AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂತ್ ಬೇಡವೆಂದರೂ ಡಿಆರ್‌ಎಸ್ ಪಡೆದ ಗಿಲ್; ಖುಷಿಯಲ್ಲಿ ಭಾಂಗ್ರಾ ಡ್ಯಾನ್ಸ್!

ಮೈದಾನದಲ್ಲಿ ನಾಯಕನ ಆತ್ಮವಿಶ್ವಾಸ ಹೇಗಿರಬೇಕು ಎಂಬುದಕ್ಕೆ ಶುಭ್​ಮನ್ ಗಿಲ್ ತಾಜಾ ಉದಾಹರಣೆ ನೀಡಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೀಪರ್ ರಿಷಭ್ ಪಂತ್ ಬೇಡವೆಂದರೂ ಡಿಆರ್‌ಎಸ್ ಪಡೆದು ವಿಕೆಟ್ ಗಿಟ್ಟಿಸಿಕೊಂಡ ಗಿಲ್, ಖುಷಿಯಲ್ಲಿ ಮೈದಾನದಲ್ಲಿ ಭರ್ಜರಿ ಭಾಂಗ್ರಾ ಡ್ಯಾನ್ಸ್ ಮಾಡಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂತ್ ಬೇಡವೆಂದರೂ ಡಿಆರ್‌ಎಸ್ ಪಡೆದ ಗಿಲ್; ಖುಷಿಯಲ್ಲಿ ಭಾಂಗ್ರಾ ಡ್ಯಾನ್ಸ್!
Shubman GillImage Credit source: GettyImages
ಝಾಹಿರ್ ಯೂಸುಫ್
|

Updated on: Nov 23, 2026 | 10:05 AM

Share

ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಅಂತಿಮ ಹಾಗೂ ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅವರ ಚಾಣಾಕ್ಷ ನಿರ್ಧಾರ ಮತ್ತು ಮೈದಾನದಲ್ಲಿ ಅವರು ಮಾಡಿದ ಸಂಭ್ರಮಾಚರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಸ್ಪಷ್ಟತೆ ಇಲ್ಲದಿದ್ದರೂ, ಬೌಲರ್ ಅನ್ಶುಲ್ ಕಂಬೋಜ್ ಮೇಲೆ ನಂಬಿಕೆಯಿಟ್ಟು ಗಿಲ್ ತೆಗೆದುಕೊಂಡ ಡಿಆರ್‌ಎಸ್ (DRS) ಭಾರತಕ್ಕೆ ನಿರ್ಣಾಯಕ ವಿಕೆಟ್ ತಂದುಕೊಟ್ಟಿದೆ. ಈ ಯಶಸ್ಸಿನ ಬೆನ್ನಲ್ಲೇ ಗಿಲ್ ಮೈದಾನದ ಮಧ್ಯೆಯೇ ಭಾಂಗ್ರಾ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ಆ ರೋಚಕ ಕ್ಷಣದಲ್ಲಿ ನಡೆದಿದ್ದೇನು?

ನ್ಯೂಝಿಲೆಂಡ್ ತಂಡದ ಎರಡನೇ ಇನ್ನಿಂಗ್ಸ್‌ನ 77ನೇ ಓವರ್‌ನ ಅಂತಿಮ ಎಸೆತದಲ್ಲಿ ಈ ಘಟನೆ ನಡೆಯಿತು. ವೇಗಿ ಅನ್ಶುಲ್ ಕಂಬೋಜ್ ಎಸೆದ ಚೆಂಡು ಆಫ್-ಸ್ಟಂಪ್‌ನಿಂದ ಹೊರಗಿನಿಂದ ನುಗ್ಗಿತು. ಬ್ಯಾಟರ್ ಟಾಮ್ ಬ್ಲಂಡೆಲ್ ಮುಂದೆ ಬಂದು ಡಿಫೆನ್ಸ್ ಮಾಡಲು ಯತ್ನಿಸಿದಾಗ ಚೆಂಡು ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಕೈಸೇರಿತು. ಬೌಲರ್ ಕಂಬೋಜ್ ಔಟ್‌ಗಾಗಿ ಜೋರಾಗಿ ಮನವಿ ಮಾಡಿದರಾದರೂ, ಅಂಪೈರ್ ನಾಟ್-ಔಟ್ ಎಂದು ತೀರ್ಪು ನೀಡಿದರು.

