ಸಂಸದ ಪಪ್ಪು ಯಾದವ್ ಬೆಂಗಾವಲು ವಾಹನ ಅಪಘಾತ, ಐವರಿಗೆ ಗಾಯ, ಕೂದಲೆಳೆ ಅಂತರದಲ್ಲಿ ಪಾರಾದ ಸಂಸದ
ಬಿಹಾರದ ಕತಿಹಾರ್‌ನಲ್ಲಿ ಸಂಸದ ಪಪ್ಪು ಯಾದವ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ನಿರ್ಮಾಣ ಹಂತದ ಸೇತುವೆ ಬಳಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದಾರೆ, ಆದರೆ ಸಂಸದರು ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ಕಾಮಗಾರಿಯಲ್ಲಿನ ನಿರ್ಲಕ್ಷ್ಯ, ಎಚ್ಚರಿಕೆ ಫಲಕಗಳ ಕೊರತೆಯೇ ಅಪಘಾತಕ್ಕೆ ಕಾರಣ ಎಂದು ಪಪ್ಪು ಯಾದವ್ ಆರೋಪಿಸಿದ್ದಾರೆ, ಇದು ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕತಿಹಾರ್, ನವೆಂಬರ್ 23: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಪೂರ್ಣಿಯಾ ಸಂಸದ ಪಪ್ಪು ಯಾದವ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಭಾನುವಾರ ರಾತ್ರಿ ಕತಿಹಾರ್‌ನಿಂದ ಸಂಹೌಲಿಗೆ ತೆರಳುತ್ತಿದ್ದ ವೇಳೆ ಬೆಲೋರಿ–ಸಂಹೌಲಿ–ಸೋನೈಲಿ–ಸಲ್ಮಾರಿ ಮುಖ್ಯ ರಸ್ತೆಯ ಕುಮ್ಹರಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಸೇತುವೆಯ ಸಮೀಪ ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದು, ಸಂಸದ ಪಪ್ಪು ಯಾದವ್ ಅಪಾಯದಿಂದ ಪಾರಾಗಿದ್ದಾರೆ.
ಭಾನುವಾರ ರಾತ್ರಿ ಸುಮಾರು 10.45ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಸಂಸದರು ತಮ್ಮ ಬೆಂಗಾವಲು ಪಡೆಯೊಂದಿಗೆ ಪ್ರಯಾಣಿಸುತ್ತಿದ್ದಾಗ ಮುಂದೆ ಸಾಗುತ್ತಿದ್ದ ಕತಿಹಾರ್ ಪೊಲೀಸರ ಎಸ್ಕಾರ್ಟ್ ವಾಹನ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಾಳುಗಳ ಕುತ್ತಿಗೆ, ಹಣೆ ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ ಎಂದು ಪಪ್ಪು ಯಾದವ್ ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡ ಸಂಸದ
ಅಪಘಾತದ ಬಗ್ಗೆ ಸ್ವತಃ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಪ್ಪು ಯಾದವ್, ದೇವರ ಕೃಪೆ ಮತ್ತು ಜನರ ಪ್ರಾರ್ಥನೆಯಿಂದ ತಮ್ಮ ತಂಡದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಮಳೆಯ ಕಾರಣ ರಸ್ತೆ ಒದ್ದೆಯಾಗಿತ್ತು. ಒಂದು ವೇಳೆ ಮಣ್ಣು ಗಟ್ಟಿಯಾಗಿದ್ದರೆ ಅಪಘಾತ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿತ್ತು ಎಂದೂ ಅವರು ಹೇಳಿದ್ದಾರೆ.
ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯದ ಆರೋಪ
ಅಪಘಾತಕ್ಕೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿನ ನಿರ್ಲಕ್ಷ್ಯವೇ ಕಾರಣ ಎಂದು ಪಪ್ಪು ಯಾದವ್ ಆರೋಪಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ ರಸ್ತೆಯನ್ನು ಸರಿಯಾಗಿ ದುರಸ್ತಿ ಮಾಡಿಲ್ಲ. ನಿರ್ಮಾಣ ಹಂತದ ಸೇತುವೆ ಬಳಿ ಯಾವುದೇ ಎಚ್ಚರಿಕೆ ಫಲಕಗಳು, ಅಪಾಯ ಸೂಚಕಗಳು ಅಥವಾ ಸುರಕ್ಷತಾ ತಡೆಗೋಡೆಗಳನ್ನು ಅಳವಡಿಸಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ಭಾರತದ ರಸ್ತೆ ಸುರಕ್ಷತಾ ಬಿಕ್ಕಟ್ಟು: ‘ಅಪಘಾತ’ದ ಆಚೆ – ಅಂಕಿಅಂಶಗಳು ಮತ್ತು ಪರಿಹಾರಗಳು
ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಂಪನಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರ, ಕಾರ್ಯಪಾಲಕ ಎಂಜಿನಿಯರ್ ಮತ್ತು ಉಪವಿಭಾಗೀಯ ಅಧಿಕಾರಿಗಳೇ ಈ ನಿರ್ಲಕ್ಷ್ಯಕ್ಕೆ ಹೊಣೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೊಡ್ಡ ಅಪಘಾತವಾದ ಬಳಿಕವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
ನಿರ್ಮಾಣ ಹಂತದ ರಸ್ತೆಗಳಲ್ಲಿ ವಾಹನ ಸವಾರರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಅಪಾಯಕಾರಿ ಎಂದು ಸಂಸದರು ಹೇಳಿದ್ದಾರೆ. ಅಪಾಯದ ಸೂಚನಾ ಫಲಕ, ಸರಿಯಾದ ಮಾರ್ಗ ಬದಲಾವಣೆ ವ್ಯವಸ್ಥೆ ಮತ್ತು ಸುರಕ್ಷತಾ ತಡೆಗೋಡೆಗಳಿಲ್ಲದೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿದ್ದಾರೆ.
‘ದೊಡ್ಡ ಅಪಘಾತ ಸಂಭವಿಸಿದ ನಂತರವೇ ಜವಾಬ್ದಾರಿಯುತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?’ ಎಂದು ಅವರು ಪ್ರಶ್ನಿಸಿದ್ದಾರೆ. ಈ ಘಟನೆ ಕೇವಲ ತಮ್ಮ ಬೆಂಗಾವಲು ಪಡೆಯ ಅಪಘಾತವಲ್ಲ, ಆ ರಸ್ತೆಯಲ್ಲಿ ಸಂಚರಿಸುವ ಸಾಮಾನ್ಯ ಜನರ ಸುರಕ್ಷತೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಹೇಳಿದ್ದಾರೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಅಧಿಕೃತ ತನಿಖೆಯ ವಿವರಗಳು ಇನ್ನೂ ಲಭ್ಯವಾಗಿಲ್ಲ. ಸಂಸದರು ಮಾಡಿರುವ ನಿರ್ಲಕ್ಷ್ಯದ ಆರೋಪಗಳ ಬಗ್ಗೆಯೂ ಸಂಬಂಧಪಟ್ಟ ಇಲಾಖೆಗಳ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




