ಭಾರತ-ಪಾಕ್ ನಡುವೆ ಮತ್ತೊಂದು ಕದನಕ್ಕೆ ಕ್ಷಣಗಣನೆ; ಫೈನಲ್ ಲೆಕ್ಕಾಚಾರ ಶುರು
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026ರಲ್ಲಿ ಭಾರತ A ತಂಡ ಪಾಕಿಸ್ತಾನ A ವಿರುದ್ಧ 48 ರನ್‌ಗಳಿಂದ ಸೋತಿದೆ. ಆದರೂ, ನವೆಂಬರ್ 29ರ ಫೈನಲ್‌ನಲ್ಲಿ ಈ ಎರಡು ತಂಡಗಳು ಮತ್ತೆ ಮುಖಾಮುಖಿಯಾಗುವ ಅವಕಾಶವಿದೆ. ಸೆಮಿಫೈನಲ್ ತಲುಪಲು ಭಾರತ A ಯುಎಇ ವಿರುದ್ಧ ಗೆಲ್ಲಬೇಕು. ಪಾಕಿಸ್ತಾನ A ಈಗಾಗಲೇ ಸೆಮಿಫೈನಲ್ ತಲುಪಿದೆ. ಸೆಮಿಫೈನಲ್ ಗೆದ್ದರೆ, ಭಾರತ A ತಂಡಕ್ಕೆ ಫೈನಲ್‌ನಲ್ಲಿ ಪಾಕಿಸ್ತಾನ A ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಸಿಗಲಿದೆ.

ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026ರ ರೋಚಕ ಪಂದ್ಯದಲ್ಲಿ ಭಾರತ ಎ ತಂಡ ಪಾಕಿಸ್ತಾನ ಎ ವಿರುದ್ಧ 48 ರನ್‌ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆಟಗಾರರ ನಡುವಿನ ಮಾತಿನ ಚಕಮಕಿ, ಸ್ಲೆಡ್ಜಿಂಗ್ ಹಾಗೂ ಮೈದಾನದಲ್ಲಿನ ಜಿದ್ದಾಜಿದ್ದಿ ಅಭಿಮಾನಿಗಳ ಗಮನ ಸೆಳೆದಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕದನ ಇಲ್ಲಿಗೇ ಮುಗಿಯುವ ಸಾಧ್ಯತೆಯಿಲ್ಲ. ಟೂರ್ನಿಯ ಫೈನಲ್‌ನಲ್ಲೂ ಈ ಎರಡು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಅವಕಾಶವಿದೆ.
ಮತ್ತೆ ಮುಖಾಮುಖಿ ಯಾವಾಗ?
2026ರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಫೈನಲ್ ಪಂದ್ಯ ನವೆಂಬರ್ 29ರಂದು ದೋಹಾದಲ್ಲಿ ನಡೆಯಲಿದೆ. ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಫೈನಲ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಬಾಂಗ್ಲಾದೇಶ ಎದುರಾದರೆ, ಭಾರತಕ್ಕೆ ಶ್ರೀಲಂಕಾ ಎದುರಾಗುವ ಸಾಧ್ಯತೆಗಳಿವೆ. ಈ ಸುತ್ತಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಗೆಲುವು ಸಾಧಿಸಿದರೆ ಫೈನಲ್ಗೆ ಅರ್ಹತೆ ಪಡೆಯಲಿವೆ. ಇದರಿಂದ ಲೀಗ್ ಹಂತದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶ ಸಿಗಲಿದೆ.