ಚೆಂಡು ಬ್ಯಾಟ್‌ಗೆ ತಗುಲಿರುವ ಬಗ್ಗೆ ರಿಷಭ್ ಪಂತ್‌ಗೆ ಅಷ್ಟಾಗಿ ಖಚಿತತೆ ಇರಲಿಲ್ಲ. ಆದರೆ, ಸ್ಲಿಪ್‌ನಲ್ಲಿ ನಿಂತಿದ್ದ ನಾಯಕ ಶುಭ್​ಮನ್ ಗಿಲ್ ಅವರಿಗೆ ಬ್ಯಾಟ್‌ನ ಅಂಚಿಗೆ ಚೆಂಡು ತಗುಲಿದ ಸಣ್ಣ ಶಬ್ದ ಕೇಳಿಸಿತ್ತು. ಪಂತ್ ಸಲಹೆಗಾಗಿ ಕಾಯದೆ, ಯುವ ವೇಗಿ ಕಂಬೋಜ್ ಅವರ ಆತ್ಮವಿಶ್ವಾಸವನ್ನು ಬೆಂಬಲಿಸಿದ ಗಿಲ್ ತಕ್ಷಣವೇ ಡಿಆರ್‌ಎಸ್ ರಿವ್ಯೂ ಮೊರೆ ಹೋದರು.

ಗಿಲ್ ಭಾಂಗ್ರಾ ಡ್ಯಾನ್ಸ್:

ಟಿವಿ ರೀಪ್ಲೇ ಮತ್ತು ಸ್ನಿಕೋಮೀಟರ್‌ನಲ್ಲಿ ಚೆಂಡು ಬ್ಲಂಡೆಲ್ ಅವರ ಬ್ಯಾಟ್‌ನ ಅಂಚಿಗೆ ಸವರಿಕೊಂಡು ಹೋಗಿರುವುದು ಸ್ಪಷ್ಟವಾಗಿ ದಾಖಲಾಯಿತು. ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆಯೇ, ಬೃಹತ್ ಪರದೆಯ ಮೇಲೆ ‘ಔಟ್’ ಎಂಬ ಸಂದೇಶ ಕಾಣಿಸಿಕೊಂಡಿತು. ತಮ್ಮ ನಿರ್ಧಾರ ಸರಿಯಾಗಿದ್ದಕ್ಕೆ ಸಂತಸಗೊಂಡ ಶುಭ್​ಮನ್ ಗಿಲ್, ತಕ್ಷಣವೇ ಸ್ಲಿಪ್ ಕಾರ್ಡನ್ ಬಳಿ ನಿಂತು ಭರ್ಜರಿ ಭಾಂಗ್ರಾ ಡ್ಯಾನ್ಸ್ ಮಾಡಿದರು.

ಬಳಿಕ ಓಡಿ ಹೋಗಿ ಅನ್ಶುಲ್ ಕಾಂಬೋಜ್ ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಗಿಲ್ ಸಂಭ್ರಮವನ್ನು ವಿರಾಟ್ ಕೊಹ್ಲಿ ಅವರ ಮೈದಾನದ ಉತ್ಸಾಹಕ್ಕೆ ಹೋಲಿಸುತ್ತಿದ್ದಾರೆ.

ಪಂದ್ಯದ ಸದ್ಯದ ಸ್ಥಿತಿಗತಿ:

  • ನ್ಯೂಝಿಲೆಂಡ್ ಮೊದಲ ಇನಿಂಗ್ಸ್​: 368 ರನ್ಸ್
  • ಭಾರತ ಮೊದಲ ಇನಿಂಗ್ಸ್​: 720/9 ಡಿಕ್ಲೇರ್
  • ನ್ಯೂಝಿಲೆಂಡ್ ದ್ವಿತೀಯ ಇನಿಂಗ್ಸ್​: 206/5 (96)

ಇದನ್ನೂ ಓದಿ: ಹೈಡ್ರಾಮಾ… ಹರ್ಷಿತ್​ ರಾಣಾರನ್ನು ಗುಂಪಾಗಿ ಗುರಿಯಾಗಿಸಿದ ಪಾಕ್ ಆಟಗಾರರು!

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 352 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದ್ದು, ಈ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಐದನೇ ದಿನದಾಟದ ಚಹಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿದೆ. ಇನ್ನುಳಿದ 39 ಓವರ್‌ಗಳಲ್ಲಿ ಈ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ. ಅದರಂತೆ ಟೀಮ್ ಇಂಡಿಯಾಗೆ ಐತಿಹಾಸಿಕ ಗೆಲುವು ಒಲಿಯಲಿದೆಯಾ ಅಥವಾ ನ್ಯೂಝಿಲೆಂಡ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More