ಎಸ್ಐ ಯಾಕೆ ಕಾನೂನು ಕ್ರಮಕ್ಕೆ ಮುಂದಾಗಿದೆ?
ಎಫ್ಎಸ್ಎಸ್ಐ ಪ್ರಕಾರ, ಬಿಸ್ಲೆರಿ ಘಟಕದಿಂದ ಸಂಗ್ರಹಿಸಿದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿ ಬ್ರೋಮೇಟ್‌ಗೆ ನಿಗದಿಪಡಿಸಿದ ಮಿತಿಯನ್ನು ಮೀರಿತ್ತು. ನಂತರದ ಪ್ರಯೋಗಾಲಯ ಪರೀಕ್ಷೆಯಲ್ಲಿಯೂ PAHs ಪತ್ತೆಯಾಗಿವೆ. ಈ ಕಾರಣಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಬಿಸ್ಲೆರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗಿದೆ ಎಂದರ್ಥವಲ್ಲ. ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಪ್ರಕರಣದ ಬಗ್ಗೆ ನಿರ್ಧಾರವಾಗಲಿದೆ.
ಬ್ರೋಮೇಟ್ ಮತ್ತು PAHs ಎಂದರೇನು?
ಬ್ರೋಮೇಟ್: ನೀರನ್ನು ಶುದ್ಧೀಕರಿಸುವ ಕೆಲವು ಪ್ರಕ್ರಿಯೆಗಳ ವೇಳೆ ಉತ್ಪತ್ತಿಯಾಗಬಹುದಾದ ರಾಸಾಯನಿಕ ಅಂಶ. ಕುಡಿಯುವ ನೀರಿನಲ್ಲಿ ಇದರ ಪ್ರಮಾಣ ಹೆಚ್ಚಾಗದಂತೆ ನಿಯಂತ್ರಣ ಹೇರಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕುಡಿಯುವ ನೀರಿನ ಮಾರ್ಗಸೂಚಿಯಲ್ಲಿಯೂ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂ ಮಿತಿಯನ್ನು ಸೂಚಿಸಲಾಗಿದೆ.
https://t.co/qOBmfxcYj9
— BisleriZone (@BisleriZone) November 23, 2026
PAHs: ಇವು ಹಲವು ರಾಸಾಯನಿಕ ಸಂಯುಕ್ತಗಳ ಗುಂಪು. ಇವುಗಳಲ್ಲಿ ಕೆಲವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಕ್ಯಾನ್ಸರ್ ಅಪಾಯದೊಂದಿಗೆ ಸಂಬಂಧ ಹೊಂದಿವೆ. ಹೀಗಾಗಿ ಕುಡಿಯುವ ನೀರಿನಲ್ಲಿ ಇವು ಪತ್ತೆಯಾಗಿರುವುದು ಆಹಾರ ಸುರಕ್ಷತಾ ಸಂಸ್ಥೆಯ ಆತಂಕಕ್ಕೆ ಕಾರಣವಾಗಿದೆ.
ಗ್ರಾಹಕರು ಆತಂಕಪಡಬೇಕೇ?
ಈ ಪ್ರಕರಣದಲ್ಲಿ ಪರೀಕ್ಷೆಗೆ ಒಳಪಟ್ಟದ್ದು ನಿರ್ದಿಷ್ಟ ಮಾದರಿ.ಎಫ್ಎಸ್ಎಸ್ಐ ಯಾವ ಬ್ಯಾಚ್‌ನ ನೀರನ್ನು ಪರೀಕ್ಷಿಸಿದೆ ಎಂಬ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಅಲ್ಲದೆ, ದೇಶದಾದ್ಯಂತ ಮಾರಾಟವಾಗುತ್ತಿರುವ ಎಲ್ಲಾ ಬಿಸ್ಲೆರಿ ಬಾಟಲಿಗಳು ಅಸುರಕ್ಷಿತ ಎಂದು ಈ ವರದಿಯಿಂದ ತೀರ್ಮಾನಿಸಲು ಸಾಧ್ಯವಿಲ್ಲ. ಎಲ್ಲ ಉತ್ಪನ್ನಗಳಿಗೂ ನಿಷೇಧ ಅಥವಾ ಮಾರುಕಟ್ಟೆಯಿಂದ ಹಿಂಪಡೆಯುವ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿಯೂ ವರದಿಗಳಲ್ಲಿಲ್ಲ.
ಆದರೆ ಕುಡಿಯುವ ನೀರಿನ ಗುಣಮಟ್ಟದ ವಿಚಾರದಲ್ಲಿ ಈ ಪ್ರಕರಣ ಮಹತ್ವ ಪಡೆದಿದೆ. ಕಂಪನಿ ತನ್ನ ಗುಣಮಟ್ಟದ ನಿಯಂತ್ರಣದ ಬಗ್ಗೆ ಸ್ಪಷ್ಟನೆ ನೀಡಿದ್ದರೂ, ಎಫ್ಎಸ್ಎಸ್ಐ ಪ್ರಯೋಗಾಲಯದ ವರದಿ ಮತ್ತು ಮುಂದಿನ ಕಾನೂನು ಪ್ರಕ್ರಿಯೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




