‘ಐಐಟಿ ಪದವೀಧರರಷ್ಟೇ ಗೌರವ ಐಟಿಐ ವಿದ್ಯಾರ್ಥಿಗಳಿಗೂ ಸಿಗಬೇಕು’: ಕೌಶಲ್ಯಯುತ ಕಾರ್ಮಿಕರ ಮೌಲ್ಯದ ಕುರಿತು ಪ್ರಧಾನಿ ಮೋದಿ ಮಾತು
ಪ್ರಧಾನಿ ಮೋದಿ ಐಟಿಐ ವಿದ್ಯಾರ್ಥಿಗಳಿಗೆ ಐಐಟಿ ವಿದ್ಯಾರ್ಥಿಗಳಷ್ಟೇ ಗೌರವ ನೀಡಬೇಕು ಎಂದು ಕರೆ ನೀಡಿದ್ದಾರೆ. ಸಮಾಜವು ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣದ ಬಗ್ಗೆ ಹೊಂದಿರುವ ಮನೋಭಾವ ಬದಲಾಗಬೇಕು. ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ನುರಿತ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು. ಸಾಂಪ್ರದಿಕ ಪದವಿಗಳಷ್ಟೇ ಐಟಿಐ ತರಬೇತಿಯು ಉದ್ಯೋಗ ಮತ್ತು ವೃತ್ತಿಪರ ಬೆಳವಣಿಗೆಗೆ ಪ್ರಮುಖ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದರು.

ನವದೆಹಲಿ, ನವೆಂಬರ್ 22: ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣದ ಬಗೆಗಿನ ಸಾಮಾಜಿಕ ಮನೋಭಾವ ಬದಲಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಐಟಿಐ (ITI) ವಿದ್ಯಾರ್ಥಿಗಳೂ ಐಐಟಿ (IIT) ವಿದ್ಯಾರ್ಥಿಗಳಷ್ಟೇ ಗೌರವಕ್ಕೆ ಅರ್ಹರು. ಕೈಗಾರಿಕೆಗಳ ದೈನಂದಿನ ಕಾರ್ಯನಿರ್ವಹಣೆಯಲ್ಲಿ ನುರಿತ ತರಬೇತಿ ಪಡೆದವರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಿನ್ನೆ ಶನಿವಾರ ನಡೆದ 5ನೇ ‘ಕೌಶಲ್ಯ ದೀಕ್ಷಾಂತ ಸಮಾರೋಹ’ದಲ್ಲಿ (ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವ) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಮಾಜವು ಸಾಂಪ್ರದಾಯಿಕ ವಿಶ್ವವಿದ್ಯಾಲಯ ಮತ್ತು ಕಾಲೇಜು ಪದವಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಅನೇಕ ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಐಟಿಐ (ITI- Industrial Training Institutes) ಜೊತೆಗಿನ ತಮ್ಮ ನಂಟನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ ಎಂದರು.
ವಿದ್ಯಾರ್ಥಿಯೊಬ್ಬ ಐಟಿಐಗೆ ಸೇರಿದಾಗ ಪೋಷಕರು, ಸ್ನೇಹಿತರು ಮತ್ತು ಸಂಬಂಧಿಕರು ಅದನ್ನು ಗುಟ್ಟಾಗಿಡುವ ಅಥವಾ ಮುಜುಗರಪಡುವ ಪರಿಸ್ಥಿತಿ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅರ್ಧನಾರೀಶ್ವರನ ಚಿತ್ರ ಬಳಸಿ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಕಿರಣ್ ರಿಜಿಜು ತಿರುಗೇಟು
ಐಐಟಿ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಸಮಾನ ಗೌರವ
ಪ್ರಾಯೋಗಿಕ ತರಬೇತಿ ಮತ್ತು ಕೈಯಾರೆ ಮಾಡುವ ಕೌಶಲ್ಯಾಧಾರಿತ ಕೆಲಸಗಳನ್ನು ಕಡಿಮೆ ಮಟ್ಟದ್ದಾಗಿ ನೋಡುವ ಧೋರಣೆ ಬದಲಾಗಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ನುರಿತ ಕಾರ್ಮಿಕರು ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅತ್ಯಗತ್ಯವಾಗಿದ್ದು, ಐಟಿಐ ವಿದ್ಯಾರ್ಥಿಗಳೂ ಐಐಟಿ ವಿದ್ಯಾರ್ಥಿಗಳಷ್ಟೇ ಗೌರವಕ್ಕೆ ಅರ್ಹರು ಎಂದು ಅವರು ಪ್ರತಿಪಾದಿಸಿದರು.