ಭಾರತ ಎ ವಿರುದ್ಧ 48 ರನ್‌ಗಳ ಭರ್ಜರಿ ಗೆಲುವು ದಾಖಲಿಸಿರುವ ಪಾಕಿಸ್ತಾನ ಎ ಈಗಾಗಲೇ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಆದರೆ ಭಾರತ ಎ ತಂಡದ ಸೆಮಿಫೈನಲ್ ಪ್ರವೇಶ ಇನ್ನೂ ಖಚಿತವಾಗಿಲ್ಲ. ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಬೇಕೆಂದರೆ ಮೊದಲು ಯುಎಇ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು. ಜೊತೆಗೆ ಗ್ರೂಪ್ ಬಿ ಅಂಕಪಟ್ಟಿಯಲ್ಲಿನ ಇತರ ಪಂದ್ಯಗಳ ಫಲಿತಾಂಶವೂ ಭಾರತದ ಪಾಲಿಗೆ ಅನುಕೂಲಕರವಾಗಿರಬೇಕು.
ಸೆಮಿಫೈನಲ್ ತಲುಪಲು ಏನು ಮಾಡಬೇಕು?
ಭಾರತ ಎ ತಂಡಕ್ಕೆ ಸೆಮಿಫೈನಲ್ ತಲುಪಲು ಇರುವ ಸರಳ ಮಾರ್ಗವೆಂದರೆ ಯುಎಇ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸುವುದು. ಈ ಪಂದ್ಯದಲ್ಲಿ ಜಯಗಳಿಸಿದರೆ ಭಾರತ ಒಟ್ಟು 4 ಅಂಕಗಳನ್ನು ಪಡೆದು ಅರ್ಹತಾ ಹಾದಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ. ಇದೇ ವೇಳೆ ಪಾಕಿಸ್ತಾನ ಎ ತಂಡ ನೇಪಾಳ ವಿರುದ್ಧ ಗೆಲುವು ಸಾಧಿಸಿದರೆ ಭಾರತಕ್ಕೆ ಸೆಮಿಫೈನಲ್ ಪ್ರವೇಶ ಸುಲಭವಾಗಲಿದೆ.
ಒಂದು ವೇಳೆ ನೇಪಾಳ ತಂಡ ಪಾಕಿಸ್ತಾನ ಎ ವಿರುದ್ಧ ಗೆದ್ದರೆ, ಮೂರು ತಂಡಗಳು ತಲಾ 4 ಅಂಕಗಳನ್ನು ಪಡೆಯುವ ಸಾಧ್ಯತೆಯಿದೆ. ಆಗ ಸೆಮಿಫೈನಲ್ ಪ್ರವೇಶ ನಿರ್ಧರಿಸಲು ನೆಟ್ ರನ್‌ರೇಟ್ ಪ್ರಮುಖ ಪಾತ್ರ ವಹಿಸಲಿದೆ. ಸದ್ಯ ಭಾರತ ಎ ತಂಡ ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಎರಡು ಪಂದ್ಯಗಳಿಂದ 2 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್‌ರೇಟ್ +2.580 ಆಗಿದೆ. ಹೀಗಾಗಿ ಭಾರತಕ್ಕೆ ಸೆಮಿಫೈನಲ್ ತಲುಪುವ ಅವಕಾಶ ಇನ್ನೂ ಉತ್ತಮವಾಗಿಯೇ ಇದೆ.
ತಿಲಕ್ ಶತಕದಿಂದ ತಂಡಕ್ಕೇನು ಲಾಭ? ಮಾಜಿ ಕೋಚ್ ಅಸಮಾಧಾನ
ಪಾಕಿಸ್ತಾನ ವಿರುದ್ಧ ಅನುಭವಿಸಿದ ಸೋಲನ್ನು ಮರೆತು ಯುಎಇ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವುದು ಭಾರತಕ್ಕೆ ಈಗಿನ ಮೊದಲ ಗುರಿಯಾಗಿದೆ. ಸೆಮಿಫೈನಲ್‌ನಲ್ಲಿ ಗೆದ್ದರೆ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮತ್ತೊಮ್ಮೆ ಎದುರಿಸುವ ಅವಕಾಶವೂ ಸಿಗಬಹುದು. ಹೀಗಾಗಿ ಅಭಿಮಾನಿಗಳ ಕಣ್ಣು ಇದೀಗ ಭಾರತದ ಮುಂದಿನ ಪಂದ್ಯದ ಮೇಲಿದೆ.