ನುರಿತ ಕಾರ್ಯಪಡೆ ಕೈಗಾರಿಕೆಗಳ ಬೆನ್ನೆಲುಬು
ದೊಡ್ಡ ಕಂಪನಿಗಳ ಬಲವು ಕೇವಲ ಶೈಕ್ಷಣಿಕ ಪದವಿ ಹೊಂದಿರುವ ನೌಕರರಿಗೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ದೈನಂದಿನ ಕಾರ್ಯಾಚರಣೆಯನ್ನು ಸುಗಮವಾಗಿ ನಡೆಸುವ ನುರಿತ ಕಾರ್ಯಪಡೆಯಿಂದಲೂ ಬಂದಿದೆ ಎಂದು ಮೋದಿ ಹೇಳಿದರು. ಕಂಪನಿಯೊಂದರಲ್ಲಿ ವಿಶ್ವವಿದ್ಯಾಲಯ ಪದವಿ ಹೊಂದಿದ ಕೆಲವೇ ಸಿಬ್ಬಂದಿ ಇರಬಹುದು, ಆದರೆ ಅದರ ಕಾರ್ಯಚಟುವಟಿಕೆಗಳನ್ನು ಸರಾಗವಾಗಿ ಮುನ್ನಡೆಸಲು ನೂರಾರು ತರಬೇತಿ ಪಡೆದ ಕಾರ್ಮಿಕರು ಕಾರಣರಾಗಿರುತ್ತಾರೆ. ಐಟಿಐ ತರಬೇತಿ ಪಡೆದವರ ಕೊಡುಗೆಗೆ ವ್ಯಾಪಕ ಮನ್ನಣೆ ದೊರೆಯಬೇಕು ಎಂದು ಅವರು ತಿಳಿಸಿದರು.
ಉದ್ಯೋಗ ಮತ್ತು ವೃತ್ತಿಪರ ದಾರಿ
ಕಾರ್ಯಕ್ರಮವನ್ನು ಆಯೋಜಿಸಿದ್ದ ಕೇಂದ್ರ ಸಚಿವ ಜಯಂತ್ ಚೌಧರಿ ಮತ್ತು ಅವರ ತಂಡವನ್ನು ಅಭಿನಂದಿಸಿದ ಪ್ರಧಾನಿ, ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಶಿಸ್ತನ್ನು ಶ್ಲಾಘಿಸಿದರು. ಉನ್ನತ ಶಿಕ್ಷಣ ಮುಂದುವರಿಸಲು ವಿಫಲರಾದವರಿಗೆ ಇರುವ ಪರ್ಯಾಯ ಮಾರ್ಗವಾಗಿ ಐಟಿಐ ಕೋರ್ಸ್‌ಗಳನ್ನು ನೋಡಬಾರದು; ಬದಲಾಗಿ ಉದ್ಯೋಗ, ತಾಂತ್ರಿಕ ಪರಿಣತಿ ಮತ್ತು ಕೈಗಾರಿಕಾ ವೃತ್ತಿಜೀವನಕ್ಕೆ ಇವು ಪ್ರಮುಖ ಮಾರ್ಗಗಳಾಗಿವೆ ಎಂದು ಅವರು ಹೇಳಿದರು. ಭಾರತದಲ್ಲಿ ನುರಿತ ಕಾರ್ಮಿಕರ ಹೆಚ್ಚುತ್ತಿರುವ ಅಗತ್ಯ ಮತ್ತು ವೃತ್ತಿಪರ ಶಿಕ್ಷಣಕ್ಕೆ ಸಿಗುತ್ತಿರುವ ಸಾಮಾಜಿಕ ಮಾನ್ಯತೆಯ ನಡುವಿನ ಅಂತರವನ್ನು ಈ ಮಾತುಗಳು ಎತ್ತಿ ತೋರಿಸಿದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




